ಭಾನುವಾರ, ಸೆಪ್ಟೆಂಬರ್ 26, 2021
28 °C
ಕಾಫಿನಾಡಿನಲ್ಲಿ ಕಂಕಣ ಸೂರ್ಯಗ್ರಹಣ ವೀಕ್ಷಣೆ

ನಭದ ವಿಸ್ಮಯ ಕಂಡು ಜನ ಚಕಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ನಗರ ಮತ್ತು ತಾಲ್ಲೂಕಿನ ವಿವಿಧೆಡೆಗಳಲ್ಲಿ ಮಕ್ಕಳು, ಸಾರ್ವಜನಿರು ಉತ್ಸಾಹದಿಂದ ಗುರುವಾರ ಕಂಕಣ ಸೂರ್ಯಗ್ರಹಣವನ್ನು ಉತ್ಸಾಹಿಂದ ವೀಕ್ಷಿಸಿದರು, ನಭದ ವಿಸ್ಮಯ ಕಂಡು ಬೆರಗಾದರು.
ಜಿಲ್ಲಾ ವಿಜ್ಞಾನ ಕೇಂದ್ರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ಆಜಾದ್ ಪಾರ್ಕ್‌ ವೃತ್ತದಲ್ಲಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಜನರು ಕುತೂಹಲದಿಂದ ಕೌತುಕವನ್ನು ವೀಕ್ಷಿಸಿ ಆಶ್ಚರ್ಯ ಸಂತಸ ವ್ಯಕ್ತಪಡಿಸಿದರು.

ಬೆಳಿಗ್ಗೆ 7.40 ರಿಂದ 11.40ರವರೆಗೆ ಮಕ್ಕಳು, ಸಾರ್ವಜನಿಕರು ವೀಕ್ಷಿಸಿದರು. ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳೂ ಇದ್ದರು. ಗ್ರಹಣ ವೀಕ್ಷಣೆಗೆ ಸೋಲಾರ್‌ ಫಿಲ್ಟರ್‌ ಕನ್ನಡಕಗಳನ್ನು ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ಎಚ್.ಎಂ. ನೀಲಕಂಠಪ್ಪ, ಗೌರವಾಧ್ಯಕ್ಷ ಎ.ಎನ್‌.ಮಹೇಶ್‌, ತ್ಯಾಗರಾಜ್‌, ಟಿ.ಜಿ.ಕೆ.ಅರಸ್, ಕೆ.ಜಿ.ನೀಲಕಂಠಪ್ಪ, ಬಿ.ಎಂ.ಲೋಕೇಶ್ ಮೊದಲಾದವರು ಗ್ರಹಣ ಕುರಿತು ಮಾಹಿತಿ ನೀಡಿದರು. ವಿಶ್ಲೇಷಣೆ ಮಾಡಿದರು.

ಸೂರ್ಯನ ಪ್ರಭೆ ಚಂದ್ರನಿಂದ ಶೇ 93ಭಾಗದಷ್ಟು ಮರೆಯಾಗಿದ್ದು ನಗರದಲ್ಲಿ ಗೋಚರಿಸಿತು. ಪೂರ್ಣ ಕಂಕಣ ಕಾಣಿಸಲಿಲ್ಲ. ನೆರಳು–ಬೆಳಕಿನ ಆಟಕ್ಕೆ ಜನ ವಿಸ್ಮಿತರಾದರು. ಬೆಳಿಗ್ಗೆ ಬಿಸಿಲಿನ ಪ್ರಖರ ಕಡಿಮೆ ಇತ್ತು. ಮಾಮೂಲಿಯಂತೆ ಇರಲಿಲ್ಲ.

‘ಗ್ರಹಣವು ಖಗೋಳದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ. ಇದು ಸ್ವಾಭಾವಿಕವಾಗಿ ನಡೆಯುತ್ತಿರುತ್ತದೆ. ಗ್ರಹಣ ಸಂದರ್ಭದಲ್ಲಿ ಆಹಾರ ಸೇವಿಸುವುದರಿಂದ ಯಾವುದೇ ಸಮಸ್ಯೆಯಾಗಲ್ಲ. ಮೌಢ್ಯಗಳನ್ನು ಆಚರಿಸಬಾರದು’ ಎಂದು ವಿಶ್ಲೇಷಕರು ಸಲಹೆ ನೀಡಿದರು.

ವೀಕ್ಷಣಾ ಸ್ಥಳದಲ್ಲಿ ಮಂಡಕ್ಕಿ, ಬಿಸ್ಕತ್ತು, ಖಾರವನ್ನು ಆಯೋಜಕರು ಸೇವಿಸಿದರು. ಅಲ್ಲದೇ ವೀಕ್ಷೆಣೆಗೆ ಜಮಾಯಿಸಿದ್ದವರಿಗೂ ವಿತರಿಸಿದರು. ಗ್ರಹಣ ಸಂದರ್ಭದಲ್ಲಿ ಆಹಾರ ಸೇವಿಸುವುದರಿಂದ ಯಾವುದೇ ದುಷ್ಪರಿಣಾಮ ಉಂಟಾಗಲ್ಲ ಎಂದು ಸಾರಿದರು.

‘ನಾವು ಚಿಕ್ಕವರಿದ್ದಾಗ ಗ್ರಹಣದ ದಿನಗಳಂದು ಪೋಷಕರನ್ನು ಮನೆಯಿಂದ ಹೊರಗೆ ಕಳಿಸುತ್ತಿರಲಿಲ್ಲ. ಆಗೆಲ್ಲ ಗ್ರಹಣ ನೋಡಿದರೆ ದೋಷ ಉಂಟಾಗುತ್ತದೆ ಎಂದು ಭಯಪಡಿಸುತ್ತಿದ್ದರು’ ಎಂದು ವೈದ್ಯೆ ಗೀತಾ ವೆಂಕಟೇಶ್‌ ಹೇಳಿದರು.
‘ಏಳನೇ ತರಗತಿಯಲ್ಲಿದ್ದಾಗ ಒಮ್ಮೆ ಗ್ರಹಣ ವೀಕ್ಷಿಸಿದ್ದೆ. ಇದು ಪ್ರಕೃತಿಯ ವಿಸ್ಮಯ. ಸೂರ್ಯನನ್ನು ಚಂದ್ರ ಮರೆಮಾಡುವುದೇ ಸೋಜಿಗ’ ಎಂದು ಐಡಿಎಸ್‌ಜಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ ಸಂಚಿತಾ ಹೇಳಿದರು.

‘ಇದೇ ಮೊದಲ ಬಾರಿಗೆ ಗ್ರಹಣ ನೋಡಿದೆ. ಅಬ್ಬಬ್ಬಾ ಆಶ್ಚರ್ಯವಾಯಿತು. ವಿಜ್ಞಾನ ಪುಸ್ತಕದಲ್ಲಿ ಓದಿದ್ದೆ, ಈಗ ನಿಜವಾಗಿ ನೋಡಿ ತಿಳಿದುಕೊಂಡೆ’ ಎಂದು ಬೇಲೂರು ರಸ್ತೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ದೊರೆ ಹೇಳಿದರು.

ತಾಲ್ಲೂಕು ಕೇಂದ್ರಗಳಲ್ಲಿಯೂ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ನಗರದ ಅಂಬೇಡ್ಕರ್ ಶಾಲೆ, ಬಿ.ಜಿ.ಎಸ್ ಶಾಲೆ, ಕುರುವಂಗಿ ಪ್ರೌಢಶಾಲೆ, ಮೋರಾರ್ಜಿದೇಸಾಯಿ ಶಾಲೆ, ಆಲ್ದೂರ್ ಶಾಲೆ ವಿದ್ಯಾರ್ಥಿಗಳು ಸೂರ್ಯಗ್ರಹಣ ವೀಕ್ಷಸಿದರು.

 

ಗ್ರಹಣ ಸಮಯ; ಜನ ದಟ್ಟಣೆ ಕಡಿಮೆ

ನಗರದ ರಸ್ತೆಗಳು, ವಿವಿಧೆಡೆಗಳಲ್ಲಿ ಗುರುವಾರ ಬೆಳಿಗ್ಗೆ ಜನ ಮತ್ತು ವಾಹನ ದಟ್ಟಣೆ ಮಾಮೂಲಿಗಿಂತ ಕಡಿಮೆ ಇತ್ತು.

ಕೆಲ ಸಂಪ್ರದಾಯಸ್ಥರಂತೂ ಗ್ರಹಣ ಮುಗಿಯುವವರೆಗೂ ಮನೆಯಿಂದ ಹೊರಗೂ ಬರಲಿಲ್ಲ. ಕೆಲವರು ಮನೆಯಲ್ಲಿ ಟಿವಿಯಲ್ಲಿ ಗ್ರಹಣ ವೀಕ್ಷಿಸಿದರು. ಗ್ರಹಣ ಮುಗಿದ ನಂತರ ಕೆಲ ವ್ಯಾಪಾರಿಗಳು ಅಂಗಡಿ, ಮಳಿಗೆ ತೆರೆದರು.

ಪೂಜೆ: ಮತ್ತೆ ಕೆಲವರು ಗ್ರಹಣ ಮುಗಿದ ನಂತರ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ದೇಗುಲಗಳಲ್ಲಿ ಪೂಜಾ ಕೈಂಕರ್ಯಗಳು ನಡೆದವು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು