ನರಸಿಂಹರಾಜಪುರ: ರಂಗನಾಥಸ್ವಾಮಿ ಜಾತ್ರೋತ್ಸವ ಇಂದಿನಿಂದ

ನರಸಿಂಹರಾಜಪುರ: ತಾಲ್ಲೂಕಿನ ಹೊನ್ನೆಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಸಗಲ್ಲು ರಂಗನಾಥಸ್ವಾಮಿ ದೇವಾಲಯವು ಐತಿಹಾಸಿಕ ಪ್ರಾಮುಖ್ಯತೆ ಹೊಂದಿದ್ದು, ಫೆ.5ರಿಂದ 7ರವರೆಗೆ ಜಾತ್ರಾಮಹೋತ್ಸವ ನಡೆಯಲಿದೆ.
ಕೂಸಗಲ್ಲು ರಂಗನಾಥಸ್ವಾಮಿ ದೇವಾಲಯವು ಸುಮಾರು 350 ವರ್ಷಗಳಿಗಿಂತಲೂ ಪುರಾತನವಾದುದು. ಈ ದೇವಸ್ಥಾನಕ್ಕೆ ಹಿಂಬಾಗಿಲಿರುವುದು ವಿಶೇಷ.
ಸ್ಥಳ ಪುರಾಣ: ದೇವಾಲಯದ ಕಟ್ಟಡ, ಹಿಂದೆ ಪಾಳೆಗಾರರ ಮನೆಯಾಗಿತ್ತು. ಇದರಲ್ಲಿ ಅಣ್ಣ–ತಮ್ಮ ಹಾಗೂ ಅವರ ಮಡದಿಯರು ವಾಸವಾಗಿದ್ದರು. ರಂಗನಾಥಸ್ವಾಮಿ ಯಾವ ಸ್ಥಳದಲ್ಲಿ ನೆಲೆ ನಿಲ್ಲಬೇಕು ಎಂಬುದನ್ನು ನಿರ್ಧರಿಸಲು ದೂರದಿಂದ ಬಾಣಬಿಟ್ಟಾಗ ಅದು ಇಲ್ಲಿನ ಗಿರಿಯ ಮೇಲ್ಭಾಗದಲ್ಲಿ ಬಂದು ನಿಂತಿತ್ತು. (ಅದರ ಗುರುತಾಗಿ ಗಿರಿಯ ಮೇಲೆ ಕಲ್ಲು ಕಂಬವಿದೆ. ಇದು ಏಕ ಶಿಲೆಯಿಂದ ಕೂಡಿದೆ. ಇಲ್ಲಿ ಜಾತ್ರೋತ್ಸವದಲ್ಲಿ ದೀಪ ಹಚ್ಚಲಾಗುತ್ತದೆ)
ಬ್ರಾಹ್ಮಣ ವೇಷದಲ್ಲಿ ಪಾಳೆಗಾರನ ಮನೆಗೆ ಹೋದ ರಂಗನಾಥ ಸ್ವಾಮಿ, ಮನೆ ಬಿಟ್ಟುಕೊಡುವಂತೆ ಪಾಳೆಗಾರನ ಮಡದಿಯರಿಗೆ ವಿನಂತಿ ಮಾಡುತ್ತಾನೆ. ಪಾಳೆಗಾರರು ಮನೆಗೆ ಬಂದಾಗ ಅವರು ವಿಷಯವನ್ನು ತಿಳಿಸುತ್ತಾರೆ. ಬ್ರಾಹ್ಮಣನನ್ನು ಕೊಲ್ಲಲು ಅಣ್ಣ–ತಮ್ಮ ಇಬ್ಬರು ಮುಂದಿನ ಹಾಗೂ ಹಿಂದಿನ ಬಾಗಿಲಿನಲ್ಲಿ ಕಾದು ಕೂರುತ್ತಾರೆ. ಇದನ್ನು ತಿಳಿದಿರದ ಪತ್ನಿಯರು ಇವರನ್ನು ನೋಡಿ ಮನೆ ಕೇಳುತ್ತಿದ್ದವನು ಬಂದ ಎಂದು ಹೇಳುತ್ತಾರೆ. ಆಗ ಅಣ್ಣ– ತಮ್ಮಂದಿರ ನಡುವೆ ಕಾಳಗ ನಡೆದು ಇಬ್ಬರೂ ಅಸುನೀಗುತ್ತಾರೆ.
ಸತಿ ಸಹಗಮನಕ್ಕೆ ಪತ್ನಿಯರು ಮುಂದಾದಾಗ, ರಂಗನಾಥಸ್ವಾಮಿ ತನ್ನ ನಿಜ ಸ್ವರೂಪ ತೋರುತ್ತಾನೆ. ಅವನ ಬಳಿ ತಮಗೆ ಮುಕ್ತಿ ಕೊಡುವಂತೆ ಹಾಗೂ ಗಂಡಂದಿರು ಇಲ್ಲಿ ನೆಲೆಸಲು ಅವಕಾಶ ಕೊಡುವಂತೆ ಬೇಡಿಕೊಳ್ಳುತ್ತಾರೆ. ದೇವರು ಒಪ್ಪಿಕೊಂಡು, ದೇವಸ್ಥಾನದ ವ್ಯಾಪ್ತಿಯಲ್ಲಿ ಅಣ್ಣ–ತಮ್ಮ ಭೂತ ಮತ್ತು ಸರಪಳಿ ಭೂತ ಹಾಗೂ ಪತ್ನಿಯರು ಊರು ಚೌಡಿ ಮತ್ತು ಬೇರಿ ಚೌಡಿ ರೂಪದಲ್ಲಿ ನೆಲೆಸಲು ಅವಕಾಶ ನೀಡಲಾಗಿದೆ ಎನ್ನುವುದು ಜನಪದ ಕತೆ.
ಇಲ್ಲಿನ ಜಾತ್ರೆಗೆ ಅಳೇಹಳ್ಳಿ ಗ್ರಾಮದಲ್ಲಿರುವ ರಂಗನಾಥಸ್ವಾಮಿ ಹಾಗೂ ಕಂಕಳ್ಳಿ ಗ್ರಾಮದಲ್ಲಿರುವ ರಂಗನಾಥಸ್ವಾಮಿಯ ದೇವರ ಬಿಂಬವನ್ನು ಗಿರಿ ಹತ್ತುವ ದಿನ ತರುವುದು ವಿಶೇಷ.
ದೇವಸ್ಥಾನ ಸಮೀಪ ಹೊಳೆಯಿದ್ದು ಅಲ್ಲಿ ಕೂಸಗಲ್ಲು ರಂಗನಾಥಸ್ವಾಮಿ ಹಾಗೂ ಅಳೇಹಳ್ಳಿ ರಂಗನಾಥಸ್ವಾಮಿ ದೇವರ ಪ್ರತಿಬಿಂಬ ಹೊತ್ತು ಹೋಗುತ್ತಾರೆ. ಈ ಗಣಗಳ ಸಮಕ್ಷಮದಲ್ಲಿ ಹುಚ್ಚು ಬಿಡಿಸುತ್ತಿದ್ದುದರಿಂದ ಇದಕ್ಕೆ ಹುಚ್ಚು ಬಿಡಿಸುವ ಹೊಳೆ ಎಂದು ಹೆಸರು ಬಂದಿದೆ.
ಗಿರಿಯ ಮೇಲ್ಗಡೆ ವ್ಯಾಘ್ರಗವಿ ಇದ್ದು, ಇಲ್ಲಿ ಹುಲಿ ವಾಸವಿತ್ತು ಎಂದು ಹೇಳಲಾಗುತ್ತದೆ. ಪಶ್ಚಿಮ ದಿಕ್ಕಿನ ಬಂಡೆಗಳ ಸುರಂಗದಲ್ಲಿ ಋಷಿ ಮುನಿ ತಪಸ್ಸು ಮಾಡಿರುವ ಪ್ರತೀತಿ ಇದೆ.
ದೇವಸ್ಥಾನ ಸಮಿತಿಯವರು ಸರ್ಕಾರದ ಅನುದಾನದಿಂದ ಮತ್ತು ದಾನಿಗಳ ನೆರವಿನಿಂದ ಶಿಥಿಲಗೊಂಡಿದ್ದ ದೇವಸ್ಥಾನ ನವೀಕರಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.