ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವಗೊಂಡನಹಳ್ಳಿ: ಊರನ್ನೇ ಕಾಡುತ್ತಿರುವ ಅನಾರೋಗ್ಯ

ವೈರಲ್ ಜ್ವರ: ಕೀಲುನೋವು, ಕೈ ಕಾಲು ಊತದಿಂದ ಬಳಲುತ್ತಿರುವ ಜನ
Published 10 ಜುಲೈ 2024, 22:10 IST
Last Updated 10 ಜುಲೈ 2024, 22:10 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಬಾಡಿದ ಮುಖ, ಊದಿಕೊಂಡ ಕಾಲುಗಳು, ಕುಳಿತರೆ ಮೇಲೇಳಲು ಸಾಧ್ಯವಾಗದ ಸ್ಥಿತಿ, ದಿನವಿಡೀ ಜಗುಲಿ ಮೇಲೆಯೇ ಕುಳಿತುಕೊಳ್ಳುವ ಜನ, ಹಾಸಿಗೆ ಹಿಡಿದಿರುವ ಇನ್ನಷ್ಟು ಜನ... ಇದು ತಾಲ್ಲೂಕಿನ ದೇವಗೊಂಡನಹಳ್ಳಿಯ ಸ್ಥಿತಿ.

ಜಿಲ್ಲೆಯಾದ್ಯಂತ ಡೆಂಗಿ ಜ್ವರ ಜನರನ್ನು ಕಾಡುತ್ತಿದೆ. ಅದರಲ್ಲೂ ನಗರ ಪ್ರದೇಶದಲ್ಲಿ ಡೆಂಗಿ ಹೆಚ್ಚಿದ್ದರೆ, ಗ್ರಾಮೀಣ ಭಾಗದಲ್ಲಿ ವೈರಲ್ ಜ್ವರದಿಂದ ಜನ ಪರಿತಪಿಸುತ್ತಿದ್ದಾರೆ.

ದೇವಗೊಂಡನಹಳ್ಳಿಯ ಯಾವ ಮನೆಗೆ ಹೋದರೂ ಅನಾರೋಗ್ಯಕ್ಕೆ ತುತ್ತಾಗಿರುವ ಜನರಿದ್ದಾರೆ. ಕೆಲ ಮನೆಗಳಲ್ಲಿ ಇಡೀ ಕುಟುಂಬವೇ ಜ್ವರ, ಕೈಕಾಲು ನೋವು, ಕಾಲು ಊತ, ಸೊಂಟ ಮತ್ತು ಕೀಲು ನೋವುಗಳಿಂದ ಬಳುತ್ತಿದೆ. ಕಳೆದ ಎರಡು ತಿಂಗಳಿಂದ ಈ ಊರಿನ ಜನರಿಗೆ ಅನಾರೋಗ್ಯ ಕಾಡುತ್ತಿದೆ. ಒಂದೆಡೆ ಡೆಂಗಿ ಕಾಡುತ್ತಿದ್ದರೆ, ಮತ್ತೊಂದೆಡೆ ಚಿಕುನ್‌ಗುನ್ಯ ರೀತಿಯ ಕಾಯಿಲೆಯಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ. ವಿಪರೀತ ಬಾಧೆಗೆ ತುತ್ತಾಗಿರುವ ಜನ, ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಅಲೆದು ಸುಸ್ತಾಗಿದ್ದಾರೆ.

‘ಎರಡು ತಿಂಗಳಿಂದ ಮನೆಯಲ್ಲೇ ಕುಳಿತಿದ್ದೇನೆ. ಎದ್ದು ತಿರುಗಾಡಲು ಸಾಧ್ಯವಾಗುತ್ತಿಲ್ಲ. ಸ್ವಲ್ಪ ಚೇತರಿಕೆ ಎನಿಸಿದಾಗ ಬೆಂಗಳೂರಿಗೆ ಹೋಗಿ ಟ್ಯಾಕ್ಸಿ ಚಾಲನೆ ಮಾಡಿದೆ. ಮತ್ತೆ ಕೀಲುನೋವು ಜಾಸ್ತಿ ಆಯಿತು ವಾಪಸ್ ಬಂದು ಮನೆಯಲ್ಲೇ ಕುಳಿತಿದ್ದೇನೆ. ದಿನವಿಡೀ ಜಗುಲಿಯ ಮೇಲೆ ಕುಳಿತು ಕಾಲ ತಳ್ಳುತ್ತಿದ್ದೇನೆ. ಆರೋಗ್ಯದಲ್ಲಿ ಉಲ್ಲಾಸವೇ ಇಲ್ಲವಾಗಿದೆ’ ಎಂದು ಅನಾರೋಗ್ಯಕ್ಕೆ ತುತ್ತಾಗಿರುವ ಸತೀಶ್ ಹೇಳಿದರು.

‘ನಾನೊಬ್ಬನೇ ಅಲ್ಲ ನಮ್ಮ ಮನೆಯಲ್ಲಿ ಮತ್ತು ಊರಿನ ಎಲ್ಲಾ ಮನೆಯಲ್ಲೂ ಇದೇ ಸ್ಥಿತಿ ಇದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿದ್ದೇವೆ. ವೈರಲ್ ಜ್ವರ ಎಂದು ಹೇಳುವ ವೈದ್ಯರು ಮನೆಗೆ ಹೋಗಿ ವಿಶ್ರಾಂತಿ ಪಡೆಯಲು ಹೇಳುತ್ತಿದ್ದಾರೆ. ಮನೆಗೆ ಬಂದರೆ ಆರೋಗ್ಯ ಸುಧಾರಿಸುತ್ತಿಲ್ಲ. ಏನು ಮಾಡಬೇಕೊ ದಿಕ್ಕು ತೋಚದಾಗಿದೆ’ ಎಂದರು.

‘ಮಹಿಳೆಯರು, ವೃದ್ಧರು, ಯುವಕರು ಎಲ್ಲರೂ ಇದೇ ಸ್ಥಿತಿಯಲ್ಲಿದ್ದಾರೆ. ಬಾಧೆ ಕಡಿಮೆಯಾಗಿಲ್ಲ, ಊಟ ಸೇರುತ್ತಿಲ್ಲ, ಶೌಚಾಲಯಕ್ಕೆ ಹೋಗಿ ಕುಳಿತರೆ ಮೇಲೆ ಏಳುವುದೇ ಕಷ್ಟ. ಈ ರೀತಿಯ ನೋವಿನಿಂದ ಬಳಲುತ್ತಿದ್ದೇವೆ. ಊಟಕ್ಕೆ ಕುಳಿತು ಮುದ್ದೆ ಮುರಿಯೋಣ ಎಂದರೆ ಅದಕ್ಕೂ ಕೈ ಬೆರಳುಗಳು ಹೊಂದುತ್ತಿಲ್ಲ. ಬೆರಳು ಮೂಳೆಗಳು ಬಾಧಿಸುತ್ತಿವೆ’ ಎಂದು ಮನೆಯೊಂದರ ಜಗುಲಿಯ ಮೇಲೆ ಕುಳಿತಿದ್ದ ಲಕ್ಕಮ್ಮ ಹೇಳಿದರು. 

ಗ್ರಾಮದಲ್ಲಿ 400ಕ್ಕೂ ಹೆಚ್ಚು ಕುಟುಂಬ ಇವೆ. ಯಾವ ಮನೆಯನ್ನೂ ಒಂದು ತಿಂಗಳಿಂದ ಅನಾರೋಗ್ಯ ಕಾಡದೆ ಬಿಟ್ಟಿಲ್ಲ. ಇಡೀ ಊರೇ ಅನಾರೋಗ್ಯಕ್ಕೆ ತುತ್ತಾದ ಸ್ಥಿತಿಯಲ್ಲಿದೆ. ಜಮೀನಿನ ಕಡೆ ತಿರುಗಿ ನೋಡಲೂ ಆಗುತ್ತಿಲ್ಲ ಎಂದು ಗ್ರಾಮದವರು ಹೇಳುತ್ತಾರೆ.

‘ದೇವಗೊಂಡನಹಳ್ಳಿ ಮಾತ್ರವಲ್ಲ ಬೇರೆ ಊರಿನಲ್ಲೂ ವೈರಲ್ ಜ್ವರ ಹೆಚ್ಚಾಗಿದೆ. ಆದರೆ, ಈ ಊರಿನಲ್ಲಿ ಜಾಸ್ತಿ ಜನರಿಗೆ ಜ್ವರ ಕಾಡುತ್ತಿದೆ. ಯಾರೊಬ್ಬರಿಗೂ ಡೆಂಗಿ ಅಥವಾ ಚಿಕುನ್ ಗುನ್ಯ ದೃಢಪಟ್ಟಿಲ್ಲ. ಶೀತಗಾಳಿ ಇರುವುದರಿಂದ ವೈರಲ್ ಜ್ವರ ಎಲ್ಲರಿಗೂ ಕಾಣಿಸಿಕೊಳ್ಳುತ್ತಿದೆ. ವಿಶ್ರಾಂತಿ ಪಡೆಯಲು ಸಲಹೆ ನೀಡುತ್ತಿದ್ದೇವೆ’ ಎಂದು ಸ್ಥಳೀಯ ಸರ್ಕಾರಿ ಆಸ್ಪತ್ರೆ ವೈದ್ಯರು ತಿಳಿಸಿದರು.

ಲಾರ್ವಾ ಸರ್ವೆ ನಿರಂತರವಾಗಿ ನಡೆಯುತ್ತಿದೆ. ಆದರೂ ಗ್ರಾಮಕ್ಕೆ ಗುರುವಾರ ನಾನೇ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಅಗತ್ಯವಿದ್ದರೆ ತಕ್ಷಣವೇ ಜ್ವರ ತಪಾಸಣೆ ಕ್ಲಿನಿಕ್ ತೆರೆಯಲಾಗುವುದು
–ಡಾ.ಸೀಮಾ ತಾಲ್ಲೂಕು ವೈದ್ಯಾಧಿಕಾರಿ

ಎಲ್ಲರ ಮನೆಯಲ್ಲೂ ಅನಾರೋಗ್ಯ

‘ವೈದ್ಯರು ಊರಿಗೆ ಬಂದು ಪರಿಶೀಲನೆ ನಡೆಸಿಲ್ಲ. ನಾವೇ ಕಳಸಾಪುರ ಸಿಂದಗೆರೆ ಚಿಕ್ಕಮಗಳೂರಿನ ಆಸ್ಪತ್ರೆಗಳಿಗೆ ಹೋಗಿ ಬರುತ್ತಿದ್ದೇವೆ’ ಎಂದು ಗ್ರಾಮಸ್ಥರು ಹೇಳಿದರು. ‘ಮನೆಯಲ್ಲಿ ಎಲ್ಲರೂ ಅನಾರೋಗ್ಯಕ್ಕೆ ತುತ್ತಾಗಿದ್ದು ಆರೈಕೆ ಮಾಡುವವರೇ ಇಲ್ಲವಾಗಿದ್ದಾರೆ. ಕೆಲ ಅನಾರೋಗ್ಯ ಪೀಡಿತರು ನೆಂಟರ ಮನೆಗಳಿಗೂ ಹೋಗಿದ್ದಾರೆ’ ಎಂದರು. ಎಲ್ಲರ ಮನೆಯ ಸ್ಥಿತಿಯೂ ಇದೇ ಆಗಿರುವುದರಿಂದ ಒಬ್ಬರಿಗೊಬ್ಬರು ಸಹಾಯ ಮಾಡುವ ಸ್ಥಿತಿಯಲ್ಲಿ ಇಲ್ಲ. ಇಡೀ ಗ್ರಾಮ ರೋಗಗ್ರಸ್ತವಾಗಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT