ಚಿಕ್ಕಮಗಳೂರು: ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಸರ್ವೆ ನಂಬರ್‌ನಲ್ಲಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಕಾಯ್ದಿರಿಸಲು ಉದ್ದೇಶಿಸಿದ್ದ ಜಾಗದಲ್ಲಿ ಸಾವಿರಕ್ಕೂ ಹೆಚ್ಚು ಎಕರೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿದ್ದು, ಅಷ್ಟೂ ಜಾಗ ವಾಪಸ್ ಪಡೆಯಲು ಅರಣ್ಯ ಇಲಾಖೆ ಮುಂದಾಗಿದೆ.
ಮೈಸೂರು ಒಡೆಯರ ಆಡಳಿತದಲ್ಲಿ ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಮತ್ತು ಕಾಮೇನಹಳ್ಳಿ ಸರ್ವೆ ನಂಬರ್‌ಗಳಲ್ಲಿ 21 ಸಾವಿರ ಎಕರೆಯಷ್ಟು ಜಾಗವನ್ನು ಗುರುತಿಸಿ 1942ರ ಫೆಬ್ರುವರಿಯಲ್ಲಿ ಮೈಸೂರು ಗೇಮ್ಸ್ ಆ್ಯಂಡ್ ಪ್ರಿಸರ್ವೇಷನ್ ಕಾಯ್ದೆಯಡಿಗೆ ತರಲಾಗುತ್ತದೆ. ಅದೇ ವರ್ಷದ ಅಕ್ಟೋಬರ್‌ನಲ್ಲಿ ಅಷ್ಟೂ ಜಾಗವನ್ನು ಮೈಸೂರು ಅರಣ್ಯ ಕಾಯ್ದೆ ವ್ಯಾಪ್ತಿಗೆ ತರಲಾಯಿತು.
ನಂತರ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡುವ ಪ್ರಕ್ರಿಯೆ ಆರಂಭವಾಯಿತು. ಮೊದಲ ಹಂತದ ಪ್ರಕ್ರಿಯೆಯಾಗಿ ಸೆಕ್ಷನ್ 4 ಪ್ರಕಾರ ಅಧಿಸೂಚನೆ ಹೊರಡಿಸಲಾಗಿದೆ. ಸೆಕ್ಷನ್ 5ರಿಂದ ಸೆಕ್ಷನ್ 17ರ ತನಕ ವಿವಿಧ ಪ್ರಕ್ರಿಯೆಗಳು ನಡೆದು ಅಂತಿಮವಾಗಿ ಅಧಿಸೂಚನೆ ಹೊರಡಿಸಬೇಕಿತ್ತು. ಆದರೆ ಈವರೆಗೆ ಸೆಕ್ಷನ್ 5ರ ಪ್ರಕಾರ ವಿಚಾರಣೆ ಪ್ರಕ್ರಿಯೆ ನಡೆಯುತ್ತಲೇ ಇದೆ. ಉದ್ದೇಶಿತ ಜಾಗದಲ್ಲಿ ತಾಂಡಗಳು, ಹಟ್ಟಿಗಳು ಸೇರಿ ಜನ ವಸತಿ ಇದೆಯೇ ಎಂಬುದನ್ನು ಗುರುತಿಸಬೇಕು. ಈ ಪ್ರಕ್ರಿಯೆ ಇತ್ತೀಚಿನ ವರ್ಷಗಳಲ್ಲಿ ಚುರುಕುಗೊಂಡಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಪ್ರಕ್ರಿಯೆ ಪೂರ್ಣಗೊಳಿಸಲು ವಿಳಂಬ ಮಾಡಿದ್ದು, ಅಷ್ಟರಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸಾವಿರಾರು ಎಕರೆಯನ್ನು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿದ್ದಾರೆ.
‘ಅರಣ್ಯ ಕಾಯ್ದೆಯ ಸೆಕ್ಷನ್ 4 ಅಡಿಯಲ್ಲಿ ಅಧಿಸೂಚನೆ ಹೊರಡಿಸಿದರೆ ಆ ಜಾಗದ ಮೇಲೆ ಕಂದಾಯ ಇಲಾಖೆಗೆ ಅಧಿಕಾರ ಇರುವುದಿಲ್ಲ. ಆದರೂ ಎಮ್ಮೆದೊಡ್ಡಿ ಸರ್ವೆ ನಂಬರ್‌ನಲ್ಲಿ ಒಟ್ಟು 1,888 ಅಕ್ರಮ ಭೂಮಂಜೂರಾತಿ ಪ್ರಕರಣಗಳು ನಡೆದಿವೆ. ಒಂದು ಸಾವಿರ ಎಕರೆಗೂ ಹೆಚ್ಚು ಅರಣ್ಯ ಜಾಗಕ್ಕೆ ಸಂಬಂಧಿಸಿದ ಹಕ್ಕು ಪತ್ರಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಹಂಚಿದ್ದಾರೆ. ಅದರಲ್ಲೂ ಹುಲಿ ಸಂರಕ್ಷಿತ ಪ್ರದೇಶವನ್ನು ತಹಶೀಲ್ದಾರ್‌ಗಳು ಖಾಸಗಿಯವರಿಗೆ ಮಂಜೂರು ಮಾಡಿದ್ದಾರೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
‘ಅರಣ್ಯ ಕಾಯ್ದೆಯ ಸೆಕ್ಷನ್ 4 ಜಾರಿಯಲ್ಲಿದೆ, ಕಂದಾಯ ಭೂಮಿ ಅಲ್ಲ ಎಂಬ ಮಾಹಿತಿ ಇದ್ದರೂ ಪಹಣಿಯಲ್ಲಿ ನಮೂದಾಗಿಲ್ಲ ಎಂಬ ಒಂದೇ ಒಂದು ಕಾರಣ ಇಟ್ಟುಕೊಂಡು ಮಂಜೂರು ಮಾಡಿದ್ದಾರೆ. ಹಲವು ವರ್ಷಗಳಿಂದ ಈ ರೀತಿಯ ಅಕ್ರಮ ಮಂಜೂರಾತಿ ನಡೆದಿದೆ. ಇತ್ತೀಚಿನ ಅಧಿಕಾರಿಗಳು ಕೂಡ 250ಕ್ಕೂ ಹೆಚ್ಚು ಜನರಿಗೆ ಭೂಮಿಯ ಹಕ್ಕು ಪತ್ರ ನೀಡಿದ್ದಾರೆ. ಇವೆಲ್ಲವನ್ನೂ ರದ್ದುಪಡಿಸಿ ಹುಲಿ ಸಂರಕ್ತಿತ ಪ್ರದೇಶಕ್ಕೆ ಬಿಟ್ಟುಕೊಡಲು ಸರ್ಕಾರವನ್ನು ಕೋರಲಾಗಿದೆ. ಅರಣ್ಯ ಜಾಗವನ್ನು ಅಕ್ರಮವಾಗಿ ಮಂಜೂರು ಮಾಡಿದ ಅಧಿಕಾರಿಗಳ ವಿರುದ್ಧವೂ ಕ್ರಮ ಆಗಲಿದೆ’ ಎಂದು ಅಧಿಕಾರಿಗಳು ವಿವರಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.