ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ; ಮಗು ಮಾರಾಟ

8 ತಿಂಗಳ ನಂತರ ಪ್ರಕರಣ ಬೆಳಕಿಗೆ
Last Updated 21 ಡಿಸೆಂಬರ್ 2020, 3:37 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿದ್ದ ಕಾರ್ಮಿಕ ಮಹಿಳೆಗೆ ಶಿಶು ಮೃತಪಟ್ಟಿದೆ ಎಂದು ಸುಳ್ಳು ಹೇಳಿ, ಶಿಶುವನ್ನು ಮಾರಾಟ ಮಾಡಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಅನಾಮಧೇಯ ದೂರು ದಾಖಲಾಗಿದೆ.

ಏಪ್ರಿಲ್‌ನಲ್ಲಿ ಪ್ರಕರಣ ನಡೆದಿದ್ದು, ಈಗ ಬೆಳಕಿಗೆ ಬಂದಿದೆ. ತಾಲ್ಲೂಕಿನ ಗುಲ್ಲನ್‌ಪೇಟೆ ಕಾರ್ಮಿಕ ಮಹಿಳೆಗೆ ಜನಿಸಿದ ಹೆಣ್ಣು ಶಿಶುವನ್ನು ಜಿಲ್ಲಾ ಆಸ್ಪತ್ರೆಯ ಆಯಾ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದೇ 18ರಂದು ದೂರು ಸಮಿತಿಗೆ ಬಂದಿದ್ದು, ಪರಿಶೀಲನೆ ಶುರುವಾಗಿದೆ. ಸಂಬಂಧಪಟ್ಟವರನ್ನು ಕರೆಸಿ 19 ರಂದು ಹೇಳಿಕೆ ಪಡೆಯಲಾಗಿದೆ.

ಏನಿದು ಪ್ರಕರಣ:

ತಾಲ್ಲೂಕಿನ ಗುಲ್ಲನ್‌ಪೇಟೆ ಗ್ರಾಮದ ಎಸ್ಟೇಟ್‌ನ ಕಾರ್ಮಿಕ ಮಹಿಳೆ ಹೆರಿಗೆಗೆ ಜಿಲ್ಲಾಸ್ಪತ್ರೆಗೆ ಏ.21ರಂದು ದಾಖಲಾಗಿದ್ದರು. 23ರಂದು ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದರು. ‘ಶಿಶು ಹಾಲು ಕುಡಿಯುತ್ತಿಲ್ಲ’ ಎಂದು ಬಾಣಂತಿ, ಆಯಾಗೆ ಮಾರನೇ ದಿನ (ಏ.24ರಂದು) ತಿಳಿಸಿದ್ದಾರೆ.

ಐಸಿಯುನಲ್ಲಿ ಇಡುವುದಾಗಿ ಕಂದಮ್ಮನನ್ನು ಒಯ್ದ ಆಯಾ, ಮುಕ್ಕಾಲು ಗಂಟೆ ನಂತರ ವಾಪಸ್‌ ಬಂದು ಶಿಶು ಮೃತಪಟ್ಟಿದೆ ಎಂದು ತಿಳಿಸಿದ್ದರು. ಬಾಣಂತಿ ಮತ್ತು ಅವರ ಪತಿಗೆ ಆಸ್ಪತ್ರೆ ಗೇಟಿನ ಬಳಿಗೆ ಬರುವಂತೆ ಸೂಚಿಸಿ, ಬೇರೊಂದು ಶಿಶುವಿನ ಶವ ನೀಡಿದ್ದಾರೆ. ಸಿಬ್ಬಂದಿಯೇ ಅಂತ್ಯಸಂಸ್ಕಾರ ಮಾಡುವುದಾಗಿ ದಂಪತಿಯಿಂದ ₹ 350 ವಸೂಲಿ ಮಾಡಿ ಆಸ್ಪತ್ರೆಯಿಂದ ಕಳುಹಿಸಿದ್ದಾರೆ ಎಂದು ಪ್ರಕರಣಕ್ಕೆ ಸಂಬಂಧಪಟ್ಟವರ ಹೇಳಿಕೆಗಳಿಂದ ತಿಳಿದುಬಂದಿದೆ.

‘ಜನಿಸಿದ ಮಗು ಜೀವಂತವಾಗಿರುವುದು ಖಚಿತವಾಗಿದೆ. ಆದರೆ, ಇನ್ನೂ ಪತ್ತೆಯಾಗಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

5ನೇ ಮಗು: ‘ಈ ಮಹಿಳೆಯ ಐದನೇ ಶಿಶು ಇದು. ಉಳಿದ ನಾಲ್ಕು ಮಕ್ಕಳ ಮಾಹಿತಿ ಕಲೆ ಹಾಕುತ್ತಿದ್ದೇವೆ’ ಎಂದು ಅವರು ತಿಳಿಸಿದರು.

‘₹ 30 ಸಾವಿರಕ್ಕೆ ಖರೀದಿ’

‘ಹಸುಗೂಸನ್ನು ₹ 30 ಸಾವಿರ ನೀಡಿ ದಂಪತಿಯಿಂದ ಪಡೆದಿರುವುದಾಗಿ ಆಯಾ ಹೇಳಿದರು. ಈ ವಿಷಯ ಯಾರಿಗೂ ತಿಳಿಸಬೇಡಿ, ಇನ್ನು ₹ 25 ಸಾವಿರ ಕೊಡುತ್ತೇನೆ ಎಂದು ಪದೇ ಪದೇ ಫೋನ್‌ ಮಾಡಿ ಕೂಡಾ ಹೇಳಿದ್ದಾರೆ’ ಎಂದು ಎಸ್ಟೇಟ್‌ ರೈಟರ್‌ ಲಕ್ಷ್ಮಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT