ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವಂತನ ಒಲುಮೆಗೆ ಭಕ್ತಿ, ಶ್ರದ್ಧೆ ಮುಖ್ಯ

ಮಹಾಲಕ್ಷ್ಮಿ ದೇಗುಲ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿಧುಶೇಖರ ಭಾರತೀಶ್ರೀ
Last Updated 7 ಫೆಬ್ರುವರಿ 2020, 15:08 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಶ್ರದ್ಧೆ, ಭಕ್ತಿ ಇದ್ದರೆ ಭಗವಂತನ ಒಲುಮೆಗೆ ಪಾತ್ರರಾಗಬಹುದು ಎಂದು ಶೃಂಗೇರಿ ಶಾರದಾಪೀಠದ ಕಿರಿಯ ಯತಿವರ್ಯ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ಜ್ಯೋತಿನಗರದಲ್ಲಿ ಮಹಾಲಕ್ಷ್ಮಿ ದೇಗುಲದ ಉದ್ಘಾಟನೆ, ಕುಂಭಾಭಿಷೇಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಅಧಿಕಾರ, ಜಾತಿ, ಅಂತಸ್ತಿನಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯ ಇಲ್ಲ. ಭಕ್ತಿ, ಶ್ರದ್ಧೆ ಮುಖ್ಯ. ಭಕ್ತಿ, ಶ್ರದ್ಧೆಗೆ ತಕ್ಕಂತೆ ಅನುಗ್ರಹ ಕರುಣೆಯಾಗುತ್ತದೆ. ಭಗವಂತ ಭಕ್ತರ ಪರಾಧೀನ ಎಂದರು.

ಭಗವಂತ ನಿರ್ಗುಣ ಮತ್ತು ನಿರಾಕಾರ. ರೂಪ, ಆಕಾರಗಳಿಲ್ಲದಿದ್ದರೆ ಆರಾಧಿಸಲಾಗಲ್ಲ. ಹೀಗಾಗಿ, ಭಗವಂತಗೆ ಅನೇಕ ಶರೀರ, ನಾಮಗಳು. ಎಲ್ಲ ದೇವರೂ ಒಂದೇ. ದೇಗುಲಗಳನ್ನು ನಿರ್ಮಾಣ ಮಾಡಿ ಶಾಸ್ತ್ರೋಕ್ತವಾಗಿ ಮೂರ್ತಿ ಪ್ರತಿಷ್ಠಾಪಿಸುವ ಸಂಪ್ರದಾಯ ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.

ವಿಗ್ರಹ ಯಾರನ್ನೂ ದ್ವೇಷಿಸಲ್ಲ. ಪೂಜೆ, ನೈವೇದ್ಯ ಮಾಡು ಎಂದು ಕೇಳಲ್ಲ. ಯಾರನ್ನೂ ನಿಂದನೆ ಮಾಡಲ್ಲ. ಯಾರಿಗೂ ಯಾವ ಆಜ್ಞೆಯನ್ನು ಮಾಡಲ್ಲ. ಹೀಗಾಗಿ ದೇಗುಲದಲ್ಲಿನ ಶಿಲಾಮೂರ್ತಿಗೆ ದೈವತ್ವ ಸಂದಿದೆ ಎಂದು ವಿವರಿಸಿದರು.

ಅಕಾರಣವಾಗಿ ಇನ್ನೊಬ್ಬರನ್ನು ದ್ವೇಷಿಸುವುದನ್ನು ಬಿಡಬೇಕು. ತೃಪ್ತಿ ಗುಣ ಇರಬೇಕು. ಇನ್ನೊಬ್ಬರಲ್ಲಿನ ಒಳ್ಳೆಯ ಅಂಶಗಳನ್ನು ಪರಿಗಣಿಸಬೇಕು. ಸಂಬಂಧವಿಲ್ಲದ ವಿಷಯಗಳಲ್ಲಿ ತಲೆಹಾಕಬಾರದು. ಇಂಥ ಗುಣಗಳಿರುವವರಿಗೆ ದೇವರಂಥ ಮನುಷ್ಯರು ಎನ್ನುತ್ತಾರೆ. ಸಜ್ಜನರಾಗಿ ನಡೆದುಕೊಳ್ಳಬೇಕು ಎಂದು ಉಪದೇಶಿಸಿದರು.

ಈ ದೇಗುಲ ನಿರ್ಮಾಣಕ್ಕಾಗಿ ಟ್ರಸ್ಟಿ ವಿ.ರಾಮರಾವ್‌ ಅವರು ಅಪಾರ ಶ್ರಮಿಸಿದ್ದಾರೆ. ದೇಗುಲವನ್ನು ಶಾರದಾ ಪೀಠವು ನಿರ್ವಹಣೆ ಮಾಡಲಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಮಾತನಾಡಿ, ‘ಈ ದೇಗುಲ ನಿರ್ಮಾಣ ರಾಮರಾವ್‌ ಅವರ ಮಹತ್ವಾಕಾಂಕ್ಷೆಯಾಗಿತ್ತು. ಅದು ಈಡೇರಿದೆ’ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ಸ್ವಾಮೀಜಿ ಅವರ ಕೃಪಾಶೀರ್ವಾದಿಂದ ದೇಗುಲ ಲೋಕಾರ್ಪಣೆಯಾಗಿದೆ. ದೇಗುಲವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲ ಮೇಲಿದೆ’ ಎಂದರು.

ದೇಗುಲದ ದಾಖಲೆ, ಕೀಲಿಯನ್ನು ಶೃಂಗೇರಿ ಶಾರದಾ ಪೀಠದ ಯತಿವರ್ಯರಿಗೆ ಹಸ್ತಾಂತರಿಸಲಾಯಿತು. ಟ್ರಸ್ಟಿ ವಿ.ರಾಮರಾವ್‌ ಇತರರನ್ನು ಸನ್ಮಾನಿಸಲಾಯಿತು.

ಕಾಫಿ ಬೆಳೆಗಾರರಾದ ಗೌರಮ್ಮ ಬಸವೇಗೌಡ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT