ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೇಗೌಡರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನ: ಆರೋಪ

Last Updated 20 ನವೆಂಬರ್ 2022, 7:19 IST
ಅಕ್ಷರ ಗಾತ್ರ

ಕೊಪ್ಪ: ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಅವರ ಸೇಡಿನ, ಕುಠಿಲ ರಾಜಕೀಯದ ಭಾಗವಾಗಿ ಶಾಸಕ ಟಿ.ಡಿ.ರಾಜೇಗೌಡ ಅವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು ಮಾಡಿದ್ದಾರೆ. ಚುನಾವಣೆ ಸಮೀಪಿಸುತ್ತಿರುವಾಗ ರಾಜೇಗೌಡ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸಿದ್ಧಾರ್ಥ ಹೆಗ್ಡೆ ಅವರ ಕುಟುಂಬದ ಆಸ್ತಿಯಲ್ಲಿ ಕಾನೂನು ಪ್ರಕಾರ ವ್ಯಾವಹಾರಿಕ ಪಾಲ್ಗೊಳ್ಳುವಿಕೆ ಹಾಗೂ ಹೊಂದಾಣಿಕೆ ಮೂಲಕ ಸಿದ್ಧಾರ್ಥ ಹೆಗ್ಡೆ ಮತ್ತು ರಾಜೇಗೌಡ ಕುಟುಂಬದ ನಡುವೆ ವ್ಯವಹಾರವಾದ ಒಡಂಬಡಿಕೆಯಾಗಿದೆ’ ಎಂದರು.

‘ರಾಜೇಗೌಡ ಅವರು ತಮ್ಮ ಅಧಿಕಾರ, ರಾಜಕೀಯ ಸ್ಥಾನಮಾನ ದುರ್ಬಳಕೆ ಮಾಡಿಕೊಂಡು, ಸರ್ಕಾರದ ಹಣ, ಅನುದಾನ ದುರುಪಯೋಗ ಮಾಡಿಕೊಂಡು 200 ಎಕರೆ ಆಸ್ತಿ ಖರೀದಿಗೆ ₹ 200 ಕೋಟಿ ಹಣ ವರ್ಗಾವಣೆ ಮಾಡಿರುವುದು ಋಜುವಾತು ಮಾಡಿದರೆ ಪಂಥಾಹ್ವಾನ ಸ್ವೀಕರಿಸಲು ನಾವು ತಯಾರಿದ್ದೇವೆ’ ಎಂದರು.

‘ಲೋಕಾಯುಕ್ತದಲ್ಲಿ ದೂರು ನೀಡಿದ ವ್ಯಕ್ತಿಯನ್ನು ಜೀವರಾಜ್ ಅವರು ಸರ್ಕಾರಿ ಕಾರಿನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ದೂರು ಕೊಡಿಸಿದ್ದಾರೆ’ ಎಂದು ಆರೋಪಿಸಿದ ಅವರು, ‘ದೂರು ದಾಖಲಾಗಿರುವುದು ಮಾಧ್ಯಮ ದವರಿಗೆ ಗೊತ್ತಾಗುವ ಮುನ್ನವೇ ಜೀವರಾಜ್ ಅವರಿಗೆ ಗೊತ್ತಾಗಿದೆ ಹಾಗೂ ಮರುಕ್ಷಣವೇ ಸುದ್ದಿಗೋಷ್ಠಿ ನಡೆಸಿದ್ದಾರೆ ಎಂದರೆ ಇದರ ಅರ್ಥವೇನು? ಎಂದು ಪ್ರಶ್ನಿಸಿದರು.

‘ಬಿಜೆಪಿ ಪಕ್ಷ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷದ ಗಾಯತ್ರಿ ಶಾಂತೇಗೌಡ ಅವರ ಮನೆ ಮೇಲೂ ಐಟಿ ದಾಳಿ ಮಾಡುವಂತೆ ಮಾಡಿದೆ. ಶಾಸಕ ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ಪ್ರಕರಣ
ದಾಖಲು ಮಾಡಿ ಬೆದರಿಸುವ ತಂತ್ರ ಮಾಡಿ, ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗುವಂತೆ ಮಾಡಿದ್ದಾರೆ’ ಎಂದು ಆರೋಪಿಸಿದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಸ್.ಇನೇಶ್, ನುಗ್ಗಿ ಮಂಜುನಾಥ್, ಪಕ್ಷದ ಲಕ್ಷ್ಮಿನಾರಾಯಣ, ಮಿತ್ರಾ, ನವೀನ್ ಮಾವಿನಕಟ್ಟೆ, ಬಿ.ಪಿ.ಚಿಂತನ್, ಸತೀಶ್, ಬರ್ಕತ್ ಆಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT