ಶನಿವಾರ, ಜನವರಿ 16, 2021
17 °C
ರಸ್ತೆಗೆ ಡಾಂಬರು ಹಾಕಿ ಕೊಡದಿದ್ದರೆ ಸಾರ್ವಜನಿಕರಿಂದ ಪ್ರತಿಭಟನೆ ಎಚ್ಚರಿಕೆ

ರಾಷ್ಟ್ರೀಯ ಹೆದ್ದಾರಿ ಅಗೆದ ಪ.ಪಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪ: ಪಟ್ಟಣಕ್ಕೆ ನೀರು ಸರಬರಾಜಾಗುವ ಪೈಪ್‌ಲೈನ್ ಅನ್ನು ದುರಸ್ತಿಪಡಿಸುವ ನೆಪದಲ್ಲಿ ಪಟ್ಟಣ ಪಂಚಾಯಿತಿಯು ಸಿಗದಾಳಿನ ಬಳಿ ಪದೇಪದೇ ರಾಷ್ಟ್ರೀಯ ಹೆದ್ದಾರಿ 169 ಅನ್ನು ಅಗೆದು ರಸ್ತೆ ಹಾಳು ಮಾಡುತ್ತಿದೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶನಿವಾರ ಜೆಸಿಬಿ ಯಂತ್ರ ಬಳಸಿ ಪೈಪ್‌ಲೈನ್ ದುರಸ್ತಿಪಡಿಸುವ ಕೆಲಸಕ್ಕೆ ಕೈ ಹಾಕಿದ ಪಟ್ಟಣ ಪಂಚಾಯಿತಿ ಅಧಿಕಾರಿ, ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಅಗೆದರೆ ಹೆದ್ದಾರಿ ಬಂದ್ ಮಾಡಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಹರಿಹರಪುರದ ತುಂಗಾ ನದಿಯಿಂದ ಪಟ್ಟಣಕ್ಕೆ ನೀರು ಸರಬರಾಜು ಆಗುವ ಪೈಪ್‌ಲೈನ್ ಸಿಗದಾಳಿನ ಬಳಿ ರಾಷ್ಟ್ರೀಯ ಹೆದ್ದಾರಿ ಒಳ ಭಾಗದಲ್ಲಿ ಸೇರಿದೆ. ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯು ಮುನ್ನೆಚ್ಚರಿಕೆ ಕ್ರಮ ವಹಿಸಿ, ಪೈಪ್‌ಲೈನ್ ಸ್ಥಳಾಂತರಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

‘ದುರಸ್ತಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ಪಟ್ಟಣ ಪಂಚಾಯಿತಿ ಅನುಮತಿ ಪಡೆದಿಲ್ಲ’ ಎಂದು ಸ್ಥಳೀಯರು ಆಕ್ಷೇಪಿಸಿದರು. ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಪ್ರತಿಭಟನಾಕಾರರಿಗೆ ಸ್ಪಷ್ಟನೆ ನೀಡಲು ಮುಂದಾದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಜಾತಾ, ಉಪಾಧ್ಯಕ್ಷೆ ಗಾಯತ್ರಿ ಶೆಟ್ಟಿ ಅವರನ್ನು ಜನರು ತರಾಟೆಗೆ ತೆಗೆದುಕೊಂಡರು. ಸ್ಥಳೀಯರಾದ ರಂಜಿತ್ ಶೆಟ್ಟಿ, ಸಿಗದಾಳು ಜಯೇಂದ್ರ, ಹರಿಹರಪುರ ಪೊಲೀಸ್ ಸಿಬ್ಬಂದಿ ಮೊದಲಾದವರು ಪಾಲ್ಗೊಂಡಿದ್ದರು. 

ಪಟ್ಟಣ ಪಂಚಾಯಿತಿ​ ಹೊಣೆ
‘ಆಗಾಗ ರಸ್ತೆ ಅಗೆಯುವ ಮೂಲಕ ಪಟ್ಟಣ ಪಂಚಾಯಿತಿಯವರು ರಸ್ತೆ ಹಾಳು ಮಾಡುತ್ತಿದ್ದಾರೆ. ಜನರ ತೆರಿಗೆ ಹಣ ವ್ಯರ್ಥವಾಗುತ್ತಿದೆ. ಇಲ್ಲಿ ಹಲವು ಅಪಘಾತಗಳು ಸಂಭವಿಸಿವೆ. ಇದಕ್ಕೆ ಪಟ್ಟಣ ಪಂಚಾಯಿತಿ ನೇರ ಹೊಣೆ’ ಎಂದು ಗ್ರಾಮಾಂತರ ಪಂಚಾಯಿತಿ ಮಾಜಿ ಸದಸ್ಯ ಸತೀಶ್ ಚಂದ್ರ ಶೆಟ್ಟಿ ಎಚ್ಚರಿಸಿದರು.

‘ದುರಸ್ತಿ ನಂತರ ರಸ್ತೆಗೆ ಡಾಂಬರು ಹಾಕಿಕೊಡಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಸವರಾಜ್ ಟಿ.ಶಿಗ್ಗಾವಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.