ನರಸಿಂಹರಾಜಪುರ: ಹಲವು ವರ್ಷಗಳಿಂದ ಪ್ರಸ್ತಾಪವಾಗುತ್ತಿದ್ದ ಶಿವಮೊಗ್ಗ– ನರಸಿಂಹರಾಜಪುರ– ಕೊಪ್ಪ– ಶೃಂಗೇರಿ– ಮಂಗಳೂರು ರೈಲ್ವೆ ಮಾರ್ಗ ಯೋಜನೆಯನ್ನು ಕೈಬಿಟ್ಟು, ಬದಲಿ ಮಾರ್ಗದ ಸಮೀಕ್ಷೆಗೆ ರೈಲ್ವೆ ಇಲಾಖೆ ಮುಂದಾಗಿರುವುದಕ್ಕೆ ತಾಲ್ಲೂಕಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಎಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ಶೃಂಗೇರಿಗೆ ರೈಲು ಮಾರ್ಗ ನಿರ್ಮಾಣದ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಅದರ ಸಮೀಕ್ಷೆಗೂ ಹಣ ಮೀಸಲಿಡಲಾಗಿತ್ತು. ನಂತರ ಸರ್ಕಾರ ಬದಲಾಗಿ, ಯೋಜನೆ ನನೆಗುದಿಗೆ ಬಿತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಯುಪಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದರೂ ಪ್ರಯೋಜನವಾಗಲಿಲ್ಲ. ಈ ನಡುವೆ ಮುಖಂಡ ಕೆ. ಜಯಪ್ರಕಾಶ್ ಹೆಗ್ಡೆ ಅವರು ಇಲ್ಲಿಗೆ ರೈಲು ಸಂಪರ್ಕ ಕಲ್ಪಿಸುವ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ದರು.

ಡಿ.ವಿ. ಸದಾನಂದ ಗೌಡರು ಕೇಂದ್ರದ ರೈಲ್ವೆ ಸಚಿವರಾಗಿದ್ದಾಗ ಶೃಂಗೇರಿಗೆ ಶಿವಮೊಗ್ಗದ ಮೂಲಕ ರೈಲ್ವೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಬಜೆಟ್ನಲ್ಲಿ ಘೋಷಿಸಿದ್ದರು. 2018ರಲ್ಲಿ ಶಿವಮೊಗ್ಗ, ನರಸಿಂಹರಾಜಪುರ, ಕೊಪ್ಪ, ಶೃಂಗೇರಿ ಮೂಲಕ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಬಗ್ಗೆ ಸ್ಥಳ ಪರಿಶೀಲನೆ ಮತ್ತು ಸಂಚಾರ ದಟ್ಟಣೆ ಸಮೀಕ್ಷೆಯನ್ನೂ ಮಾಡಿಸಿದ್ದರು. ಆದರೆ, ಸದ್ಯ ಈ ಹಳೆಯ ಸಮೀಕ್ಷೆಯನ್ನು ಕೈಬಿಟ್ಟು ಶಿವಮೊಗ್ಗ–ಅರಸಾಳು– ತೀರ್ಥಹಳ್ಳಿ– ಕೊಪ್ಪ–ಶೃಂಗೇರಿ– ಬಾಳೆಹೊನ್ನೂರು– ಚಿಕ್ಕಮಗಳೂರು– ಬೇಲೂರು– ಹಾಸನ– ಮಂಗಳೂರು ಮಾರ್ಗಕ್ಕಾಗಿ ಸ್ಥಳ ಸಮೀಕ್ಷೆಗೆ (ಎಫ್ಎಲ್ಎಸ್) ಮುಂದಾಗಿದೆ. ಈ ಉದ್ದೇಶಿತ ಮಾರ್ಗದ ಸರ್ವೆಯಿಂದ ನರಸಿಂಹರಾಜಪುರವು ರೈಲು ಸೌಲಭ್ಯದಿಂದ ವಂಚಿತವಾಗಲಿದೆ.

ಭದ್ರಾವತಿ– ಎನ್.ಆರ್.ಪುರ ರೈಲು ಮಾರ್ಗ ಪುನಃ ಆರಂಭಿಸಲು ಯಾವುದೇ ಅಡೆ ತಡೆಗಳಿಲ್ಲ. ಅಲ್ಲದೇ ಮಿತವ್ಯಯದಲ್ಲಿ ಯೋಜನೆ ಪೂರ್ಣಗೊಳಿಸಬಹುದಾಗಿದೆ. ಈ ಹಿಂದೆಯೇ ಕೇಂದ್ರ ಸರ್ಕಾರ ಅರಣ್ಯ ಇಲಾಖೆಯ ಅನುಮತಿ ಪಡೆದು ನಿರ್ಮಿಸಲಾಗಿದ್ದ ಮಾರ್ಗವೂ ಹಾಗೆಯೇ ಇದೆ. ರೈಲು ಹಳಿಗಳನ್ನು ಅಳವಡಿಸುವುದು ಮಾತ್ರ ಉಳಿದಿರುವ ಕೆಲಸ. ಹಾಗಾಗಿ ಭದ್ರಾವತಿಯಿಂದ ನರಸಿಂಹರಾಜಪುರದವರೆಗೆ ಯಾವುದೇ ಅಡೆ ತಡೆಯಿಲ್ಲದೆ ರೈಲು ಮಾರ್ಗ ನಿರ್ಮಿಸಬಹುದು ಇಲ್ಲಿಂದ ಶೃಂಗೇರಿಗೆ ಮಾತ್ರ ಹೊಸ ಮಾರ್ಗ ನಿರ್ಮಾಣ ಮಾಡಬೇಕಾಗುತ್ತದೆ.

‘ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರ ಒತ್ತಡದಿಂದ ಅತಿಕಡಿಮೆ ದೂರದ (85 ಕಿ.ಮೀ) ಭದ್ರಾವತಿ–ಎನ್.ಆರ್.ಪುರ ರೈಲು ಮಾರ್ಗವನ್ನು ಕೈಬಿಡಲಾಗಿದೆ’ ಎಂದು ತಾಲ್ಲೂಕಿನ ಜನರು ಆರೋಪಿಸಿದ್ದಾರೆ

ಸ್ವಾತಂತ್ರ್ಯಪೂರ್ವದಲ್ಲೇ ರೈಲು ಸಂಪರ್ಕ ಹೊಂದಿದ್ದ ಪಟ್ಟಣಸ್ವಾತಂತ್ರ್ಯ ಪೂರ್ವದಲ್ಲೇ ರೈಲ್ವೆ ಸಾರಿಗೆಯ ಸೌಲಭ್ಯ ಹೊಂದಿದ್ದ ತಾಲ್ಲೂಕು ಕೇಂದ್ರ ಭದ್ರಾ ಅಣೆಕಟ್ಟೆ ನಿರ್ಮಾಣದಿಂದ ರೈಲು ಸಂಚಾರ ಸೌಲಭ್ಯದಿಂದ ವಂಚಿತವಾಯಿತು. ಭದ್ರಾ ಅಣೆಕಟ್ಟೆ ನಿರ್ಮಾಣಕ್ಕೆ ಮೊದಲು ತರೀಕೆರೆಯಿಂದ ನರಸಿಂಹರಾಜಪುರದವರೆಗೆ ಜನರು ಮತ್ತು ಸರಕುಗಳನ್ನು ಸಾಗಿಸುವ ಟ್ರಾಂಬೆ ಮಾರ್ಗವನ್ನು 1917ರ ಮೇ15ರಂದು ಆರಂಭಿಸಲಾಗಿತ್ತು. ಇದು ತರೀಕೆರೆ–ಹೊಸಳ್ಳಿ–ತಡಸ ಮಾರ್ಗವಾಗಿ ತಾಲ್ಲೂಕು ಕೇಂದ್ರಕ್ಕೆ ಬರುತ್ತಿತ್ತು. ಅಲ್ಲದೇ ತಡಸದಿಂದ ಮಾರಿದಿಬ್ಬದವರೆಗೂ ಮತ್ತೊಂದು ಮಾರ್ಗವೂ ಇತ್ತು. ತಡಸದಿಂದ ಹೆಬ್ಬೆಯವರೆಗೆ ಇನ್ನೊಂದು ಮಾರ್ಗವನ್ನು 1921ರ ಫೆಬ್ರುವರಿ 5ರಂದು ಆರಂಭಿಸಲಾಯಿತು.

ಇದೇ ಅವಧಿಯಲ್ಲಿ ಭದ್ರಾವತಿಯಲ್ಲಿ ಸ್ಥಾಪಿತವಾದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ (ವಿಐಎಸ್ಎಲ್) ಈ ಭಾಗದಲ್ಲಿ ದೊರೆಯುತ್ತಿದ್ದ ಇದ್ದಿಲು (ಚಾರ್ಕೋಲ್) ಸಾಗಣೆಗಾಗಿ ಒಂದು ಟ್ರಾಂಬೆ ರೈಲು ಮಾರ್ಗವನ್ನು ನಿರ್ಮಿಸಲಾಯಿತು. ಈ ಮಾರ್ಗದ ಮೂಲಕ ಬರುತ್ತಿದ್ದ ಸರಕು ಸಾಗಣೆಯ ರೈಲು ಭದ್ರಾವತಿ, ಜಂಕ್ಷನ್, ಕಣಗಲಸರ, ಮಾರಿದಿಬ್ಬ, ನೆಲಗದ್ದೆ, ಕೋಡಿಹಳ್ಳಿ, ಮುತ್ತಿನಕೊಪ್ಪ, ಆರಂಬಳ್ಳಿಯವರೆಗೂ ಬರುತ್ತಿತ್ತು. ಈ ಮಾರ್ಗದ ಮೂಲಕ ಭದ್ರಾವತಿಗೆ ಕೇವಲ 22 ಕಿ.ಮಿ ಆಗಿತ್ತು. ಈ ರೈಲು ಇದ್ದಿಲಿನೊಂದಿಗೆ ಸೌದೆ, ಬಂಬೂಗಳನ್ನೂ ಸಾಗಿಸುತ್ತಿತ್ತು. ಮುತ್ತಿನಕೊಪ್ಪದಲ್ಲಿ ಒಂದು ರೈಲ್ವೆ ನಿಲ್ದಾಣವೂ ಸಹ ಇತ್ತು. ಕೈಗಾರಿಕೆಗಳಲ್ಲಿ ಕಲ್ಲಿದ್ದಲು ಬಳಸಲು ಪ್ರಾರಂಭವಾಯಿತೋ ಆಗ ಈ ರೈಲು ಸಹ 1970ರ ವೇಳೆಗೆ ಬರುವುದು ನಿಂತಿತು. 1950ರಲ್ಲಿ ಮುಳುಗಡೆಯಾದ ರೈಲು ಮಾರ್ಗಕ್ಕೆ ಪರ್ಯಾಯವಾಗಿದ್ದ ಈ ರೈಲು ಮಾರ್ಗವನ್ನು ಜನರ ಪ್ರಯಾಣಕ್ಕೆ ಬಳಸುವ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಈ ಸಂದರ್ಭದಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇದು ಕಾರ್ಯಗತವಾಗಲಿಲ್ಲ. 1980ರ ದಶಕದಲ್ಲಿ ವಿಐಎಸ್ಎಲ್ ಈ ಮಾರ್ಗಕ್ಕೆ ಹಾಕಿದ್ದ ರೈಲ್ವೆ ಹಳಿಗಳನ್ನು ತೆರವುಗೊಳಿಸಿತು.

ಭದ್ರಾ ಅಣೆಕಟ್ಟು ನಿರ್ಮಾಣದಿಂದ ಸುಮಾರು 45 ಸಾವಿರ ಎಕರೆ ಫಲವತ್ತಾದ ಜಮೀನನ್ನು ಕಳೆದುಕೊಂಡು ಮಧ್ಯ ಕರ್ನಾಟಕಕ್ಕೆ ನೀರು ಒದಗಿಸುತ್ತಿರುವ ತಾಲ್ಲೂಕು ಕೇಂದ್ರಕ್ಕೆ ತೀರ್ಥಹಳ್ಳಿಯ ಮೂಲಕ ಪ್ರಸ್ತಾಪಿತ ರೈಲ್ವೆ ಮಾರ್ಗದ ಜತೆಗೆ ಶಿವಮೊಗ್ಗ ಅಥವಾ ಭದ್ರಾವತಿಯಿಂದ ಈ ಹಿಂದೆ ನರಸಿಂಹರಾಜಪುರದಲ್ಲಿದ್ದ ರೈಲ್ವೆ ಮಾರ್ಗದ ಮೂಲಕ ಶೃಂಗೇರಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಬಗ್ಗೆ ಸಮೀಕ್ಷೆಯಲ್ಲಿ ಸೇರಿಸಲು ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಈ ಭಾಗದ ಜನಪ್ರತಿನಿಧಿಗಳು ಪ್ರಯತ್ನಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.