ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಪೊಲೀಸ್ ವಶದಲ್ಲಿ ಮಾವೊವಾದಿ ಮುಖಂಡ ಬಿ.ಜಿ. ಕೃಷ್ಣಮೂರ್ತಿ, ಸಾವಿತ್ರಿ

Last Updated 10 ನವೆಂಬರ್ 2021, 19:31 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸಿಪಿಐನ (ಮಾವೊವಾದಿ) ಮುಖಂಡರಾದ ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರನ್ನು ಕೇರಳ–ಕರ್ನಾಟಕ ಗಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

‘ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರು ಕೇರಳ ಪೊಲೀಸರ ವಶದಲ್ಲಿದ್ದಾರೆ. ಅವರಿಬ್ಬರನ್ನು ನಮಗೆ ಒಪ್ಪಿಸುವ ವಿಚಾರವಾಗಿ ಈವರೆಗೆ ಯಾವುದೇ ಮಾಹಿತಿ ನೀಡಿಲ್ಲ’ ಎಂದು ನಕ್ಸಲ್‌ ನಿಗ್ರಹ ಪಡೆ ಕಾರ್ಕಳ ವಿಭಾಗದ ಎಸ್ಪಿ ಮಿಥುನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೃಷ್ಣಮೂರ್ತಿ ವಿರುದ್ಧ 50ಕ್ಕೂ ಹೆಚ್ಚು ಪ್ರಕರಣಗಳು ಮತ್ತು ಸಾವಿತ್ರಿ ವಿರುದ್ಧ 13ಕ್ಕೂ ಹೆಚ್ಚು ಪ್ರಕರಣಗಳು ಇವೆ ಎಂದು ಅವರು ತಿಳಿಸಿದರು.

ನಕ್ಸಲ್‌ ವಲಯದಲ್ಲಿ ‘ಬಿಜಿಕೆ’ ಎಂದು ಗುರುತಿಸಿಕೊಂಡಿರುವ ಬಿ.ಜಿ. ಕೃಷ್ಣಮೂರ್ತಿ ಅವರು ಶೃಂಗೇರಿ ತಾಲ್ಲೂಕಿನ ಬುಕ್ಕಡಿಬೈಲಿನ ನೆಮ್ಮಾರು ಎಸ್ಟೇಟ್‌ನವರು. ಬಿ.ಎ, ಎಲ್‌ಎಲ್‌ಬಿ ವ್ಯಾಸಂಗ ಮಾಡಿದ್ದಾರೆ. ಮಲೆನಾಡು ಭಾಗದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ಹೋರಾಟ ಸಹಿತ ವಿವಿಧ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು.

ಸಾಕೇತ್‌ ರಾಜನ್‌ ಹತ್ಯೆಯ ನಂತರ ಕೃಷ್ಣಮೂರ್ತಿ ಸಂಘಟನಾ ಕಾರ್ಯದ ನೇತೃತ್ವ ವಹಿಸಿದ್ದರು. ಅಜ್ಞಾತವಾಗಿರಲು ಈ ಭಾಗ ಸುರಕ್ಷಿತವಲ್ಲ ಎಂಬ ಕಾರಣಕ್ಕೆ ಕೆಲ ವರ್ಷಗಳ ಹಿಂದೆ ಇಲ್ಲಿಂದ ಕೇರಳದ ಕಡೆಗೆ ಹೋಗಿದ್ದರು. ಅಲ್ಲಿನ ಕಾಡುಗಳಲ್ಲಿ ಅವಿತುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಕೃಷ್ಣಮೂರ್ತಿಯ ಇರವಿನ ಬಗ್ಗೆ ಸುಳಿವು ನೀಡಿದವರಿಗೆ ₹ 5 ಲಕ್ಷ ಬಹುಮಾನ ನೀಡುವುದಾಗಿ ಕರ್ನಾಟಕ ಪೊಲೀಸ್‌ ಇಲಾಖೆ ಘೋಷಿಸಿತ್ತು.

ಸಾವಿತ್ರಿ ಅವರು ಕಳಸದ ಮಾವಿನಕೆರೆಯ ಮುಜೆಕಾನ್‌ ಸಮೀಪದ ಜರಿಮನೆ ಗ್ರಾಮದವರು. ಏಳನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಾರೆ. ಹಲವು ವರ್ಷಗಳಿಂದ ಅಜ್ಞಾತವಾಗಿದ್ದರು. ಕೃಷ್ಣಮೂರ್ತಿ ಅವರ ತಂಡದಲ್ಲಿದ್ದರು. ‘ಕಬಿನಿ ದಳಂ’ನ ನೇತೃತ್ವ ವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಸಾವಿತ್ರಿ ಅವರ ಬಗ್ಗೆ ಮಾಹಿತಿ- ಸುಳಿವು ನೀಡಿದವರಿಗೆ ₹ 1 ಲಕ್ಷ ಬಹುಮಾನ ನೀಡುವುದಾಗಿ ಕರ್ನಾಟಕ ಪೊಲೀಸ್‌ ಇಲಾಖೆ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT