ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪ: ಹದಗೆಟ್ಟ ರಸ್ತೆಯಲ್ಲಿ ಹೈರಾಣಾದ ಸವಾರರು

ಬೈಪಾಸ್ ರಸ್ತೆ ಸರಿಪಡಿಸಿಕೊಡುವಂತೆ ಸಾರ್ವಜನಿಕರ ಆಗ್ರಹ
Last Updated 17 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಕೊಪ್ಪ: ಪಟ್ಟಣ ಸಮೀಪದ ಅಮ್ಮಡಿ, ಮೇಲಿನ ಕೌರಿ, ಗುಣವಂತೆ ರಸ್ತೆ ಮೂಲಕ ಪಟ್ಟಣವನ್ನು ತಲುಪಬಹುದಾದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಹೊಂಡ ಗುಂಡಿಗಳಿಂದಾಗಿ ಜನರು, ವಾಹನಗಳು ಓಡಾಡದ ದುಸ್ಥಿತಿ ನಿರ್ಮಾಣವಾಗಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯನ್ನು ಅಭಿವೃದ್ಧಿಪಡಿಸಿದರೆ ಸಂಚಾರ ದಟ್ಟಣೆ ತಡೆದು ಪಟ್ಟಣ ಕಡೆಯಿಂದ ತೀರ್ಥಹಳ್ಳಿ ಕಡೆಗೆ, ಶೃಂಗೇರಿ ಕಡೆಗೆ ಹೋಗುವಂತೆ ಅವಕಾಶ ಕಲ್ಪಿಸುವುದು ಸಾಧ್ಯವಾಗುತ್ತದೆ. ಅಲ್ಲದೇ, ಸುಲಭ ಮಾರ್ಗವೂ ಹೌದು. ಇದೇ ರಸ್ತೆಯನ್ನು ಬೈಪಾಸ್ ರಸ್ತೆಯೆಂದು ಪರಿಗಣಿಸಿ, ಅಭಿವೃದ್ಧಿಪಡಿಸಬೇಕೆಂಬ ಜನರ ಬೇಡಿಕೆ ಹಲವು ವರ್ಷಗಳದ್ದಾಗಿದೆ.

ಈ ರಸ್ತೆಗೆ ಡಾಂಬರು ಹಾಕಿ ಕೆಲವೇ ವರ್ಷಗಳಲ್ಲಿ ಅದು ಕಿತ್ತು ಹೋಗಿದ್ದು, ಕಳಪೆ ಕಾಮಗಾರಿ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ರಸ್ತೆ ಮಾರ್ಗದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯೂ ಇದ್ದು, ಹೊಸದಾಗಿ ಐಟಿಐ ಕಾಲೇಜು ನಿರ್ಮಾಣವಾಗುತ್ತಿರುವುದರಿಂದ ರಸ್ತೆ ನಿರ್ಮಾಣ ಅಗತ್ಯವಾಗಿದೆ ಎಂದು ಒತ್ತಾಯಿಸಿದ್ದಾರೆ.

‘ಡಾಂಬರು ಕಂಡು ಕೆಲವೇ ವರ್ಷಗಳಲ್ಲಿ ರಸ್ತೆ ಕಿತ್ತು ಹೋಗಿದೆ. ಇದು ಗ್ರಾಮಾಂತರ ಪಂಚಾಯಿತಿ ವ್ಯಾಪ್ತಿಗೆ ಸೇರಿರುವುದರಿಂದ ಅವರು ಹೆಚ್ಚಿನ ಕಾಳಜಿ ತೋರಿಸಿ, ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ’ ಎಂದು ಗ್ರಾಮಸ್ಥ ಅಮ್ಮಡಿ ರಾಜೇಶ್ ಒತ್ತಾಯಿಸಿದ್ದಾರೆ.

ಜನಪ್ರತಿನಿಧಿಗಳು ಕಾಳಜಿ ವಹಿಸುತ್ತಿಲ್ಲ: ‘ರಸ್ತೆ ಕುರಿತು ಜನಪ್ರತಿನಿಧಿಗಳು ಕಾಳಜಿ ವಹಿಸುತ್ತಿಲ್ಲ. ರಸ್ತೆ ಮಾಡಿ 4 ವರ್ಷ ಕಳೆಯುವುದರೊಳಗೆ ಹೊಂಡ ಗುಂಡಿಗಳಿಂದಾಗಿ ನಡೆದಾಡಲು ಸಾಧ್ಯವಾಗುತ್ತಿಲ್ಲ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆ ಹೊಂಡ ಗುಂಡಿಗಳಲ್ಲಿ ನೀರು ನಿಲ್ಲುವಂತಾಗಿದೆ’ ಎಂದು ಗ್ರಾಮಸ್ಥ ಅಮ್ಮಡಿ ಅಶೋಕ್ ಹೇಳಿದ್ದಾರೆ.

ಸಮಸ್ಯೆ ನಿವಾರಿಸುವಂತೆ ಒತ್ತಾಯ: ಗ್ರಾಮಾಂತರ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಆರ್. ಸಂಜೀವ ಮಾತನಾಡಿ, ‘ಈ ಭಾಗದಲ್ಲಿ ಆಶ್ರಯ ನಿವೇಶನಕ್ಕೆ 6 ಎಕರೆ ಜಾಗ ಮಂಜೂರಾಗಿದೆ. ಈ ಹಿಂದೆ ಶಾಸಕ ರಾಜೇಗೌಡ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾಗ ರಸ್ತೆ ಸಮಸ್ಯೆ ಅರಿತು, ರಸ್ತೆ ನಿರ್ಮಾಣಕ್ಕೆ ₹ 1 ಕೋಟಿ ಅನುದಾನ ತಂದಿದ್ದರು. ಕಾಮಗಾರಿಗೆ ಟೆಂಡರ್ ಪ್ರಕ್ರಿಯೆಯೂ ಮುಗಿದಿತ್ತು. ಸಮಸ್ಯೆ ನಿವಾರಿಸುವಂತೆ ನಾವೂ ಒತ್ತಾಯಿಸಿದ್ದೇವೆ’ ಎಂದು ಹೇಳಿದ್ದಾರೆ.

ಪ್ರತಿಭಟನೆಯ ಎಚ್ಚರಿಕೆ
ಶಾಸಕ ಟಿ.ಡಿ. ರಾಜೇಗೌಡ ಅವರು ಪ್ರತಿಕ್ರಿಯಿಸಿ, ‘ಹಿಂದಿನ ಸರ್ಕಾರವಿದ್ದಾಗ ಮಂಜೂರಾದ ರಸ್ತೆ ಕಾಮಗಾರಿ ತಾತ್ಕಾಲಿಕ ತಡೆ ಹಿಡಿದ್ದಾರೆ. ಹಣ ನೀಡುವುದಾಗಿ ಹೇಳಿದ್ದಾರೆ, ಒಂದು ವೇಳೆ ಅನುದಾನ ಬಿಡುಗಡೆಗೊಳಿಸದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಜಿಲ್ಲಾಧಿಕಾರಿಗೆ ಮನವಿ ನೀಡಿ, ಮುಖ್ಯಮಂತ್ರಿಗೆ ಕಳುಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT