ಸೋಮವಾರ, ಜನವರಿ 24, 2022
28 °C
ಎನ್‌.ಆರ್‌.ಪುರ: ಸಾಮಾನ್ಯ ಸಭೆಯಲ್ಲಿ ಮಳಿಗೆಗಳ ಬಾಡಿಗೆ ಮನ್ನಾ ವಿಚಾರ ಚರ್ಚೆ

ಸದಸ್ಯರ ಮಧ್ಯೆ ಮಾತಿನ ಚಕಮಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರಸಿಂಹರಾಜಪುರ: ಪಟ್ಟಣ ಪಂಚಾ ಯಿತಿ ಮಳಿಗೆಗಳಲ್ಲಿ ಬಾಡಿಗೆದಾರರ ಬಾಡಿಗೆ ಮನ್ನಾ ಮಾಡುವ ವಿಚಾರ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ನಾಮ ನಿರ್ದೇಶನ ಸದಸ್ಯ ಅರುಣ್ ಕುಮಾರ್ ಮಾತನಾಡಿ, ‘ಬಾಡಿಗೆ ಮನ್ನಾ ಮಾಡುವ ಹಾಗೂ ಬಾಡಿಗೆ ಕಡಿಮೆ ಮಾಡುವುದಕ್ಕೆ ಪಟ್ಟಣ ಪಂಚಾಯಿತಿಗೆ ಅಧಿಕಾರವಿದ್ದರೂ ಮಾಡುತ್ತಿಲ್ಲ ಎಂದು ಬಾಡಿಗೆದಾರರು ದೂರುತ್ತಿದ್ದಾರೆ’ ಎಂದು ತಿಳಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸದಸ್ಯ ಪ್ರಶಾಂತ್ ಶೆಟ್ಟಿ, ‘ಸುರಯ್ಯ ಬಾನು ಅವರ ಅಧ್ಯಕ್ಷತೆಯಲ್ಲಿ 2020ರ ನ.24ರಂದು ನಡೆದ ಸಭೆಯಲ್ಲಿ ಕೋವಿಡ್ ಮೊದಲ ಅಲೆಯ 4 ತಿಂಗಳ ಬಾಡಿಗೆ ಮನ್ನಾ ಮಾಡುವ ನಿರ್ಣಯವನ್ನು ಜಿಲ್ಲಾಧಿಕಾರಿಗೆ ಕಳುಹಿಸಿದ್ದು, ಈತನಕ ಯಾವುದೇ ಉತ್ತರ ಬಂದಿಲ್ಲ. ಆಡಳಿತ ಪಕ್ಷ ಮಳಿಗೆಯವರ ಪರ ಇದೆ’ ಎಂದರು.

ಇದಕ್ಕೆ ಸೈಯದ್ ವಸೀಂ ಧ್ಬನಿ ಗೂಡಿಸಿದರು. ಈ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷದವರ ನಡುವೆ ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷೆ ಜುಬೇದಾ ಅವರು, ‘ನಾಮನಿರ್ದೇಶಿತ ಸದಸ್ಯರು ಸಲಹೆ ಕೊಡಬಹುದು. ಏರುಧ್ವನಿಯಲ್ಲಿ ಮಾತನಾಡಬಾರದು’ ಎಂದರು.

ಮುಖ್ಯಾಧಿಕಾರಿ ಲೀಲಾವತಿ, ‘ಮಳಿಗೆದಾರರ ಬಾಡಿಗೆ ಮನ್ನಾ ಅಥವಾ ಕಡಿಮೆ ಮಾಡುವ ಅಧಿಕಾರ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಗೆ ಇಲ್ಲ. ಸರ್ಕಾರ ನಿರ್ಧಾರ ತೆಗೆದುಕೊಳ್ಳ
ಬಹುದು’ ಎಂದು ಸ್ಪಷ್ಟಪಡಿಸಿದರು.

ಕೋವಿಡ್ ಮೊದಲ ಅಲೆಯ 4 ತಿಂಗಳು, ಎರಡನೇ ಅಲೆಯ 3 ತಿಂಗಳು ಬಾಡಿಗೆ ಮನ್ನಾ ಮಾಡುವಂತೆ ಹಾಗೂ ಅಧಿಕ ಬಾಡಿಗೆ ಇದ್ದವರ ಬಾಡಿಗೆ ಕಡಿಮೆ ಮಾಡುವಂತೆ ಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿಗೆ ಕಳುಹಿಸಲು ತೀರ್ಮಾನಿಸಲಾಯಿತು.

ಪಟ್ಟಣದಲ್ಲಿ ಮಳೆಯಿಂದಾಗಿ ರಸ್ತೆ, ಚರಂಡಿ, ಕಟ್ಟಡಗಳಿಗೆ ಹಾನಿ ಸಂಭವಿಸಿದ್ದು, ಇದನ್ನು ದುರಸ್ತಿ ಪಡಿಸಲು ಸರ್ಕಾರ ಇದುವರೆಗೂ ಅನುದಾನ ಬಿಡುಗಡೆಮಾಡಿಲ್ಲ. ಈ ಬಗ್ಗೆ ಎಲ್ಲರೂ ಒಟ್ಟಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಸಭೆ ತೀರ್ಮಾನಿಸಿತು.

ಪಟ್ಟಣದ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವವರಿಗೆ 94ಸಿಸಿ ಅಡಿ ಮಂಜೂರಾತಿ ನೀಡಲು ಪಟ್ಟಣದ ವ್ಯಾಪ್ತಿಯ 11 ವಾರ್ಡ್‌ಗಳಲ್ಲೂ ಗ್ರಾಮ ಠಾಣಾ, ಕಂದಾಯ ಜಾಗವನ್ನು ಜಂಟಿ ಸರ್ವೆ ಮಾಡಿಸಿ ಹಕ್ಕು ಪತ್ರ ವಿತರಿಸಲು ಕ್ರಮಕೈಗೊಳ್ಳಲು ಸಭೆ ಸೂಚಿಸಿತು.

ಭಾವಸಾರ ಕ್ಷತ್ರಿಯ ಸಮಾಜಕ್ಕೆ ಸಮುದಾಯ ಭವನ ನಿರ್ಮಾಣ ಮಾಡಲು ಪಟ್ಟಣದ ವ್ಯಾಪ್ತಿಯಲ್ಲಿ ನಿವೇಶನ ನೀಡಲು ಮನವಿ ಸಲ್ಲಿಸಿದ್ದರೂ ಈ ವಿಚಾರ ಸಭಾ ನಡಾವಳಿಯಲ್ಲಿ ಬರದಿರುವುದಕ್ಕೆ ಸದಸ್ಯೆ ರೀನಾ ಮೋಹನ್ ಆಕ್ಷೇಪ ವ್ಯಕ್ತಪಡಿಸಿದರು.

ಅವಧಿ ಮುಗಿದಿರುವ ಮಳಿಗೆ ಗಳನ್ನು ಮಾರ್ಚ್ ತಿಂಗಳೊಳಗೆ ಹರಾಜು ಮಾಡಲು ಸಭೆ ನಿರ್ಧರಿಸಿತು. ಪಟ್ಟಣದ ವ್ಯಾಪ್ತಿಯಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರ ಸ್ಥಾಪನೆಗೆ ಅನುಮತಿ ದೊರೆತಿದ್ದು, ಕೂಡಲೇ ಆರಂಭಿಸಲು ಕ್ರಮಕೈಗೊಳ್ಳಬೇಕೆಂದು ಸದಸ್ಯ ಪ್ರಶಾಂತ್ ಶೆಟ್ಟಿ ಸೂಚಿಸಿದರು.

ಪಟ್ಟಣದ ವ್ಯಾಪ್ತಿಯಲ್ಲಿರುವ ಹೈಮಾಸ್ಟ್‌ ದೀಪಗಳನ್ನು ದುರಸ್ತಿ ಪಡಿಸಲು ಸಭೆ ಅನುಮೋದನೆ ನೀಡಿತು. 

ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ವಹಿಸಿದ್ದರು. ಉಪಾಧ್ಯಕ್ಷ ಎಲ್.ಮುಕುಂದ, ಮುಖ್ಯಾಧಿಕಾರಿ ಲೀಲಾವತಿ, ಸಿಬ್ಬಂದಿ ಉಷಾ, ಲಕ್ಷ್ಮಣ್ ಗೌಡ, ಮಮತಾ, ಚಂದ್ರಕಾಂತ್, ವಿಜಯಕುಮಾರ್, ಇತರ ಸದಸ್ಯರು ಇದ್ದರು.

ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪ್ರಶಾಂತ್

ಪಟ್ಟಣ ಪಂಚಾಯಿತಿಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪಟ್ಟಣದ 4ನೇ ವಾರ್ಡ್‌ನ ಸದಸ್ಯ ಪ್ರಶಾಂತ್ ಎಲ್.ಶೆಟ್ಟಿ ಆಯ್ಕೆಯಾದರು.

ಸ್ಥಾಯಿ ಸಮಿತಿ ಸದಸ್ಯರನ್ನಾಗಿ ಪ್ರಶಾಂತ್ ಎಲ್.ಶೆಟ್ಟಿ, ಪಿ.ಜೆ.ಶೋಜಾ, ಮುನವರ್ ಪಾಷ, ಸೈಯದ್ ಮಹಮ್ಮದ್, ಕುಮಾರಸ್ವಾಮಿ ಅವರ ಹೆಸರನ್ನು ಅಧ್ಯಕ್ಷೆ ಜುಬೇದಾ ಸೂಚಿಸಿದರು. ಪ್ರಶಾಂತ್ ಎಲ್.ಶೆಟ್ಟಿ ಅವರ ಹೆಸರನ್ನು ಸ್ಥಾಯಿ ಸಮಿತಿಯ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಶಾಂತ್ ಎಲ್.ಶೆಟ್ಟಿ, ‘ಪಟ್ಟಣ ಪಂಚಾಯಿತಿಯಲ್ಲಿ ಅನುದಾನದ ಕೊರತೆಯಿದ್ದು, ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿತ ಪ್ರಮಾಣದಲ್ಲಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ಸರ್ಕಾರ ಹಿಂದಕ್ಕೆ ಪಡೆದಿರುವ ಅನುದಾನವನ್ನು ಮತ್ತೆ ಬಿಡುಗಡೆ ಮಾಡಿಸಿ ಅಭಿವೃದ್ಧಿ ಕಾರ್ಯಕೈಗೊಳ್ಳಲು ಶ್ರಮಿಸುತ್ತೇವೆ’ ಎಂದು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.