ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೂರು: ರೈಲ್ವೆ ನಿಲ್ದಾಣ; ಲಿಫ್ಟ್‌ ಕಾರ್ಯಾರಂಭ

ಬಹುದಿನಗಳ ಬೇಡಿಕೆ ಈಡೇರಿಕೆ, ಪ್ರಯಾಣಿಕರ ಹರ್ಷ
Last Updated 26 ಜುಲೈ 2022, 6:19 IST
ಅಕ್ಷರ ಗಾತ್ರ

ಬೀರೂರು: ಇಲ್ಲಿನ ರೈಲು ನಿಲ್ದಾಣದಲ್ಲಿ ಲಿಫ್ಟ್‌ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಕಳೆದ ವಾರ ಕಾರ್ಯಾರಂಭ ಮಾಡಿದೆ. ಈ ಸೌಲಭ್ಯ ಒದಗಿಸಿದ್ದಕ್ಕಾಗಿ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಬೀರೂರು ಕೂಡ ಒಂದಾಗಿದ್ದು, 160 ವರ್ಷಕ್ಕೂ ಹೆಚ್ಚಿನ ಇತಿಹಾಸವಿರುವ ಹಳೆಯ ಜಂಕ್ಷನ್‌ ಆಗಿದೆ. ನವದೆಹಲಿ, ಚೆನ್ನೈ, ಜೋಧಪುರ, ಜೈಪುರ, ಮಂಬೈ, ಅಹಮದಾಬಾದ್‌ ಸೇರಿದಂತೆ ದೇಶದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲ ರೈಲುಗಳಿಗೆ ಇಲ್ಲಿ ನಿಲುಗಡೆಯೂ ಇದೆ. ನಿಲ್ದಾಣ ನವೀಕರಣ ಸಂದರ್ಭದಲ್ಲಿ ಪಕ್ಕದ ಪ್ಲಾಟ್‌ ಫಾರಂಗಳಿಗೆ ತೆರಳಲು ಹಳೆಯ ಮೇಲುಸೇತುವೆ ತೆಗೆದು ಹೊಸ ಸೇತುವೆ ನಿರ್ಮಿಸಲಾಗಿತ್ತು. ಆದರೆ, ಅದು ವೃದ್ಧರು, ರೋಗಿಗಳು, ಅಶಕ್ತರಿಗೆ ನೆರವಾಗುವ ಬದಲು ಪ್ರಯಾಸಕರವಾಗಿ ಪರಿಣಮಿಸಿತ್ತು.

ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಿಭಾಗ ಸ್ಥಾಪನೆ ಆದಾಗಿನಿಂದಲೂ ಬೀರೂರು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವಂತೆ ಪ್ರಯಾಣಿಕರು ಒತ್ತಾಯಿಸುತ್ತಲೇ ಬಂದಿದ್ದರು. ಪರಿವೀಕ್ಷಣೆಗಾಗಿ ಹಿರಿಯ ಅಧಿಕಾರಿಗಳು ಭೇಟಿ ನೀಡಿದಾಗಲೂ ವಿವಿಧ ಸಂಘಟನೆಗಳು ಇಲ್ಲಿ ವಿಐಪಿ ಲಾಂಜ್‌ ಬೇಕು, ಕುಡಿಯುವ ನೀರು, ರೈಲು ಬೋಗಿಗಳ ನಿಲುಗಡೆ ಡಿಜಿಟಲ್‌ ಸೂಚನಾ ಫಲಕ, ರೈಲ್ವೆ ಆಸ್ಪತ್ರೆ ಸ್ಥಾಪನೆ, ಪೊಲೀಸ್‌ ಹೊರಠಾಣೆಯನ್ನು ಕೆಳಗಡೆ ಸ್ಥಾಪಿಸಬೇಕು ಎನ್ನುವ ಹಲವು ಬೇಡಿಕೆಗಳನ್ನು ಮಂಡಿಸುತ್ತಲೇ ಬಂದಿದ್ದವು.

ಜಾಫರ್‌ ಷರೀಫ್‌ ರೈಲ್ವೆ ಮಂತ್ರಿಯಾಗಿದ್ದ ಕಾಲದಲ್ಲಿ ಬ್ರಾಡ್‌ಗೇಜ್‌ ಆಗಿದ್ದು ಬಿಟ್ಟರೆ ಕೆಲವು ರೈಲುಗಳಿಗೆ ನಿಲುಗಡೆ ದೊರೆತಿದ್ದೇ ದೊಡ್ಡ ಸಾಧನೆ ಆಗಿತ್ತು. ಇತ್ತೀಚಿನ ದಿನಗಳಲ್ಲಿ ರಾಜ್ಯದವರೇ ಆದ ಸಚಿವ ಸುರೇಶ್‌ ಅಂಗಡಿ ಅವರು ನಿಲ್ದಾಣಕ್ಕೆ ಭೇಟಿ ನೀಡಿದಾಗಲೂ ಹಲವು ಬೇಡಿಕೆ ಪಟ್ಟಿ ನೀಡಿದ್ದ ಪ್ರಯಾಣಿಕರ, ಬಳಕೆದಾರರ ವೇದಿಕೆಗಳು ಅವುಗಳ ಈಡೇರಿಕೆಗೆ ಆಗ್ರಹಿಸಿದ್ದವು.

ಈ ಎಲ್ಲ ಕೋರಿಕೆಗಳ ಫಲವಾಗಿ ನಿಲ್ದಾಣದಲ್ಲಿ ಸಾಕಷ್ಟು ಬದಲಾವಣೆ ಆಗಿತ್ತು. ಇತ್ತೀಚೆಗೆ ಬೀರೂರು- ಹೊಸದುರ್ಗ ನಿಲ್ದಾಣಗಳ ನಡುವೆ ವಿದ್ಯುತ್‌ ಚಾಲಿತ ರೈಲು ಸಂಚಾರ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದ್ದು, ಈ ವರ್ಷದ ಅಂತ್ಯದ ವೇಳೆಗೆ ತುಮಕೂರು- ಹುಬ್ಬಳ್ಳಿ ನಡುವೆ ವಿದ್ಯುತ್‌ ರೈಲು ಸಂಚಾರ ಆರಂಭದ ನಿರೀಕ್ಷೆ ಗರಿಗೆದರಿಸಿದೆ. ಈಗ ಪ್ರಯಾಣಿಕರ ಅನುಕೂಲಕ್ಕಾಗಿ ಎರಡು ಪ್ಲಾಟ್‌ಫಾರಂಗಳಲ್ಲಿ ಲಿಫ್ಟ್‌ ಅಳವಡಿಸಿ ಅವು ಕಾರ್ಯಾರಂಭ ಮಾಡಿರುವುದು ನಾಗರಿಕರಲ್ಲಿ ಹರ್ಷ ಮೂಡಿಸಿದೆ.

ಹಲವು ಬೇಡಿಕೆ ಈಡೇರಿರುವ ಸಂತಸದ ನಡುವೆಯೇ ಪ್ರಯಾಣಿಕರ ಕೋಚ್‌ ನಿಲುಗಡೆ ಡಿಜಿಟಲ್‌ ಪಟ್ಟಿ ಕೆಲಸ ಸ್ಥಗಿತಗೊಳಿಸಿದೆ. ಇದರಿಂದ ರಾತ್ರಿ ವೇಳೆ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಅನನುಕೂಲ ಉಂಟಾಗುತ್ತಿದೆ. ವೇಗದ ರೈಲುಗಳಿಗೆ ಎರಡು ನಿಮಿಷ ಮಾತ್ರ ನಿಲುಗಡೆ ಇದ್ದು, ಹೊರರಾಜ್ಯಗಳಿಗೆ ಪ್ರಯಾಣಿಸುವ, ಲಗೇಜ್‌ ಹೆಚ್ಚು ಇರುವವರ ಪಾಡು ಸಂಕಷ್ಟಕ್ಕೆ ಸಿಲುಕಿದೆ. ತಮಗೆ ನಿಗದಿಯಾದ ರೈಲು ಡಬ್ಬಿ ಎಲ್ಲಿ ನಿಲ್ಲುತ್ತದೆ ಎನ್ನುವ ಅರಿವು ಸಿಗದೆ ಸಮಸ್ಯೆ ಅನುಭವಿಸುವಂತಾಗುತ್ತಿದೆ ಎನ್ನುವುದು ಹಲವರ ದೂರು.

ಇದೇ ವೇಳೆ ಬೆಳಗ್ಗಿನ ಚಿಕ್ಕಮಗಳೂರು- ಶಿವಮೊಗ್ಗ, ಶಿವಮೊಗ್ಗ ತಿರುಪತಿ ರೈಲುಗಳನ್ನು ನಾಲ್ಕನೇ ಪ್ಲಾಟ್‌ಫಾರಂನಲ್ಲಿ ಹಾಕುತ್ತಿದ್ದು, ಪ್ರಯಾಣಿಕರ ಅನುಕೂಲಕ್ಕಿಂತ ಇಲಾಖೆ ತನ್ನ ಅನುಕೂಲಕ್ಕೆ ಆದ್ಯತೆ ನೀಡುತ್ತಿದೆ. ಈ ರೈಲುಗಳಲ್ಲಿ ವಯಸ್ಕರು, ರೋಗಿಗಳು, ಸ್ತ್ರೀಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದು, ಲಿಫ್ಟ್‌ ಇದ್ದರೂ ಪ್ರಯೋಜನಕ್ಕೆ ಬಾರದಂತೆ ಆಗಿದೆ. ಅನಿವಾರ್ಯ ಸಂದರ್ಭ ಹೊರತುಪಡಿಸಿ ಎರಡು ಅಥವಾ ಮೂರನೇ ಪ್ಲಾಟ್‌ಫಾರಂನಲ್ಲಿ ಈ ರೈಲುಗಳಿಗೆ ನಿಲುಗಡೆ ಕೊಟ್ಟರೆ ಅನುಕೂಲ ಎನ್ನುವುದು ನಾಗರಿಕರ ಒತ್ತಾಯ.

ಹಿರಿಯ ಅಧಿಕಾರಿಗಳು ನಿಲ್ದಾಣ ಮೇಲ್ದರ್ಜೆಗೆ ಏರಿಸುವ ಜತೆಗೆ ಪ್ರಯಾಣಿಕರ ಅನುಕೂಲಗಳ ಬಗ್ಗೆಯೂ ಗಮನ ಹರಿಸಬೇಕು ಎನ್ನುವುದು ಪ್ರಯಾಣಿಕರ ಮನವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT