ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಅಂತರ್ಜಾಲ, ಸರ್ವರ್‌ ಸಮಸ್ಯೆ; ಕಾಯುವ ಬವಣೆ

ಮಲೆನಾಡು, ಗ್ರಾಮೀಣ ಭಾಗದಲ್ಲಿ ಸಮಸ್ಯೆ ಜಾಸ್ತಿ l ಕೆಲವೆಡೆ ಕಡಿಮೆ ವೇಗದ ಅಂತರ್ಜಾಲ l ಗ್ರಾಹಕರಿಗೆ ಪಡಿತರ ಪಡೆಯುವುದು ಸವಾಲು
Last Updated 27 ಜೂನ್ 2022, 3:25 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಹಲವೆಡೆ ಅಂತರ್ಜಾಲ, ಸರ್ವರ್‌ ಪದೇ ಪದೇ ಕೈಕೊಡುವುದು ಮಾಮೂಲಿಯಾಗಿದೆ. ಮಲೆನಾಡು ಭಾಗದಲ್ಲಿ ಸಮಸ್ಯೆ ಹೆಚ್ಚು ಇದೆ. ಜನರಿಗೆ ಕಾಯುವ ಬವಣೆ ತಪ್ಪಿಲ್ಲ.

ಗ್ರಾಮ ಪಂಚಾಯಿತಿ ಕಾರ್ಯಾಲಯ, ನಾಡಕಚೇರಿ, ತಾಲ್ಲೂಕು ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ, ಪಡಿತರ ಅಂಗಡಿ ಸಹಿತ ವಿವಿಧ ಕಚೇರಿಗಳಲ್ಲಿ ಆಗಾಗ ಸರ್ವರ್‌ ಸ್ಥಗಿತ, ನೆಟ್‌ವರ್ಕ್‌ ಸಮಸ್ಯೆಗಳು ಕಾಡುತ್ತವೆ. ಇ–ಸ್ವತ್ತು, ನೋಂದಣಿ, ಪ್ರಮಾಣ ಪತ್ರ, ದೃಢೀಕರಣ ಪತ್ರ, ಪಡಿತರ ಇತ್ಯಾದಿ ಪಡೆಯಲು ಪಡಿಪಾಟಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಸ್ಯೆ ವಿಪರೀತ ಇದೆ. ಮಳೆಗಾಲದಲ್ಲಿ ಕೆಲವೊಮ್ಮೆ ಎರಡ್ಮೂರು ದಿನಗಳಾದರೂ ಸಮಸ್ಯೆ ಬಗೆಹರಿಯಲ್ಲ. ಈ ದಿನಗಳಲ್ಲಿ ಕಚೇರಿಗಳಲ್ಲಿ ಆನ್‌ಲೈನ್‌ ಪ್ರಕ್ರಿಯೆಗಳೇ ನಡೆಯಲ್ಲ.

ಕಡಿಮೆ ವೇಗದ ಅಂತರ್ಜಾಲ: ಕಳಸ ತಾಲ್ಲೂಕು ಕಚೇರಿಯಲ್ಲಿ ಇರುವ ಅಟಲ್‍ಜೀ ಜನಸ್ನೇಹಿ ಕೇಂದ್ರವು ಪಹಣಿ, ಆದಾಯ, ಜಾತಿ ಪ್ರಮಾಣ ಪತ್ರ, ವಾಸ ಸ್ಥಳ, ಕೃಷಿ ದೃಢೀಕರಣ ಮತ್ತಿತರ ಹಲವಾರು ಉಪಯುಕ್ತ ಸೇವೆಗಳನ್ನು ನೀಡುತ್ತಿದೆ. ಆದರೆ, ಇಲ್ಲಿನ ನಿಧಾನಗತಿಯ ಅಂತರ್ಜಾಲ ಮತ್ತು ಸರ್ವರ್ ಸಮಸ್ಯೆಯು ಗ್ರಾಮಸ್ಥರನ್ನು ಹೈರಾಣಾಗಿಸುತ್ತಿದೆ.

ಕಳಸ ಈಗ ತಾಲ್ಲೂಕು ಕೇಂದ್ರ ಆಗಿದ್ದು, ಅಟಲ್‌ ಜೀ ಕೇಂದ್ರಕ್ಕೆ ಇನ್ನೊಬ್ಬ ಸಿಬ್ಬಂದಿ ನೇಮಿಸಬೇಕು. ಇಬ್ಬರು ಏಕಕಾಲದಲ್ಲಿ ಕಾರ್ಯನಿರ್ವಹಿಸುವಂತಾಗಬೇಕು. ಅಂತರ್ಜಾಲದ ವೇಗ ಹೆಚ್ಚಿಸಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.

ಪಡಿತರ ಪಡೆಯುವುದು ಸವಾಲು: ನೆಟ್‌ವರ್ಕ್‌ ಸಮಸ್ಯೆ ಯಿಂದಾಗಿ ಅಜ್ಜಂಪುರ ತಾಲ್ಲೂಕಿನ ಸಾಲ ಹಳ್ಳಿಯ ಪಡಿತರ ಚೀಟಿದಾರರು ಪಡಿತರ ಪಡೆಯಲು ಪಡಿಪಾಟಲು ಪಡುವಂತಾಗಿದೆ.

ತಾಲ್ಲೂಕಿನ ಭೂತನಹಳ್ಳಿಯಲ್ಲಿ ಪಡಿತರ ವಿತರಣೆ ಮಳಿಗೆ ಇದೆ. ಹೆಗ್ಗಡಿಹಳ್ಳಿ, ಅರಬಲ, ಭೂತನಹಳ್ಳಿ, ಅರಿಶಿನಘಟ್ಟ, ಗರಗದಹಳ್ಳಿ, ಗರಗದಹಳ್ಳಿ ತಾಂಡ್ಯ-1, ತಾಂಡ್ಯ-2, ಕೊರಚರಹಟ್ಟಿಯ 500 ಕ್ಕೂ ಅಧಿಕ ಪಡಿತರ ಚೀಟಿದಾರರು ಇಲ್ಲಿ ಪಡಿತರ ಪಡೆಯುತ್ತಾರೆ.

‘ಕೇಂದ್ರದವರು ‘ಸಿಗ್ನಲ್’ ಸಂಪರ್ಕ ನಿಟ್ಟಿನಲ್ಲಿ ಮೊದಲ ಮಹಡಿಯಲ್ಲಿ ಬೆರಳಚ್ಚು ಪಡೆಯುತ್ತಾರೆ. ವೃದ್ಧರು, ಅಂಗವಿಕಲರು ಮಹಡಿ ಏರುವುದು ಕಷ್ಟ. ಕೆಲವರು ಮೆಟ್ಟಿಲು ಏರಲಾಗದೇ ಪಡಿತರವನ್ನೇ ಕೈಬಿಟ್ಟ ನಿದರ್ಶನ ಇವೆ’ ಎನ್ನುತ್ತಾರೆ ಗ್ರಾಮಸ್ಥ ಗೋವಿಂದರಾಜ್.

ಸಾಲಹಳ್ಳಿಯ ಪ್ರತಿ ಮನೆಯಲ್ಲೂ ಬಯೊ ಮೆಟ್ರಿಕ್ ಪಡೆಯಲು ಪ್ರಯತ್ನಿಸಲಾಯಿತು. ಆದರೆ ಸಿಗ್ನಲ್ ಸಮಸ್ಯೆಯಿಂದಾಗಿ ಕೈಬಿಡಲಾಯಿತು ಎಂದು ಆಹಾರ ಇಲಾಖೆ ಶಿರಸ್ತೆದಾರ್‌ ನವೀನ್ ಹೇಳುತ್ತಾರೆ.

ವಿದ್ಯುತ್ ಕೈಕೊಟ್ಟರೆ ಟವರ್‌ ಆಫ್‌: ಮೂಡಿಗೆರೆಯಲ್ಲಿ ವಿದ್ಯುತ್‌ ಇದ್ದರೆ ಮಾತ್ರ ನೆಟ್‌ವರ್ಕ್‌ ಇರುತ್ತದೆ. ವಿದ್ಯುತ್‌ ಕೈಕೊಟ್ಟಾಗ, ನೆಟ್‌ವರ್ಕ್‌ ಟವರ್ ಕೂಡ ಆಫ್ ಆಗುತ್ತವೆ. ಅಂತರ್ಜಾಲ ಸಿಗದೆ ಪರಿತಪಿಸುವುದು ಸಾಮಾನ್ಯವಾಗಿದೆ. ಟವರ್ ಜನರೇಟರ್‌ಗೆ ಡಿಸೇಲ್‌ ಪೂರೈಕೆ ಮಾಡದಿರುವುದು ಸಮಸ್ಯೆಗೆ ಎಡೆಮಾಡಿದೆ.

ಅಂತರ್ಜಾಲ ನಿಧಾನಗತಿಯಿಂದಾಗಿ ಸರ್ಕಾರಿ ಕಚೇರಿಗಳಲ್ಲಿ ವೆಬ್‌ಸೈಟ್‌ಗಳು ತೆರೆದುಕೊಳ್ಳದೆ ಪರದಾಡುವುದು, ಕೆಲಸಗಳು ಸಕಾಲದಲ್ಲಿ ಆಗದಿರುವುದು ಸಾಮಾನ್ಯವಾಗಿದೆ. ವಿವಿಧ ಸವಲತ್ತುಗಳಿಗಾಗಿ ಅರ್ಜಿ ಸಲ್ಲಿಸಲು ಗ್ರಾಮೀಣ ಜನರು ನಗರ, ಪಟ್ಟಣ ಆಶ್ರಯಿಸುವ ಸ್ಥಿತಿ ಇದೆ. ಗ್ರಾಮೀಣ ಪ್ರದೇಶದಲ್ಲಿ ಬೆರಳಚ್ಚು ಪಡೆದು ಪಡಿತರ ವಿತರಿಸುವುದು ಹರಸಾಹಸವಾಗಿದೆ. ಆನ್‌ಲೈನ್ ತರಗತಿ, ವರ್ಕ್ ಫ್ರಮ್ ಹೋಂ ಪಡಿಪಾಟಲಾಗಿವೆ.

‘ಕೆಲವು ಪ್ರದೇಶಗಳು ಇಂದಿಗೂ 2ಜಿ ತರಂಗಾತರದಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ. 2ಜಿ ಸೇವೆಯಲ್ಲಿ ಅಂತರ್ಜಾಲದ ವೇಗವು ಕಡಿಮೆ ಇರುವುದರಿಂದ ಡೌನ್ ಲೋಡ್, ವೀಕ್ಷಣೆ ಕಷ್ಟ. ಅಂತರ್ಜಾಲದ ಗುಣಮಟ್ಟ ಕಡಿಮೆಯಿದ್ದರೆ ವಿಡಿಯೋ ಕರೆ, ಆನ್‌ಲೈನ್ ಕರೆಗಳಿಗೂ ಸಮಸ್ಯೆಯಾಗುತ್ತದೆ’ ಎನ್ನುತ್ತಾರೆ ತೋಟಗಾರಿಕೆ ವಿದ್ಯಾರ್ಥಿ ಸಂತೋಷ್.

ಗ್ರಾಮೀಣ ಭಾಗದಲ್ಲಿ ಸಮಸ್ಯೆ: ನರಸಿಂಹರಾಜಪುರ ತಾಲ್ಲೂಕಿನ ಬಹುತೇಕ ಗ್ರಾಮಗಳ ವ್ಯಾಪ್ತಿಯಲ್ಲಿ ನೆಟ್‌ವರ್ಕ್ ಸಮಸ್ಯೆ ಇದೆ. ನೆಟ್‌ವರ್ಕ್ ಕೈಕೊಟ್ಟರೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ.

ಗ್ರಾಮೀಣ ಭಾಗದಲ್ಲಿ ಈಗ ಸ್ಥಿರ ದೂರವಾಣಿ ಸೌಲಭ್ಯ ಇಲ್ಲ. ಪ್ರಸ್ತುತ ಎಲ್ಲರೂ ಸಂಪರ್ಕಕ್ಕಾಗಿ ಮೊಬೈಲ್‌ ಫೋನ್‌ ಅವಲಂಬಿಸಿದ್ದಾರೆ. ವಿದ್ಯುತ್ ಕೈಕೊಟ್ಟರೆ ಟವರ್‌ಗಳು ಕಾರ್ಯನಿರ್ವಹಿಸಲ್ಲ, ಮೊಬೈಲ್ ಸಂಪರ್ಕಕ್ಕೆ ಸಿಗಲ್ಲ. ನೆಟ್‌ವರ್ಕ್‌ ವ್ಯತ್ಯಯ ವಾದರೆ ಗ್ರಾಮೀಣ ಭಾಗದಲ್ಲಿರುವ ಗ್ರಾಮ ಒನ್ ಸೇವಾ ಕೇಂದ್ರಗಳಲ್ಲೂ ಎಲ್ಲ ಸೇವೆ ಸ್ಥಗಿತಗೊಳ್ಳುತ್ತದೆ. ನೆಟ್‌ವರ್ಕ್‌ ಕೈಕೊಟ್ಟರೆ ಅರ್ಜಿ ಸಲ್ಲಿಕೆ ಎಲ್ಲದಕ್ಕೂ ತೊಂದರೆ. ಈಗ ಎಲ್ಲವೂ ಡಿಜಿಟಲ್‌ ಆಗಿವೆ. ಹೀಗಾಗಿ, ನೆಟ್‌ ವರ್ಕ್ ವ್ಯವಸ್ಥಿತವಾಗಿ, ನಿರಂತರವಾಗಿ ಕಲ್ಪಿಸುವುದೇ ಸಮಸ್ಯೆಗೆ ಪರಿಹಾರ ಎಂದು ಮುತ್ತಿನಕೊಪ್ಪ ಜನಜಾಗೃತಿ ವೇದಿಕೆ ಅಧ್ಯಕ್ಷ ಸಿ.ಎಲ್.ಮನೋಹರ್ ಹೇಳುತ್ತಾರೆ.

ಇಕೆವೈಸಿ ಮಾಡಿಸಲು ತೊಂದರೆಯಾಗಿದೆ. ನೆಟ್‌ವರ್ಕ್, ಸರ್ವರ್ ಸಮಸ್ಯೆಯಿಂದ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಪರವಾನಗಿ ಪಡೆಯಲು ಒಂದೂವರೆ ತಿಂಗಳಿನಿಂದ ಸಾಧ್ಯವಾಗಿಲ್ಲ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಂ.ಮಹೇಶ್ ಅಳಲು ತೋಡಿಕೊಳ್ಳುತ್ತಾರೆ.

‘ನೆಟ್‌ವರ್ಕ್ ತೊಡಕು ಇದ್ದರೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗಲ್ಲ. ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ನೆಟ್ ವರ್ಕ್ ಕೈಕೊಟ್ಟರೆ ಕೆಲವೊಮ್ಮೆ ಬ್ಯಾಂಕುಗಳಲ್ಲೂ ಸೇವೆ ಸ್ಥಗಿತಗೊಳ್ಳುತ್ತವೆ’ ಎಂದು ಪತ್ರಬರಹಗಾರ ಕಾಂತ್ ರಾಜ್ ಹೇಳುತ್ತಾರೆ.

ಉಪ ನೋಂದಣಾಧಿಕಾರಿ ಕಚೇರಿ–ಸಮಸ್ಯೆಗಳ ಆಗರ: ತರೀಕೆರೆ ಉಪ ನೋಂದಣಾಧಿಕಾರಿ ಕಚೇರಿಯು ತರೀಕೆರೆ, ಅಜ್ಜಂಪುರ ಎರಡು ತಾಲ್ಲೂಕು ವ್ಯಾಪ್ತಿ ಇದೆ. ಸರ್ವರ್ ಸಮಸ್ಯೆ ಜೊತೆಗೆ ಮೂಲಸೌಕರ್ಯ ಸಮಸ್ಯೆಗಳು ಇವೆ. ಆಸ್ತಿ ವರ್ಗಾವಣೆ, ದಾಖಲೆ ನೋಂದಣಿ, ಕ್ರಯ ಕರಾರುಪತ್ರ, ವಿವಾಹ ನೋಂದಣಿ ಸಹಿತ ಅನೇಕ ಕೆಲಸಗಳಿಗೆ ಸಾರ್ವಜನಿಕರು ಬರುತ್ತಾರೆ. ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇಲ್ಲ. ಕುಡಿಯಲು ನೀರಿನ ವ್ಯವಸ್ಥೆ ಇಲ್ಲ.

‘ದಲ್ಲಾಳಿ ಹಾವಳಿ ಮೂಲಕ ಹೋದರೆ ಕೆಲಸ ಸಲೀಸು. ಸಾರ್ವಜನಿ ಕರೇ ನೇರವಾಗಿ ಹೋದರೆ ಕೆಲಸಕ್ಕಾಗಿ ಕಾದು ಹೈರಾಣಗಬೇಕು’ ಎನ್ನುತ್ತಾರೆ ಕೃಷಿಕ ನಾಗೇನಹಳ್ಳಿ ಜಗದೀಶ್.

‘ಸರ್ವರ್ ಸಮಸ್ಯೆಯಿಂದ ರೈತರ ದಿನದ ಕೆಲಸ ಬಿಟ್ಟು ಕಚೇರಿ ಮುಂದೆ ಕಾಯುವಂತಾಗಿದೆ’ ಎನ್ನುತ್ತಾರೆ ಕೃಷಿಕ ಹಲಸೂರಿನ ನಾಗಭೂಷಣ.

ಅಮೃತಾಪುರ ನಾಡ ಕಚೇರಿಯಲ್ಲಿ ಸರ್ವರ್ ಸಮಸ್ಯೆ ಜೊತೆಗೆ ಉಪ ತಹಶೀಲ್ದಾರ್‌ ಇಲ್ಲದಿರುವುದು ಕಂದಾಯ ನಿರೀಕ್ಷಕರಿಗೆ ಪ್ರಭಾರ ವಹಿಸಲಾಗಿದೆ.

ಕೇಂದ್ರ ಕಚೇರಿಗಳಲ್ಲಿ ತೊಡಕು: ಕಡೂರಿನಲ್ಲಿ ತಂತ್ರಾಂಶ ಸಮಸ್ಯೆ ಮತ್ತು ಸರ್ವರ್ ಡೌನ್ ಸಮಸ್ಯೆಗಳಿಂದಾಗಿ ವಂಶ ವೃಕ್ಷ, ಜಾತಿ ಪ್ರಮಾಣ ಪತ್ರ ಇತ್ಯಾದಿ ಪಡೆಯಲು ಸಾರ್ವಜನಿಕರು ಹೆಣಗಾಡುವಂತಾಗಿದೆ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯಲ್ಲಿ ಫ್ರೂಟ್ ಐಡಿ ಮುಂತಾದ ದಾಖಲೆ ಪಡೆಯಲೂ ತೊಂದರೆಯಾಗುತ್ತಿದೆ.

ಪಡಿತರ ಚೀಟಿಯಲ್ಲಿ ಹೆಸರು ಸೇರಿಸಲು, ತೆಗೆಸುವುದು ಸಮಸ್ಯೆಯಾಗಿದೆ. ಸರ್ವರ್ ಡೌನ್ ಕೇವಲ ಇಲ್ಲಿನ ಸಮಸ್ಯೆಯಲ್ಲ. ಕೇಂದ್ರ ಸ್ಥಾನದಲ್ಲಿಯೂ ಹೀಗೆಯೇ ಆಗಿರುತ್ತದೆ ಎಂಬುದು ಸರ್ಕಾರಿ ಕಚೇರಿಗಳಲ್ಲಿನ ಸಿಬ್ಬಂದಿ ಸಬೂಬು.

‘ನಿಗದಿತ ಸಮಯದಲ್ಲಿ‌ ದಾಖಲೆಗಳು ದೊರೆಯದಿದ್ದರೆ ಸೌಲಭ್ಯ ವಂಚಿತರಾಗಬೇಕಾಗುತ್ತದೆ. ಹೀಗಾಗಿ, ನೆಟ್‌ವರ್ಕ್‌, ಸರ್ವರ್‌ ಸಮಸ್ಯೆಗೆ ಸಂಬಂಧಿಸಿದವರು ಪರಿಹಾರ ಹುಡುಕಬೇಕು’ ಎಂದು ಕಡೂರಿನ ಬೀಡಾ ಅಂಗಡಿ ಟಿ.ಪಿ.ವೆಂಕಟೇಶ್‌ ಹೇಳುತ್ತಾರೆ.

ನೆಟ್‌ವರ್ಕ್‌ ಸಮಸ್ಯೆ ಮಾಮೂಲಿ: ಶೃಂಗೇರಿಯಲ್ಲಿ ನೆಟ್‌ವರ್ಕ್‌ ಸಮಸ್ಯೆ ಮಾಮೂಲಿಯಾಗಿದೆ. ನಾಡಕಚೇರಿ, ನೆಮ್ಮದಿ ಕೇಂದ್ರದಲ್ಲಿ ಜನರು ಗಂಟೆಗಟ್ಟಲೇ, ದಿನಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ.

ಸಾರ್ವಜನಿಕರು ದಿನದ ಎಲ್ಲ ಕೆಲಸವನ್ನು ಬದಿಗಿರಿಸಿ ನಾಡಕಚೇರಿ ಮತ್ತು ಪಡಿತರ ಅಂಗಡಿಯಲ್ಲಿ ಕಾಯಬೇಕು. ಗ್ರಾಮೀಣ ಭಾಗದಲ್ಲಿ ಬಿಎಸ್‌ಎನ್‌ಎಲ್‌ ಸರಿಯಾಗಿ ಸಿಗಲ್ಲ.

ವಿಳಂಬ–ಜನರಿಗೆ ತೊಂದರೆ: ಕೊಪ್ಪದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಇ.ಸಿ. ಪಡೆಯಲು ವಾರಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ.

ಗ್ರಾಮ ಪಂಚಾಯಿತಿಗಳಲ್ಲಿ ಖಾತೆ, ಇ-ಸ್ವತ್ತು ಮಾಡಿಕೊಳ್ಳಲು ತಡವಾ ಗುತ್ತಿದೆ. ಗ್ರಾಮೀಣ ಭಾಗದಲ್ಲಿ ಪಡಿತರ ಅಂಗಡಿಗಳಲ್ಲಿ ಪಡಿತರಕ್ಕೆ ಮೊಬೈಲ್ ಒಟಿಪಿ ಪಡೆಯಲು ನೆಟ್‌ವರ್ಕ್ ಸಮಸ್ಯೆ ಅಡ್ಡಿಯಾಗಿದ್ದು, ಕೂಲಿ ಕೆಲಸ ಬಿಟ್ಟು ಅಲೆದಾಡಬೇಕಾದ ಪರಿಸ್ಥಿತಿ ಇದೆ. ಉದ್ಯೋಗ ಖಾತ್ರಿ ಹಣ ಪಡೆಯಲು ಮತ್ತು ಸರ್ಕಾರಿ ಬಿಲ್ ಪಡೆಯಲು ನಿಧಾ ನವಾಗುತ್ತಿದೆ ಎಂಬ ದೂರುಗಳು ಇವೆ.

ಜನರಿಗೆ, ಕೂಲಿ ಕಾರ್ಮಿಕರಿಗೆ, ಕೃಷಿಕರಿಗೆ ಸಮಸ್ಯೆಯಾಗುತ್ತಿದೆ. ಸರ್ಕಾರ ಎಲ್ಲವನ್ನೂ ಆನ್‌ಲೈನ್ ಮೂಲಕ ಕಾರ್ಯಗತಗೊಳಿಸುತ್ತಿದೆ. ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಅನನುಕೂಲವಾಗಿದೆ. ತಾಲ್ಲೂಕಿನಲ್ಲಿ ನೆಟ್‌ವರ್ಕ್‌ ಸಮಸ್ಯೆ ಎಲ್ಲ ಕಡೆ ಇದೆ ಎಂದು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಇನೇಶ್ ಹೇಳುತ್ತಾರೆ.

(ಪೂರಕ ಮಾಹಿತಿ: ರವಿ ಕೆಳಂಗಡಿ, ಕೆ.ವಿ.ನಾಗರಾಜ್‌, ರವಿಕುಮಾರ್‌ ಶೆಟ್ಟಿಹಡ್ಲು, ಬಾಲು ಮಚ್ಚೇರಿ, ಜೆ.ಒ. ಉಮೇಶ್‌ಕುಮಾರ್‌,
ಎಚ್‌.ಎಂ.ರಾಜಶೇಖರಯ್ಯ, ಕೆ.ಎನ್‌.ರಾಘವೇಂದ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT