ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಡೂರು | ನಿರ್ಲಕ್ಷ್ಯಕ್ಕೊಳಗಾದ ಹಿರಿಯಂಗಳ ಈಶ್ವರ ದೇವಸ್ಥಾನ

15 ವರ್ಷಗಳ ಹಿಂದೆ ಪುರಾತತ್ವ ಇಲಾಖೆಯಿಂದ ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ಜೀರ್ಣೋದ್ಧಾರ
Published : 21 ಸೆಪ್ಟೆಂಬರ್ 2024, 6:26 IST
Last Updated : 21 ಸೆಪ್ಟೆಂಬರ್ 2024, 6:26 IST
ಫಾಲೋ ಮಾಡಿ
Comments

ಕಡೂರು: ಐತಿಹಾಸಿಕ ಮಹತ್ವದ ದೇವಸ್ಥಾನವೊಂದು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡರೂ ಮತ್ತೆ ಪಾಳುಬಿದ್ದು ದುಸ್ಥಿತಿಗೆ ತಲುಪಿದೆ.

ಕಡೂರು ತಾಲ್ಲೂಕಿನ ಹಿರಿಯಂಗಳ ಗ್ರಾಮದಲ್ಲಿ ಹೊಯ್ಸಳರು ನಿರ್ಮಿಸಿರುವ ಲಕ್ಷ್ಮಿಭೋಗ ಕೇಶವ ಮತ್ತು ಈಶ್ವರ ದೇವಸ್ಥಾನಗಳಿವೆ. ಲಕ್ಷ್ಮಿಭೋಗ ಕೇಶವ ದೇವಸ್ಥಾನ ಹೊಯ್ಸಳ ಶೈಲಿಯಲ್ಲಿದ್ದರೂ ಕಲಾದೃಷ್ಟಿಯಿಂದ ವಿಶೇಷ ಕೆತ್ತನೆಗಳಿಲ್ಲ. ಆದರೆ, ವಾಸ್ತು ಶೈಲಿಯಲ್ಲಿ ಮೇರು ಕೃತಿಯಾಗಿದೆ. ಇಲ್ಲಿ ತಮಿಳು ಶಾಸನಗಳಿರುವುದು ವಿಶೇಷ. ಕನ್ನಡ ನಾಡಿನಲ್ಲಿ ಅದರಲ್ಲೂ ಕಡೂರಿನಂತಹ ಬಯಲು ಭಾಗದಲ್ಲಿಯೂ ವಿಶೇಷ ಪ್ರಭಾವ ಇತ್ತೆಂಬುದು ಜನ ನಂಬಿಕೆ.

ಈಶ್ವರ ದೇವಸ್ಥಾನ ಬಹು ದೊಡ್ಡದಾಗಿದ್ದು, ಗರ್ಭಗೃಹ, ನವರಂಗ ಸುಖನಾಸಿ, ಮಂಟಪಗಳಿವೆ. ಈ ದೇವಸ್ಥಾನವನ್ನು 15 ವರ್ಷಗಳ ಹಿಂದೆ ಪುರಾತತ್ವ ಇಲಾಖೆಯಿಂದ ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ಜೀರ್ಣೋದ್ಧಾರಗೊಳಿಸಲಾಯಿತು. ₹2.5 ಕೋಟಿ ವೆಚ್ಚವಾಗಿದೆಯೆಂಬ ಮಾಹಿತಿ ಸ್ಥಳೀಯರಿಂದ ದೊರೆಯುತ್ತದೆ.

ದೇವಸ್ಥಾನ ಪುನರ್‌ ಜೀವನ ಕಾರ್ಯ ಸಂಪೂರ್ಣವಾದ ನಂತರ ಅಲ್ಲಿ ಈಶ್ವರ ದೇವರ ಪ್ರತಿಷ್ಟಾಪನೆಯಾಗದೆ ನಿರ್ಲಕ್ಷ್ಯಕ್ಕೆ ಒಳಗಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚನೆ ಮಾಡಿ ಅದನ್ನು ಹಸ್ತಾಂತರಿಸುವ ಕಾರ್ಯವಾಗಲೇ ಇಲ್ಲ. ದೇವಸ್ಥಾನದ ಸುತ್ತ ಮುಳ್ಳು ಗಿಡಗಳು ಆವರಿಸಿ ದೇಗುಲ ಮರೆಯಾಗಿದೆ. ಇಲ್ಲಿದ್ದ ದೇವರ ವಿಗ್ರಹಗಳನ್ನು ಪುರಾತತ್ವ ಇಲಾಖೆ ಸಂರಕ್ಷಿಸಿದೆಯೋ ಅಥವಾ ನಾಪತ್ತೆಯಾಗಿದೆಯೋ ಎಂಬ ಸ್ಪಷ್ಟ ವಿವರ ಮುಜರಾಯಿ ಇಲಾಖೆ ಇಲಾಖೆಯಲ್ಲಿಯೂ ದೊರೆಯುತ್ತಿಲ್ಲ.

ಅತ್ಯಂತ ಸುಂದರ ಮತ್ತು ಐತಿಹಾಸಿಕ ಮಹತ್ವವಿರುವ ದೇವಸ್ಥಾನ ಒಂದೊಮ್ಮೆ ವೈಭವದಿಂದ ಮೆರೆದು ಪಾಳುಬಿದ್ದು ಆನಂತರ ಜೀರ್ಣೋದ್ಧಾರಗೊಂಡು ಮತ್ತೆ ದುಸ್ಥಿತಿಗೆ ತಲುಪಿರುವುದು ವಿಪರ್ಯಾಸಕರ ಸಂಗತಿಯಾಗಿದೆ. ಕಡೇಪಕ್ಷ ಸಂಬಂಧಿಸಿದ ಗ್ರಾಮ ಪಂಚಾಯಿತಿ ವತಿಯಿಂದ ದೇವಸ್ಥಾನದ ರಕ್ಷಣೆಗಾಗಿ ಕ್ರಮ ಕೈಗೊಳ್ಳಬೇಕೆಂದು ಇತಿಹಾಸಕ್ತರ ಒತ್ತಾಯ.

ಹಿರಿಯಂಗಳ ಜನವಸತಿಯಿಲ್ಲದ ಬೇಚರಾಕ್ ಗ್ರಾಮ. ಚಿಕ್ಕಂಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತದೆ. ಇಲ್ಲಿ ಊರು ಬೆಳೆದರೆ ಹತ್ತಿರದ ಮತ್ತೊಂದು ಗ್ರಾಮ ಪಾಳುಬೀಳುತ್ತದೆಯೆಂಬ ಪ್ರಾಚೀನ ಪ್ರತೀತಿಯಿದೆ.

ಕೇಶವ ದೇಗುಲದ ಕಂಬದ ಪೀಠದಲ್ಲಿ ಒಂದು ತಮಿಳಿನ ಶಾಸನ ಕ್ರಿ.ಶ. 1082ರ ಕಾಲದ್ದು. ಕಲಿಯುಗದ ಅಯೋಧ್ಯೆ ಎಂದು ಹೆಸರಾಗಿದ್ದ ಇರಗುಣದ ಸಿಂಗಪೆರುಮಾಳ್ ದೇವರ ಸೇವೆಗಾಗಿ ಪುದಲಿಯಾಂಡಿ ಅನ್ನುವವರು 50ಕೊಳಗದಷ್ಟು ಭೂಮಿಯನ್ನು ದಾನವಾಗಿ ಕೊಟ್ಟ ಬಗ್ಗೆ ಇದು ತಿಳಿಸುತ್ತದೆ.

ಈ ದೇವಸ್ಥಾನದ ಬಗ್ಗೆ ಸಂಪೂರ್ಣ ವಿವರ ಕೋರಿ ರಾಜ್ಯ ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಪೂರ್ಣಿಮಾ, ತಹಶೀಲ್ದಾರ್‌
ಹಿರಿಯಂಗಳದ ದೇವಸ್ಥಾನದ ಸುತ್ತಮುತ್ತ ಬೆಳೆದ ಗಿಡಗಂಟಿಗಳನ್ನು ತೆರವುಗೊಳಿಸಿ ಸಂರಕ್ಷಿಸುವ ಕಾರ್ಯಕ್ಕೆ ಮುಂದಾಗುತ್ತೇವೆ.
ಪ್ರಕಾಶನಾಯ್ಕ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಚಿಕ್ಕಂಗಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT