ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿಕೆಗಿಂತ ಅಧಿಕ ಮಳೆ: ಕೃಷಿ ಚಟುವಟಿಕೆಗೆ ಹಿನ್ನಡೆ

ಮೆಕ್ಕೆಜೋಳ, ಅಡಿಕೆ ಕಟಾವಿಗೆ ತೊಂದರೆ
Last Updated 19 ನವೆಂಬರ್ 2021, 1:51 IST
ಅಕ್ಷರ ಗಾತ್ರ

ತರೀಕೆರೆ: ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದ್ದು, ಬೆಳೆ ಹಾನಿಯಿಂದಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ನವೆಂಬರ್ ತಿಂಗಳಲ್ಲಿ ವಾಡಿಕೆ ಮಳೆ 3.8 ಸೆಂ.ಮೀ. ಆಗಿದ್ದು, ಈಗಾಗಲೇ 9.4 ಸೆಂ.ಮೀ ಮಳೆ ದಾಖಲಾಗಿದೆ.

‘ಕೃಷಿ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ನಷ್ಟದ ಪ್ರಮಾಣವನ್ನು ಅರಿತು ಪರಿಹಾರ ದೊರಕಿಸಲು ಮುಂದಾಗ ಬೇಕಾಗಿದ್ದ ತಾಲ್ಲೂಕು ಆಡಳಿತ ಮಾತ್ರ ಈವರೆಗೂ ತಲೆ ಕೆಡಿಸಿಕೊಂಡಿಲ್ಲ’ ಎಂದು ದೂರಿರುವ ರೈತರು ಇನ್ನು ಮೂರ್ನಾಲ್ಕು ದಿನ ಇದೇ ರೀತಿ ಮಳೆ ಮುಂದುವರಿದರೆ ಎಲ್ಲಾ ಬೆಳೆಯು ನಷ್ಟವಾಗುವ ಆತಂಕದಲ್ಲಿದ್ದಾರೆ.

‘ತಾಲ್ಲೂಕಿನಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಹಿನ್ನೆಲೆ ಒದಗಿಸುವ ಅಡಿಕೆ ಬೆಳೆಗಾರರರು ಮಳೆಯಿಂದಾಗಿ ಪಡಬಾರದ ಕಷ್ಟ ಪಡುತ್ತಿದ್ದಾರೆ. ಮೂರನೇ ಬೀಡು ಕಟಾವಿಗೆ ಬಂದಿದ್ದು, ಮಳೆಯ ಕಾರಣಕ್ಕೆ ಇದು ಸಾಧ್ಯವಾಗುತ್ತಿಲ್ಲ. ಅಮೃತಾಪುರ, ಕಸಬಾ ಹೋಬಳಿ ಹಾಗೂ ಲಿಂಗದಹಳ್ಳಿ ಹೋಬಳಿಯಲ್ಲಿ ಮೂರ್ನಾಲ್ಕು ಅಡಿಗಳಷ್ಟು ನೀರು ತೋಟದಲ್ಲಿ ತುಂಬಿ ನಿಂತಿದ್ದು, ಅಡಿಕೆ ಮರಗಳಿಗೆ ಕೊಳೆ ರೋಗ ಕಾಣಿಸಿಕೊಂಡಿದೆ. ಮರದಲ್ಲಿನ ಗುಳ್ಳುಗಳು ಉದುರುತ್ತಿದ್ದು, ಯಾವುದೇ ತಡೆ ಕ್ರಮವನ್ನು ರೈತರು ಅನುಸರಿಸಲು ಮಳೆಯಿಂದಾಗಿ ಸಾಧ್ಯವಾಗುತ್ತಿಲ್ಲ. ಇತ್ತ ಕಟಾವು ಮಾಡಿದ ಅಡಿಕೆಯನ್ನು ಬೇಯಿಸಿ ಒಣಗಿಸಲು ಮಳೆ ಬಿಡುತ್ತಿಲ್ಲ’ ಎಂದು ರೈತರು ನೋವು ವ್ಯಕ್ತಪಡಿಸುತ್ತಾರೆ.

ತಾಲ್ಲೂಕಿನ ಇನ್ನೊಂದು ಪ್ರಮುಖ ಬೆಳೆ ಎನಿಸಿಕೊಂಡಿರುವ ಮೆಕ್ಕೆಜೋಳವನ್ನು ರೈತರು ಕಟಾವು ಮಾಡುವ ಹಂತದಲ್ಲಿದ್ದಾಗಲೇ ಮಳೆ ಶುರುವಾಗಿದೆ. ಗಾಳಿ ಮತ್ತು ಮಳೆಗೆ ತೆನೆ ಮುರಿದು ಕೊಂಡು ಬಿದ್ದಿವೆ. ಜೋಳದ ತೆನೆಗಳು ಕೊಳೆಯುತ್ತಿದ್ದು, ಮೊಳಕೆಯೊಡೆಯುತ್ತಿವೆ. ಜುಲೈ ಹಾಗೂ ಆಗಸ್ಟ್‌ನಲ್ಲಿ ಬಿತ್ತನೆ ಮಾಡಿ ಅಷ್ಟಿಷ್ಟು ಬೆಳೆಯಲಾಗುತ್ತಿದ್ದ ರಾಗಿ ಸಹ ಕಾಳು ತುಂಬಿದ್ದು, ಕೊಯಿಲಿನ ಹಂತದಲ್ಲಿದ್ದ ಬೆಳೆ ಹಾಳಾಗಿ ರೈತರು ಕೈಚೆಲ್ಲಿ ಕೂತಿದ್ದಾರೆ.

‘ಮಳೆಯಿಂದಾಗಿ ಬೆಳೆ ಹಾಳಾಗಿದೆ. ನಷ್ಟದಲ್ಲಿರುವ ರೈತರು ಬೆಳೆ ಹಾನಿಗೆ ಸೂಕ್ತ ಪರಿಹಾರ ದೊರಕಿಸಬೇಕು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಬೇಕು. ಕಂದಾಯ ಹಾಗೂ ಕೃಷಿ ಇಲಾಖೆಗಳ ಜಂಟಿ ಸರ್ವೆ ನಡೆಸಿ ಹಾನಿ ಅಂದಾಜನ್ನು ಪರಿಶೀಲಿಸಬೇಕು’ ಎಂದು ರೈತರಾದ ರಾಮಪ್ಪ, ನಾಗರಾಜ್, ಸಣ್ಣ ರಂಗಪ್ಪ ಒತ್ತಾಯಿಸಿದ್ದಾರೆ.

‘ತಜ್ಞರ ಜೊತೆ ಹಾನಿ ಪ್ರದೇಶಕ್ಕೆ ಭೇಟಿ ನೀಡಲಾಗುವುದು. ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಹೊಂದಿರುವ ರೈತರಿಗೆ ಪರಿಹಾರ ದೊರಕಿಸಲಾಗುವುದು. ಇಲ್ಲದಿದ್ದರೆ ಸರ್ಕಾರಕ್ಕೆ ವರದಿ ನೀಡಿ ಎನ್.ಡಿ.ಆರ್.ಎಫ್. ಮಾರ್ಗಸೂಚಿಯನ್ವಯ ಪರಿಹಾರಕ್ಕೆ ಒತ್ತಾಯಿಸಲಾಗುವುದು’ ಎಂದು ಕೃಷಿ ಅಧಿಕಾರಿ ರಮೇಶ್ ಹೇಳಿದ್ದಾರೆ.

ಜಲ ಮೇಲ್‌ಗಿರಿಯಲ್ಲಿ ಮಣ್ಣು ಕುಸಿತ

ಗುಡ್ಡಗಾಡು ಪ್ರದೇಶಗಳಲ್ಲಿ ಮಳೆಯ ಪ್ರಮಾಣವು ಹೆಚ್ಚಾಗಿದ್ದು, ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಇತಿಹಾಸ ಪ್ರಸಿದ್ಧ ಕಲ್ಲತ್ತಿಗಿರಿ ಪ್ರದೇಶದ ಮೇಲ್ಭಾಗವಾಗಿರುವ ಜಲ ಮೇಲ್‌ಗಿರಿಯಲ್ಲಿ ಮಣ್ಣು ಕುಸಿತ ಉಂಟಾಗಿದೆ. ಇದರಿಂದಾಗಿ ಬೃಹತ್ ಗಾತ್ರದ ಮರಗಳು ಉರುಳಿ ಬಿದ್ದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT