ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬೈನ್ಡ್ ಹಾರ್ವೆಸ್ಟರ್ ಯಂತ್ರದತ್ತ ಒಲವು

ಭತ್ತದ ಕಟಾವಿಗೆ ಸಿಗದ ಕಾರ್ಮಿಕರ ಕೊರತೆ
Last Updated 17 ಡಿಸೆಂಬರ್ 2020, 6:57 IST
ಅಕ್ಷರ ಗಾತ್ರ

ಶೃಂಗೇರಿ: ತಾಲ್ಲೂಕಿನಾದ್ಯಂತ ಭತ್ತ ಸಾಂಪ್ರದಾಯಿಕವಾಗಿ ಭತ್ತ ಕಟಾವು ಮಾಡುತ್ತಿರುವುದಕ್ಕೆ ಜನರು ತಿಲಾಂಜಲಿ ನೀಡಿದ್ದು, ಬಹುತೇಕ ಜನರು ಯಂತ್ರಗಳಿಂದ ಕಟಾವು ಮಾಡಲು ಆಸಕ್ತಿ ತೋರುತ್ತಿದ್ದಾರೆ.

ಭತ್ತ ಬೆಳೆಯುವ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿತವಾಗುತ್ತಿದ್ದರೂ, ಈ ವರ್ಷ ಕೋವಿಡ್ ಹರಡುತ್ತಿರುವ ಹಿನ್ನೆಲೆಯಲ್ಲಿ ಹಲವಾರು ವರ್ಷ ನಾಟಿಯಾಗದ ಭತ್ತದ ಗದ್ದೆ ನಾಟಿಯಾಗಿರುವುದು ವಿಶೇಷ.

ಭತ್ತದ ನಾಟಿ ಕಾರ್ಮಿಕರಿಂದ:

ಬಹುತೇಕ ಭತ್ತದ ನಾಟಿ ಕಾರ್ಯ ಕಾರ್ಮಿಕರಿಂದಲೇ ಮಾಡಿಸುತ್ತಿದ್ದು, ಆಧುನಿಕ ಯಾಂತ್ರೀಕೃತ ನಾಟಿ ಮಲೆನಾಡಿನ ವಾತಾವರಣಕ್ಕೆ ಹೊಂದಾಣಿಕೆ ಆಗುತ್ತಿಲ್ಲ. ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗುವುದರಿಂದ ಯಾಂತ್ರೀಕೃತ ನಾಟಿಯಲ್ಲಿ ನೀರಿನ ನಿರ್ವಹಣೆ ಮಾಡಲಾಗದೇ, ಭತ್ತದ ಸಸಿ ಕೊಳೆಯುತ್ತದೆ. ಸಾಂಪ್ರದಾಯಿಕವಾಗಿ ಕೈಯಲ್ಲಿ ನಾಟಿ ಮಾಡುವುದರಿಂದ, ಸಸಿ ಕೊಳೆಯುವುದು ಕಡಿಮೆಯಾಗುತ್ತದೆ. ಡ್ರಂ ಸೀಡರ್ ಪದ್ಧತಿಯನ್ನು ಕೃಷಿ ಇಲಾಖೆ ಪರಿಚಯಿಸಿದ್ದರೂ, ನೀರನ್ನು ನಿಯಂತ್ರಿಸುವುದು ಕಷ್ಟಕರವಾಗಿದ್ದು, ಬಿತ್ತನೆ ಹಂತದಲ್ಲಿ ಕೊಳೆಯುವ ಸಾಧ್ಯತೆ ಇದೆ.

ಕಟಾವಿಗೆ ಕಂಬೈನ್ಡ್ ಹಾರ್ವೆಸ್ಟರ್:

ಭತ್ತ ಕಟಾವಿಗೆ ಬರುವ ಸಂದರ್ಭದಲ್ಲಿ ಅಡಿಕೆ, ಕಾಫಿ ಕಟಾವು ಆರಂಭವಾಗಿದೆ. ಬಿಸಿಲಿನಲ್ಲಿ ಕಾರ್ಮಿಕರು ಬಗ್ಗಿ ಭತ್ತದ ಕಟಾವು ಮಾಡಬೇಕಿದ್ದು, ಕಾರ್ಮಿಕರು ದೊರಕುತ್ತಿಲ್ಲ. ಕೆಲವೇ ವರ್ಷದ ಹಿಂದೆ ಕಟಾವು ಮಾಡಲು ಯಂತ್ರಗಳು ಲಭ್ಯವಾದಾಗ ಕಟಾವಿನ ಸಮಸ್ಯೆ ಬಹುತೇಕ ಪರಿಹಾರವಾಗಿತ್ತು. ಇತ್ತೀಚಿನ ವರ್ಷದಲ್ಲಿ ಕಂಬೈನ್ಡ್ ಹಾರ್ವೆಸ್ಟರ್ ಬಳಕೆಯೇ ಹೆಚ್ಚು ಜನಪ್ರೀಯವಾಗುತ್ತಿದೆ.

ಒಕ್ಕಲಾಟ ಒಂದೇ ಬಾರಿಗೆ ಆಗುತ್ತಿದ್ದರೂ, ಇದರಲ್ಲೂ ಕೆಲವಷ್ಟು ಸಮಸ್ಯೆಗಳಿವೆ. ಗದ್ದೆಯಲ್ಲಿ ಕೆಸರು ಇದ್ದರೆ ಕಟಾವಿಗೆ ಸಮಸ್ಯೆಯಾಗುತ್ತಿದ್ದು, ಇದಲ್ಲದೇ ಕಟಾವಿನ ನಂತರ ಹುಲ್ಲು ಯಂತ್ರದಡಿ ಸಿಲುಕಿ ಉಪಯೋಗಕ್ಕೆ ಬಾರದಂತಾಗುತ್ತಿದೆ. ಮಲೆನಾಡಿನ ಚಿಕ್ಕ ಚಿಕ್ಕ ಗದ್ದೆಗೆ ಯಂತ್ರ ಇಳಿದು, ಹತ್ತುವುದು ಸಹ ಸಮಸ್ಯೆ ಆಗುತ್ತಿದೆ. ಕೊಯ್ಲು ಮಾಡಿ ನಂತರ ಒಕ್ಕಲಾಟ ಮಾಡುವುದಕ್ಕಿಂತ ಈ ಯಂತ್ರ ರೈತರಿಗೆ ಹೆಚ್ಚು ಅನುಕೂಲಕರವಾಗಿದ್ದು, ರೈತರು ಒಲವು ತೋರುತ್ತಿದ್ದಾರೆ.

‘ಉತ್ತಮ ಫಸಲಿನ ನಿರೀಕ್ಷೆ’

‘ತಾಲ್ಲೂಕಿನಲ್ಲಿ ಈ ವರ್ಷ ಭತ್ತದ ಉತ್ತಮ ಫಸಲಿನ ನಿರೀಕ್ಷೆ ಇದೆ. ಈ ಹವಮಾನ ಭತ್ತಕ್ಕೆ ಪೂರಕವಾಗಿದೆ. ಇಲಾಖೆಯಿಂದ ಹೈಬ್ರಿಡ್ ತಳಿ ಬಿತ್ತನೆ ಬೀಜ ಪೂರೈಸಿದ್ದು, ತುಂಗಾ, ಐಇಟಿ ಭತ್ತದ ಬಿತ್ತನೆ ಬೀಜವನ್ನು ಸರ್ಕಾರದ ಸಹಾಯಧನದೊಂದಿಗೆ ವಿತರಿಸಲಾಗಿದೆ. ಇಲಾಖೆಯು ಭತ್ತ ಬೆಳೆಯುವ ರೈತರಿಗೆ ಸೂಕ್ತ ತಾಂತ್ರಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಸಚಿನ್ ಹೆಗಡೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT