ಗುರುವಾರ , ಅಕ್ಟೋಬರ್ 29, 2020
21 °C
ಅಂತರರಾಷ್ಟ್ರೀಯ ನಾಗರಿಕ ಸೇವೆಗೆ ಸಾಫ್ಟ್‌ವೇರ್‌ ಎಂಜಿನಿಯರ್‌

ವಿಶ್ವಸಂಸ್ಥೆ ಸೇವೆಗೆ ತರೀಕೆರೆಯ ಸಂಜನಾ

ದಾದಾಪೀರ್ ತರೀಕೆರೆ Updated:

ಅಕ್ಷರ ಗಾತ್ರ : | |

Prajavani

ತರೀಕೆರೆ: ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ನಾಗರಿಕ ಸೇವೆ ಪರೀಕ್ಷೆಯಲ್ಲಿ ತರೀಕೆರೆ ಪಟ್ಟಣದ ಸಂಜನಾ ಮಹಳತ್ಕರ್ ಉತ್ತೀರ್ಣರಾಗಿದ್ದು, ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯಲ್ಲಿ ಹಿರಿಯ ಎಂಜಿನಿಯರ್‌ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಸಂಜನಾ ಮಹಳತ್ಕರ್, ಪಟ್ಟಣದ ಜವಳಿ ವ್ಯಾಪಾರಿ ಜಗನ್ನಾಥ್ ರಾವ್ ಮತ್ತು ಸವಿತಾ ದಂಪತಿ ಪುತ್ರಿ. ಸಂಜನಾ ಪ್ರೌಢ ಶಿಕ್ಷಣ ಮತ್ತು ಪಿಯುಸಿ ವ್ಯಾಸಂಗ ಮಾಡಿದ್ದು ಪಟ್ಟಣದ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ. ನಂತರ ಅವರು ಶಿವಮೊಗ್ಗದ ಜವಾಹರಲಾಲ್‌ ನೆಹರೂ ನ್ಯಾಷನಲ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್‌ ಕಮ್ಯೂನಿಕೇಷನ್ ವಿಷಯದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದುಕೊಂಡಿದ್ದಾರೆ. ಬಳಿಕ ಹೈದರಾಬಾದ್‌ನಲ್ಲಿರುವ ಟಾಟಾ ಕನ್ಸಲ್ಟ್‌ಟೆಂಟ್‌ ಸರ್ವಿಸ್‌ನಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದರು.

ನಾಗರಿಕ ಸೇವೆ ಪರೀಕ್ಷೆ ಎದುರಿಸುವುದು ತಂದೆ ಜಗನ್ನಾಥ್‌ ಅವರಿಗೆ ಇಷ್ಟವಿರಲಿಲ್ಲ. ಮಗಳು ಇರುವ ಉದ್ಯೋಗದಲ್ಲಿಯೇ ಇರಲಿ ಎಂಬುದು ಅವರು ಆಸೆ ಆಗಿತ್ತು. ಆದರೆ, ಸಂಜನಾ ಕೆಲಸದ ನಡುವೆಯೇ ‘ಇಂಟರ್ ನ್ಯಾಷನಲ್ ಸಿವಿಲ್ ಸರ್ವಿಸ್’ ಪರೀಕ್ಷೆ ಎದುರಿಸಿ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸಲು ಆಯ್ಕೆ ಆಗಿದ್ದಾರೆ.

ಲಾಕ್‌ಡೌನ್ ವೇಳೆಯಲ್ಲಿ ಆನ್‌ಲೈನ್‌ನಲ್ಲಿಯೇ 18 ದೇಶಗಳ ರಾಜತಾಂತ್ರಿಕ ಅಧಿಕಾರಿಗಳು ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿ ಅವರು ಯಶಸ್ವಿಯಾಗಿದ್ದಾರೆ.

ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ವಿಶ್ವಸಂಸ್ಥೆಯ ‘ಇಂಟರ್ ‌ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ’ ಕಚೇರಿಯಲ್ಲಿ ಹಿರಿಯ ಎಂಜಿನಿಯರ್ ಆಗಿ ಸೇವೆ ಸಲ್ಲಿಸಲು ಸೆಪ್ಟೆಂಬರ್‌ ತಿಂಗಳಾಂತ್ಯಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

‘ಕನಸು ಕಾಣಬೇಕು, ಕನಸು ಒಂದು ದಿನ ನನಸಾಗುತ್ತದೆ. ಅದಕ್ಕಾಗಿ ಶ್ರಮ ಹಾಗೂ ಸಂಯಮ ಬಹಳ ಮುಖ್ಯ’ ಎಂದು ಸಂಜನಾ ಹೇಳಿದರು.

‘ಮಗಳ ಸಾಧನೆ ಕಂಡು ಹೆಮ್ಮೆಯಾಗುತ್ತಿದೆ’ ಎಂದು ಸಂಜನಾ ಪೋಷಕರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು