ತರೀಕೆರೆ: ‘ತರೀಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಎಸ್‍ಆರ್ ಅನುದಾನದ ಮೂಲಕ ಆಮ್ಲಜನಕ ಘಟಕ ಕಾರ್ಯಾ ರಂಭ ಮಾಡಲಿದೆ. ಇದೇ ಆಸ್ಪತ್ರೆಯಲ್ಲಿ 25 ವೆಂಟಿಲೇಟರ್ ಹಾಸಿಗೆಗಳ ವ್ಯವಸ್ಥೆಯಾಗಲಿದೆ’ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಅಜ್ಜಂಪುರ ಮತ್ತು ತರೀಕೆರೆ ತಾಲ್ಲೂಕು ಆಡಳಿತಗಳ ಸಹಭಾಗಿತ್ವದಲ್ಲಿ ನಡೆದ ಉಚಿತ ಆರೋಗ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಅತಿಯಾದ ರಾಸಾಯನಿಕ ಬಳಕೆ ಮತ್ತು ಕಲುಷಿತವಾದ ನೀರು– ಗಾಳಿಯಿಂದ ಮನುಷ್ಯನ ಆರೋಗ್ಯ ಏರುಪೇರಾಗುತ್ತದೆ. ಆದ್ದರಿಂದ ಕಾಯಿಲೆ ಬರುವ ಮೊದಲೇ ಪರೀಕ್ಷಿಸಿ ಕೊಳ್ಳುವುದು ಉತ್ತಮ’ ಎಂದರು.
‘ಆರೋಗ್ಯ ಮೇಳದ ಉದ್ದೇಶ ಒಂದೇ ಸೂರಿನಡಿ ಎಲ್ಲಾ ತಜ್ಞ ವೈದ್ಯರ ಉಪಲಬ್ಧತೆಯಾಗಿದೆ. ಸಾರ್ವಜನಿಕರು ತಮ್ಮ ಆರೋಗ್ಯ ಸಮಸ್ಯೆಗಳನ್ನು ತಜ್ಞರ ಬಳಿ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆಯಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ’ ಎಂದರು.
ಶಾಸಕ ಡಿ.ಎಸ್.ಸುರೇಶ್ ಮಾತ ನಾಡಿ, ‘ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬಡ ರೋಗಿಗಳು ಖಾಸಗಿ ಆಸ್ಪತ್ರೆಗೆ ತೆರಳಿ ತಪಾಸಣೆ, ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಯೋಜಿಸುತ್ತಿರುವ ಇಂತಹ ಆರೋಗ್ಯ ಮೇಳಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.
‘ಕೋವಿಡ್ ಪತ್ತೆ ಮಾಡುವ ಸಂಬಂಧ ರಕ್ತ ಪರೀಕ್ಷಾ ಘಟಕವನ್ನು ತರೀಕೆರೆಯ ತಾಲ್ಲೂಕು ಆಸ್ಪತ್ರೆಯಲ್ಲಿ ಆರಂಭ ಮಾಡಲಾಗಿದೆ. ತಾಯಿ-ಮಗು ಆಸ್ಪತ್ರೆ ಘಟಕಕ್ಕೆ ಶೀಘ್ರವೇ ಭೂಮಿಪೂಜೆ ನಡೆಲಾಗುವುದು’ ಎಂದು ಹೇಳಿದರು.
ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ‘ಇಂತಹ ಆರೋಗ್ಯ ಮೇಳಗಳು ತಾಲ್ಲೂಕು ಮಟ್ಟ ಮಾತ್ರವಲ್ಲದೇ ಹೋಬಳಿ ಮಟ್ಟದಲ್ಲೂ ನಡೆಯಬೇಕು. ಎಲ್ಲರೂ ಆರೋಗ್ಯ ಮೇಳದ ಉಪಯೋಗವನ್ನು ಪಡೆದು ಕೊಳ್ಳಬೇಕು’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು ಮಾತನಾಡಿ, ‘ಆರೋಗ್ಯ ಮೇಳದಲ್ಲಿ 39ಕ್ಕೂ ಹೆಚ್ಚು ಚಿಕಿತ್ಸಾ ಕೇಂದ್ರಗಳು, 50ಕ್ಕೂ ಹೆಚ್ಚು
ತಜ್ಞ ವೈದ್ಯರಿದ್ದಾರೆ. ಚಿಕಿತ್ಸೆ, ಔಷಧಗಳನ್ನು ಉಚಿತವಾಗಿ ವಿತರಿಸಲಾಗುವುದು. ಉಚಿತವಾಗಿ ಆರೋಗ್ಯ ಕಾರ್ಡ್‌ಗಳನ್ನು ನೀಡಲಾಗುವುದು. ಇದೆಲ್ಲದರ ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ಸಿದ್ದಲಿಂಗ ರೆಡ್ಡಿ, ತರೀಕೆರೆ ತಹಶೀಲ್ದಾರ್ ಮಹೇಂದ್ರ, ಅಜ್ಜಂಪುರ ತಹಶೀಲ್ದಾರ್ ವಿಶ್ವೇಶ್ವರ ರೆಡ್ಡಿ, ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಇಒ ಗಣೇಶ್, ಸಿಡಿಪಿಒ ಜ್ಯೋತಿಲಕ್ಷ್ಮಿ, ಪುರಸಭಾಧ್ಯಕ್ಷ ರಂಗನಾಥ್, ಉಪಾಧ್ಯಕ್ಷೆ ಯಶೋದಮ್ಮ, ಮುಖ್ಯಾಧಿಕಾರಿ ಮಹಾಂತೇಶ್, ಸದಸ್ಯರು ಇದ್ದರು.
ಆರೋಗ್ಯ ಮೇಳದಲ್ಲಿ ಸುಮಾರು 4,000 ಮಂದಿ ಆರೋಗ್ಯ ತಪಾಸಣೆಗೆ ಒಳಗಾದರು. ರಕ್ತದಾನ ಶಿಬಿರದಲ್ಲೂ ರಕ್ತದಾನಕ್ಕೆ ಯುವಕರು ಹೆಚ್ಚಾಗಿ ಮುಂದೆ ಬರುತ್ತಿದ್ದುದು ಕಂಡುಬಂದಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.