ಗುರುವಾರ , ಮಾರ್ಚ್ 4, 2021
21 °C
ಗೋಶಾಲೆಗೆ ಬಿಡುವ ವ್ಯವಸ್ಥೆ ಮಾಡಲು ನಾಗರಿಕರ ಆಗ್ರಹ

ಕಡೂರು: ಬಿಡಾಡಿ ದನಗಳ ಉಪಟಳ

ಬಾಲುಮಚ್ಚೇರಿ Updated:

ಅಕ್ಷರ ಗಾತ್ರ : | |

ಮೆಸ್ಕಾಂ ಕಚೇರಿ ಎದಿರು ಬೀಡಾಡಿ ದನಗಳ ಉಪಟಳ

ಕಡೂರು: ಬೆಳೆಯುತ್ತಿರುವ ಕಡೂರು ಪಟ್ಟಣದಲ್ಲಿ ಬಿಡಾಡಿ ದನಗಳ ಉಪಟಳ ಹೆಚ್ಚಾಗಿದ್ದು, ಅಪಘಾತ ಪ್ರಕರಣಗಳು ಕೂಡ ಹೆಚ್ಚುತ್ತಿರುವುದು ನಾಗರಿಕರ ಆತಂಕಕ್ಕೆ ಕಾರಣವಾಗಿದೆ.

ಪಟ್ಟಣವನ್ನು ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸವೇಶ್ವರ ವೃತ್ತದಿಂದ ಗಣಪತಿ ಆಂಜನೇಯ ಸ್ವಾಮಿ ಸರ್ಕಲ್ ತನಕ ರಸ್ತೆಯ ಮಧ್ಯೆ ಡಿವೈಡರ್ ಅಳವಡಿಸಲಾಗಿದೆ. ಇದರ ನಡುವೆ ವಿದ್ಯುತ್ ಕಂಬಗಳು ಮತ್ತು ಇತ್ತೀಚೆಗೆ ಗಿಡಗಳನ್ನು ಹಾಕಲಾಗಿದೆ. ಈ ಡಿವೈಡರ್‌ಗಳು ಬಿಡಾಡಿ ದನಗಳಿಗೆ ವಿಶ್ರಾಂತಿ ತಾಣವಾಗಿದೆ. ಈ ದನಗಳ ಮಾಲೀಕರು ಯಾರೆಂದು ಗೊತ್ತು ಇಲ್ಲ. ಪ್ರತಿದಿನ ಬೆಳಿಗ್ಗೆ ರಸ್ತೆಗಳಲ್ಲಿ ಸ್ವಚ್ಚಂದವಾಗಿ ತಿರುಗುವ ಈ ಬಿಡಾಡಿ ದನಗಳು ರಸ್ತೆ ಬದಿ ಹಾಕಿರುವ ಹೋಟೆಲ್ ತ್ಯಾಜ್ಯಗಳನ್ನು ತಿನ್ನುತ್ತವೆ. ತಿರುಗಾಟ ಸಾಕೆನಿಸಿದಾಗ ಈ ಡಿವೈಡರ್‌ಗಳಲ್ಲಿ ನೆರಳಿರುವ ತಾಣವನ್ನು ಆಯ್ಕೆ ಮಾಡಿಕೊಂಡು ಮಲಗಿ ಮೆಲುಕು ಹಾಕುತ್ತಿರುತ್ತವೆ.

ಗಣಪತಿ ಆಂಜನೇಯ ಸ್ವಾಮಿ ಸರ್ಕಲ್ ನಿಂದ ಬೆಂಗಳೂರು ಕಡೆಗೆ ಹೋಗುವಾಗ ಕೆ.ಎಲ್.ವಿ ಸರ್ಕಲ್ ಬಳಿ ಇರುವ ತಿರುವಿನಲ್ಲಿ ಸದಾ ಅಪಾಯ ಹೊಂಚು ಹಾಕುತ್ತಿರುತ್ತದೆ. ಇಲ್ಲಿ ಹಿಂದೆ ಹೆದ್ದಾರಿ ವಿಸ್ತರಣೆ ವೇಳೆ ಕೆಡವಲಾದ ಕಟ್ಟಡಗಳ ಪಳಿಯಳಿಕೆಗಳು ಹಾಗೆಯೇ ಉಳಿದಿದ್ದು, ಕಸ ಹಾಕಲು ಸೂಕ್ತ ಜಾಗವಾಗಿದೆ. ಹಲವರು ತಮ್ಮ ಅಂಗಡಿ ತ್ಯಾಜ್ಯವನ್ನು ಇಲ್ಲಿ ಸುರಿಯುತ್ತಾರೆ. ಹತ್ತಾರು ಬಿಡಾಡಿ ದನಗಳು ಈ ಜಾಗವನ್ನು ತಮ್ಮ ಶಾಶ್ವತ ವಿಶ್ರಾಂತಿ ತಾಣವನ್ನಾಗಿಸಿಕೊಂಡಿವೆ. ಈ ತಿರುವಿನಲ್ಲಿ ಬರುವ ವಾಹನಗಳು ಮಾಡುವ ಕರ್ಕಶ ಹಾರನ್ ಗೆ ಬೆದರುವ ಬಿಡಾಡಿ ದನಗಳು ಗಾಬರಿಯಾಗಿ ಒಮ್ಮೆಲೆ ರಸ್ತೆಗೆ ನುಗ್ಗುತ್ತವೆ. ಇದನ್ನು ನಿರೀಕ್ಷಿಸಿರದ ವಾಹನ ಸವಾರರು ಬೀಳುವುದು ಖಚಿತ. ಈ ರೀತಿಯ ಎಷ್ಟೋ ಘಟನೆ ನಡೆದಿದೆ.

 ಇನ್ನು ಸ್ವಲ್ಪ ಮುಂದೆ ಹೋದರೆ ಮೆಸ್ಕಾಂ ಕಚೇರಿ ಎದುರು ಸಹ ಇದೇ ಪರಿಸ್ಥಿತಿಯಿದೆ. ಕೆಲವೇ ದಿನಗಳ ಹಿಂದೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಮಹಿಳೆಯೊಬ್ಬರು ಅನಿರೀಕ್ಷಿತವಾಗಿ ಅಡ್ಡ ಬಂದ ಹಸುವನ್ನು ತಪ್ಪಿಸಲು ಹೋಗಿ ಬಸ್ ಡಿಕ್ಕಿಯಾಗಿ ಕೈಯ್ಯನ್ನೇ ಕಳೆದುಕೊಂಡ ಘಟನೆಯೂ ನಡೆದಿದೆ.

ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಹಿಂದೊಮ್ಮೆ ಸರ್ಕಲ್ ಇನ್‌ಸ್ಪೆ‌ಕ್ಟರ್ ಕೆ.ಸತ್ಯನಾರಾಯಣ ಅವರು ಈ ಬಿಡಾಡಿ ದನಗಳನ್ನು ಹಿಡಿದು ಲಾರಿಯಲ್ಲಿ ತುಂಬಿ ಗೋಶಾಲೆಯೊಂದಕ್ಕೆ ಕಳುಹಿಸಿದ್ದರು. ಆಗ ಆ ಹಸುಗಳ ಮಾಲೀಕರು ಕಾಡಿ ಬೇಡಿ ಮತ್ತೆ ವಾಪಸ್ ಕರೆತಂದಿದ್ದರು. ಆದರೆ, ಇದೀಗ ಮತ್ತೆ ಅದೇ ತೊಂದರೆ ಎದುರಾಗಿದೆ. ಕನಿಷ್ಟ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿಯೇ ಸುಮಾರು 40ಕ್ಕೂ ಹೆಚ್ಚು ಹಸುಗಳಿರುತ್ತವೆ.

ಇವುಗಳನ್ನು ರಸ್ತೆಗೆ ಬಿಡದೆ ಮನೆಯಲ್ಲಿಯೇ ಕಟ್ಟಿಹಾಕಿಕೊಳ್ಳುವಂತೆ ಅವುಗಳ ಮಾಲೀಕರಿಗೆ ಸೂಚಿಸಬೇಕು. ಇಲ್ಲದಿದ್ದರೆ ಇವುಗಳನ್ನು ಹಿಡಿದು ಗೋಶಾಲೆಗೆ ಬಿಡುವ ವ್ಯವಸ್ಥೆ ಮಾಡಲು ಪೊಲೀಸ್ ಇಲಾಖೆ ಮತ್ತು ಪುರಸಭೆ ಮುಂದಾಗಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು