ಗುರುವಾರ , ಮೇ 26, 2022
27 °C
ವಿಧಾನ ಪರಿಷತ್‌ ಚುನಾವಣೆ

ಕಾಫಿನಾಡು: ಪ್ರಾಣೇಶ್‌ ಗೆಲುವು, ಬಿಜೆಪಿ ವಿಜಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್‌ ಅವರು ಜಯ ಗಳಿಸಿದ್ದು, ಬಿಜೆಪಿ ಮುಖಂಡರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ನಗರದ ಬೇಲೂರು ರಸ್ತೆಯ ಎಸ್‌ಟಿಜೆ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಪ್ರಕ್ರಿಯೆ ಶುರುವಾಯಿತು. ಮತಪತ್ರಗಳ ಮಿಶ್ರಣ ಪ್ರಕ್ರಿಯೆ ನಂತರ ಎಣಿಕೆ ಪ್ರಕ್ರಿಯೆ ಶುರುವಾಯಿತು. ಒಟ್ಟು ಏಳು ಟೇಬಲ್‌ಗಳಲ್ಲಿ ಎಣಿಕೆ ನಡೆಯಿತು.

ಚಲಾವಣೆಯಾಗಿದ್ದ 2410 ಮತಗಳ ಪೈಕಿ 39 ಮತಗಳು ಅಸಿಂಧುವಾಗಿದ್ದವು. ಬಾಕಿ 2371 ಮತಗಳು ಸಿಂಧುವಾಗಿದ್ದವು.
2371 ಮತಗಳ ಪೈಕಿ ಬಿಜೆಪಿಯ ಪ್ರಾಣೇಶ್‌ ಅವರು 1188 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಕಾಂಗ್ರೆಸ್‌ನ ಎ.ವಿ. ಗಾಯತ್ರಿ ಶಾಂತೇಗೌಡ ಅವರು 1182 ಮತಗಳನ್ನ ಪಡೆದು ಸೋಲುಂಡರು.

ಮತ ಎಣಿಕೆ ಆರಂಭದಿಂದಲೂ ಇಬ್ಬರು ನಡುವೆ ಸಮಬಲದ ಪೈಪೋಟಿ ಇತ್ತು. ಅಂತಿಮ ಹಂತದಲ್ಲಿ ಪ್ರಾಣೇಶ್‌ ಅವರು ಆರು ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದರು.

‘ಒಂದು’, ‘ಶೂನ್ಯ’ ಮತ: ಆಮ್‌ ಆದ್ಮಿ ಪಕ್ಷದ ಡಾ.ಕೆ.ಸುಂದರಗೌಡ ಅವರು ಒಂದು ಮತ ಪಡೆದರು. ಇನ್ನು ಪಕ್ಷೇತರ ಅಭ್ಯರ್ಥಿಗಳು ಶೂನ್ಯ ಮತ ಪಡೆದರು. ಮತಗಳ ಎಣಿಕೆ ಮುಗಿಯುತ್ತಿದಂತೆ ಪಡೆದಿರುವ ಮತಗಳ ಅಂಕಿಅಂಶವನ್ನು ಅಭ್ಯರ್ಥಿಗಳಿಗೆ ತಿಳಿಸಲಾಯಿತು.

ಮರು ಎಣಿಕೆಗೆ ಕಾಂಗ್ರೆಸ್‌ ಅಭ್ಯರ್ಥ ಮನವಿ: ಅಲ್ಪ ಮತಗಳ ಅಂತರದಲ್ಲಿ ಹಿನ್ನಡೆಯಾಗಿದ್ದ ಗಾಯತ್ರಿ ಅವರು ಮರ ಎಣಿಕೆಗೆ ಜಿಲ್ಲಾ ಚುನಾವಣಾಧಿಕಾರಿ ಕೆ.ಎನ್‌.ರಮೇಶ್‌ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ರಮೇಶ್‌ ಅವರು ಅಭ್ಯರ್ಥಿಯ ಮನವಿಯನ್ನು ಚುನಾವಣಾ ಆಯೋಗಕ್ಕೆ ರವಾನಿಸಿದರು. ಆಯೋಗದ ಸೂಚನೆಗಾಗಿ ಸುಮಾರು ಎರಡೂವರೆ ಗಂಟೆ ಕಾಯಲಾಯಿತು. ಆಯೋಗದ ಸೂಚನೆ ನೀಡಿದ ನಂತರ ಜಿಲ್ಲಾಧಿಕಾರಿ ರಮೇಶ್‌ ಫಲಿತಾಂಶ ಪ್ರಕಟಿಸಿದರು. ಬಿಜೆಪಿಯ ಪ್ರಾಣೇಶ್‌ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಿದರು.

ಸಂಭ್ರಮಾಚರಣೆ: ಬೇಲೂರು ರಸ್ತೆಯ ಎಸ್‌ಟಿಜೆ ಕಾಲೇಜು ಮುಂದಿನ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ವಿಜಯೋತ್ಸವ ಆಚರಿಸಿದರು. ಪ್ರಾಣೇಶ್‌ ಅವರಿಗೆ ಹೂ ಮಾಲೆ ಹಾಕಿ ಅಭಿನಂದಿಸಿದರು. ಸಿಳ್ಳೆ, ಚಪ್ಪಾಳೆ, ಜೈಕಾರ ಮುಗಿಲು ಮುಟ್ಟಿದ್ದವು.

ಕಣ್ಣೀರಿಟ್ಟ ಗಾಯತ್ರಿ...
ಸೋಲಿನಲ್ಲೂ ಗೆಲುವನ್ನು ಕಂಡಿದ್ದೇನೆ. ಇದು ನನ್ನ ಸೋಲಲ್ಲ, ಗೆಲುವು ಎಂದು ಕಾಂಗ್ರೆಸ್‌ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರು ಕಣ್ಣೀರಿಟ್ಟರು.

ಸೋಲಿಗೆ ಯಾರು ಧೃತಿಗೆಡುವ ಅಗತ್ಯ ಇಲ್ಲ. ಯಾವುದೇ ಅಚಾತುರ್ಯಕ್ಕೆ ಕೈಹಾಕಬೇಡಿ. ನಾನು ನಿಮ್ಮೊಂದಿಗೆ ಇದ್ದೇನೆ ಎಂದು ದುಃಖಿತರಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು