ಎಲ್ಲಾ ರೀತಿಯ ಮುನ್ನೆಚ್ಚರಿಕೆಗೆ ಕ್ರಮ: ಜಿಲ್ಲಾಧಿಕಾರಿ
ಮಳೆ ಅನುಹುತ ತಡೆಯಲು ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ತಹಶೀಲ್ದಾರ್ ನೇತೃತ್ವದಲ್ಲಿ ತಾಲ್ಲೂಕುವಾರು ಸಭೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು. ಒಣಗಿರುವ ಮರ ಮತ್ತು ಕೊಂಬೆಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ತಿಳಿಸಲಾಗಿದೆ. ಅಗ್ನಿಶಾಮಕ ದಳದ ಬಳಿ ಇರುವ ಲೈಫ್ ಜಾಕೆಟ್ ಬೋಟ್ ಸೇರಿ ಎಲ್ಲಾ ಪರಿಕರಗಳು ಸರಿ ಇವೆಯೇ ಎಂದು ಪರಿಶೀಲಿಸಿ ವರದಿ ನೀಡಲು ಸೂಚನೆ ನೀಡಲಾಗಿದೆ. ಪ್ರವಾಹ ಬಂದರೆ ಜನರನ್ನು ಸ್ಥಳಾಂತರ ಮಾಡಲು ಸುರಕ್ಷಿತ ಸ್ಥಳ ಸರ್ಕಾರಿ ಶಾಲೆ ಮತ್ತು ಸಮುದಾಯ ಭವನ ಕಟ್ಟಡಗಳನ್ನೂ ಗುರುತು ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 260 ಸೇತುವೆಗಳಿದ್ದು ಅವುಗಳ ಸುರಕ್ಷತೆ ಪರಿಶೀಲಿಸಿ ವರದಿ ನೀಡಲು ಲೋಕೋಪಯೋಗಿ ಇಲಾಖೆಗೆ ತಿಳಿಸಲಾಗಿದೆ ಎಂದರು. ‘ಕೊಪ್ಪ ತಾಲ್ಲೂಕಿನ ಗುಡ್ಡೆತೋಟವು ಪ್ರಮುಖ ದುರ್ಬಲ ಪ್ರದೇಶವಾಗಿದೆ. ಅಲ್ಲಿರುವ ಜನ ಸ್ಥಳಾಂತರಕ್ಕೆ ಒಪ್ಪುತ್ತಿಲ್ಲ. ಒಂದು ಮನೆಯಂತೂ ಸ್ಥಳಾಂತರ ಮಾಡಲೇಬೇಕಾದ ಸ್ಥಿತಿಯಲ್ಲಿದೆ. ಜೋರು ಮಳೆ ಬಂದರೆ ಒತ್ತಾಯ ಪೂರ್ವಕವಾಗಿಯಾದರೂ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಗುವುದು’ ಎಂದು ತಿಳಿಸಿದರು.