ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ವಿವಿಧ ಸಂಘಟನೆಗಳಿಂದ ಮುಷ್ಕರ

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ, ಬೇಡಿಕೆ ಈಡೇರಿಸಲು ಒತ್ತಾಯ
Last Updated 8 ಜನವರಿ 2020, 12:00 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕೇಂದ್ರ ಸರ್ಕಾರವು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ವಿವಿಧ ಸಂಘಟನೆಗಳು ಬುಧವಾರ ನಗರದಲ್ಲಿ ಮುಷ್ಕರ ನಡೆಸಿದವು.

ಎಐಟಿಯುಸಿ, ಸಿಪಿಐ, ರೈತ ಸಂಘ, ಸಹ್ಯಾದ್ರಿ ಪ್ಲಾಂಟೇಷನ್ ಮತ್ತು ಜನರಲ್ ವರ್ಕರ್ಸ್, ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್, ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ, ಕರ್ನಾಟಕ ಪ್ಲಾಂಟೇಷನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್, ಐಎನ್‌ಟಿಯುಸಿ ಕಾರ್ಯಕರ್ತರು ನಗರದ ಕೆಇಬಿ ವೃತ್ತದಲ್ಲಿ ಜಮಾಯಿಸಿದರು. ಎಂ.ಜಿ.ರಸ್ತೆ ಮಾರ್ಗವಾಗಿ ಆಜಾದ್ ಪಾರ್ಕ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಕಾರ್ಮಿಕ ಕಾನೂನಿಗೆ ತಿದ್ದುಪಡಿ ಮಾಡಬಾರದು. ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಗೊಳಿಸಬೇಕು. ಕನಿಷ್ಠ ವೇತನ ₹ 21 ಸಾವಿರ ನಿಗದಿಗೊಳಿಸಬೇಕು. ₹ 10 ಸಾವಿರ ಪಿಂಚಣಿ ನೀಡಬೇಕು. ಪ್ಲಾಂಟೇಷನ್ ಕೈಗಾರಿಕೆ ಪುನಶ್ಚೇತನಗೊಳಿಸಬೇಕು. ಕಾಫಿ, ರಬ್ಬರ್, ಟೀ ತೋಟ ಕಾರ್ಮಿಕರಿಗೆ ವಸತಿ ಉಚಿತವಾಗಿ ನಿರ್ಮಿಸಿಕೊಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ರಕ್ಷಣೆ, ರೈಲ್ವೆ, ಬ್ಯಾಂಕ್, ಎಲ್‌ಐಸಿ ಕ್ಷೇತ್ರಗಳನ್ನು ಖಾಸಗೀಕರಣ ಮಾಡಬಾರದು. ಸರ್ಕಾರಿ ಬಂಡವಾಳ ಹಿಂತೆಗೆಯಬಾರದು. ರೈತರ ಸಾಲ ಮನ್ನಾ ಮಾಡಬೇಕು. ಸ್ವಾಮಿನಾಥನ್ ಸಮಿತಿ ವರದಿ ಅನುಷ್ಠಾನಗೊಳಿಸಬೇಕು. ಪೌರತ್ವ ತಿದ್ದುಪಡಿ ಹಿಂಪಡೆಯಬೇಕು. ತೈಲ ಬೆಲೆ, ಅಡುಗೆ ಅನಿಲ ಸಹಿತ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು’ ಎಂದು ಆಗ್ರಹಿಸಿದರು.

ಎಐಟಿಯುಸಿ ಜಿಲ್ಲಾಘಟಕದ ಅಧ್ಯಕ್ಷ ಕೆ.ಗುಣಶೇಖರ್ ಮಾತನಾಡಿ, ‘ದೇಶದಲ್ಲಿ ಸರ್ಕಾರಿ ಸಂಸ್ಥೆಗಳ ಖಾಸಗೀಕರಣಕ್ಕೆ ಹುನ್ನಾರ ನಡೆಯುತ್ತಿದೆ. ದೊಡ್ಡ ಉದ್ಯಮಿಗಳ ಪರವಾಗಿ ಆರ್ಥಿಕ ನೀತಿ ರೂಪಿಸಲಾಗಿದೆ. ಗುತ್ತಿಗೆ ಪದ್ಧತಿಗೆ ಒತ್ತು ನೀಡಲಾಗಿದೆ. ಕಾರ್ಮಿಕರಿಗೆ ಕೆಲಸದ ಭದ್ರತೆ ಇಲ್ಲದಂತಾಗಿದೆ. ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರನ್ನು ಗೌರವಧನದ ಹೆಸರಲ್ಲಿ ಸರ್ಕಾರ ದುಡಿಸಿಕೊಳ್ಳುತ್ತಿದೆ. ವೈದ್ಯಕೀಯ ಸಹಿತ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಗುಲಾಮಗಿರಿ ತಪ್ಪಿಸಬೇಕು’ಎಂದರು.

ಎಐಟಿಯುಸಿ ಕಾರ್ಯದರ್ಶಿ ವಿಜಯಕುಮಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ನೆರೆ ಉಂಟಾದಾಗ ವೈಮಾನಿಕ ಸಮೀಕ್ಷೆ ನಡೆಸಲಿಲ್ಲ. ಸಂತ್ರಸ್ಥರಿಗೆ ನೆರವು ನೀಡಲಿಲ್ಲ. ಆದರೆ ರಾಜಕೀಯ ಉದ್ದೇಶಕ್ಕಾಗಿ ಇತ್ತೀಚೆಗೆ ತುಮಕೂರಿಗೆ ಬಮದು–ಹೋಗಿದ್ದಾರೆ. ಕಾರ್ಮಿಕರು ಅದನ್ನು ಅರ್ಥಮಾಡಿಕೊಳ್ಳಬೇಕು. ಆಮಿಷಗಳಿಗೆ ಬಲಿಯಾಗಿ ಮತ ನೀಡಬಾರದು ಎಂದರು.

ಮುಷ್ಕರ ನಿಮಿತ್ತ ಬ್ಯಾಂಕುಗಳು, ಅಂಚೆ ಕಚೇರಿಗಳು ಬಂದ್ ಆಗಿದ್ದವು. ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಬಸ್, ಆಟೋ ಸಂಚಾರ ಎಂದಿನಂತಿತ್ತು. ಶಾಲಾ ಕಾಲೇಜುಗಳಿಗೆ ರಜೆ ನೀಡಿರಲಿಲ್ಲ. ಮುಂಜಾಗ್ರತೆಯಾಗಿ ಆಯ ಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿತ್ತು.
ಸಿಪಿಐ ಮುಖಂಡ ಬಿ.ಅಮ್ಜದ್, ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ಕಾರ್ಯದರ್ಶಿ ಎನ್.ಸಿ.ಒಬಯ್ಯ, ಬಿಸಿಯೂಟ ಕಾರ್ಯಕರ್ತೆಯರ ಸಂಘದ ಇಂದುಮತಿ, ಎಸ್ಟೇಟ್ ಲೇಬರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಮಾಣಿಕ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT