ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಸಂದಿಗ್ಧಗಳ ಹುತ್ತ ಮತ್ತು ನಿವಾರಿಸುವ ಸವಾಲು

Last Updated 24 ಏಪ್ರಿಲ್ 2019, 12:11 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ:ಬೆಂಗಳೂರು ನಗರದ ಚುಂಗು ಹಿಡಿದು, ಸುತ್ತಲಿನ ನೆಲಮಂಗಲ– ಹೊಸಕೋಟೆಯಂತಹ ಹೊರವಲಯಗಳನ್ನೂ ಒಡಲಲ್ಲಿ ಇರಿಸಿಕೊಂಡು ಅತ್ತ ಆಂಧ್ರಪ್ರದೇಶದ ಗಡಿಗುಂಟ ಚಾಚಿಕೊಂಡಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ, ಸಂದಿಗ್ಧಗಳ ಹುತ್ತವಾಗಿ ಪರಿಣಮಿಸಿದೆ.

ಹುತ್ತದಲ್ಲಿ ಇಣುಕಿದರೆ ಸಂದೇಹಗಳ ರಾಶಿ. ಪ್ರಶ್ನೆಗಳ ಸರಮಾಲೆ. ಕಣದಲ್ಲಿರುವ ವ್ಯಕ್ತಿಯ ಹಿತ ಕಾಯಬೇಕೋ ಇಲ್ಲವೇ ರಾಜ್ಯ ಸರ್ಕಾರದ ಹಿತದೃಷ್ಟಿಯ ನೆಲೆಯಲ್ಲಿ ಯೋಚಿಸಬೇಕೋ; ಆ ಗೌಡರೋ ಈ ಗೌಡರೋ; ಸಿಟ್ಟು–ಸೆಡವುಗಳನ್ನು ಅದುಮಿಟ್ಟುಕೊಂಡು ಪಕ್ಷ ಮತ್ತು ನಾಯಕರ ಆಣತಿಯಂತೆ ಮೈತ್ರಿಧರ್ಮ ಪಾಲಿಸಬೇಕೋ ಇಲ್ಲವೇ ಒಳಮನಸ್ಸಿನ ಕರೆಗೆ ಓಗೊಟ್ಟು ನಿರ್ಧಾರ ಕೈಗೊಳ್ಳಬೇಕೋ? ಇಂತಹ ಹತ್ತಾರು ಸಂದೇಹಗಳು, ಪ್ರಶ್ನೆಗಳು ಮತದಾರರ ಮಿದುಳು ಕೊರೆಯುತ್ತಿವೆ.

ನಗರ ಪ್ರಜ್ಞೆಯ ಮತದಾರನ ಕನ್ನಡಕ ಧರಿಸಿ ಯಲಹಂಕದಲ್ಲಿ ನಿಂತು ನೋಡಿದಾಗ ಎಲ್ಲವೂ ಸ್ಪಷ್ಟ ಎಂಬಂತೆ ಕಾಣುತ್ತವೆ. ದೇವನಹಳ್ಳಿ ದಾಟಿ ಮುಂದಕ್ಕೆ ಹೋಗುತ್ತಲೇ ಎಲ್ಲವೂ ಗೋಜಲಾಗತೊಡಗುತ್ತವೆ. ಬಾಗೇಪಲ್ಲಿ ಮುಟ್ಟುವಷ್ಟರಲ್ಲಿ ಅವು ಇನ್ನೂ ಹೆಚ್ಚು ಸಂಕೀರ್ಣಗೊಳ್ಳುತ್ತವೆ.

ಈ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾನ ಅಂಶಗಳು ಅಂತ ಕಾಣುವುದು ಕೆಲವೇ ಕೆಲವು– ಜಾತಿ ಲೆಕ್ಕಾಚಾರ, ಅಭ್ಯರ್ಥಿ ಹಾಗೂ ಪಕ್ಷಗಳ ಪ್ರಭಾವದಂತಹ ಅಂಶಗಳು. ಇವುಗಳನ್ನು ಹೊರತುಪಡಿಸಿದರೆ, ರಾಜಕೀಯವಾಗಿ ಒಂದೊಂದು ಕ್ಷೇತ್ರವೂ ವಿಭಿನ್ನ. ಹೊಸಕೋಟೆ ಕ್ಷೇತ್ರವನ್ನೇ ನಿದರ್ಶನವಾಗಿ ತೆಗೆದುಕೊಂಡರೆ ಅದು ಸಂಪೂರ್ಣವಾಗಿ ವ್ಯಕ್ತಿಕೇಂದ್ರಿತ. ‘ಇಲ್ಲಿ ಮೋದಿ, ರಾಹುಲ್‌ ಯಾರೂ ಇಲ್ಲ. ಎಂಟಿಬಿ (ನಾಗರಾಜ್‌) ಮತ್ತು ಬಚ್ಚೇಗೌಡ ಮಾತ್ರ’ ಎಂದರು ಸೋಮತ್ತನಹಳ್ಳಿಯ ಗೃಹಿಣಿ ಸುಮಾ. ಈ ಭಾಗದಲ್ಲಿ ಯಾರನ್ನೇ ಮಾತನಾಡಿಸಿದರೂ ಮೊದಲು ಪ್ರಸ್ತಾಪವಾಗುವುದೇ ಇವರ ಹೆಸರು. ಪಕ್ಷ, ಪ್ರಣಾಳಿಕೆ, ವರಿಷ್ಠರು... ಎಲ್ಲರೂ ಮತ್ತು ಎಲ್ಲವೂ ನಿಮಿತ್ತ ಮಾತ್ರ.

ಲೋಕಸಭೆಗೆ ಪ್ರತಿನಿಧಿಯನ್ನು ಆರಿಸುವ ವಿಚಾರದಲ್ಲಿ ಜಾತಿಯ ಚೌಕಟ್ಟು ಮೀರಿ ನಿಂತ ಕ್ಷೇತ್ರ ಚಿಕ್ಕಬಳ್ಳಾಪುರ. ಈ ಕ್ಷೇತ್ರವನ್ನು ಪ್ರತಿನಿಧಿಸಿದ ಸಂಸದರ ಸಾಮಾಜಿಕ ಹಿನ್ನೆಲೆ ಗಮನಿಸಿದರೆ ಇಲ್ಲಿನ ಮತದಾರರ ಪ್ರಬುದ್ಧತೆ ಮನದಟ್ಟಾಗುತ್ತದೆ. ಸಂಖ್ಯಾದೃಷ್ಟಿಯಿಂದ ಈ ಭಾಗದಲ್ಲಿ ನಗಣ್ಯ ಎನ್ನಬಹುದಾದ ಈಡಿಗ, ಬ್ರಾಹ್ಮಣ ಮತ್ತು ದೇವಾಡಿಗ ಸಮುದಾಯಗಳಿಗೆ ಸೇರಿದವರಿಗೆ ಪದೇ ಪದೇ ಪಟ್ಟ ಕಟ್ಟಿ ಪ್ರಜಾಪ್ರಭುತ್ವದ ಹಿರಿಮೆಗೆ ಮೆರುಗು ಮೂಡಿಸಿದ್ದಾರೆ.

ಇಂತಹದೊಂದು ಪ್ರಬುದ್ಧತೆಯ ಹಿಂದೆ ಪ್ರಜ್ಞಾಪೂರ್ವಕ ಪ್ರಯತ್ನಗಳು ಇವೆಯೋ ಅಥವಾ ಅದು ಸಾಂದರ್ಭಿಕವಾಗಿ ಒದಗಿಬಂದಿರುವುದೋ ಎಂಬುದನ್ನು ನಿರ್ಧರಿಸುವುದು ಕಷ್ಟವಾದರೂ ಈ ಸಲ ಅದಕ್ಕೆ ಕುಂದು ಒದಗುವ ರೀತಿಯಲ್ಲಿ ಜಾತಿಯ ಕಮಟು ಮೂಗಿಗೆ ಬಡಿಯುತ್ತದೆ. ಜಾತಿ ಕಾರಣಕ್ಕೇ ದೊಡ್ಡದೊಂದು ಸಂದಿಗ್ಧದಲ್ಲಿ ತೊಳಲಾಡುತ್ತಿದ್ದಾರೆ ಮತದಾರರು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು. ಈ ಅಂಶ ನಾಯಕರಿಗೂ ಬಿಸಿ ತುಪ್ಪವಾಗಿ ಮಾರ್ಪಟ್ಟಿದೆ. ಹೇಳಿಕೇಳಿ ಒಕ್ಕಲಿಗರ ಪ್ರಾಬಲ್ಯ. ಆ ಸಮುದಾಯಕ್ಕೆ ಸೇರಿದ ನಾಯಕನ ನೇತೃತ್ವದ ಸರ್ಕಾರ. ಅದರೊಂದಿಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಬೆಸೆದುಕೊಂಡಿರುವ ಮೈತ್ರಿ ರಾಜಕಾರಣ ಮತ್ತು ಅದರ ಮುಂದುವರಿಕೆಯ ಪ್ರಶ್ನೆ... ಇಂತಹ ಅಂಶಗಳು ಹರಟೆಕಟ್ಟೆ ಏರಿ ಚರ್ಚೆಗೆ ಒಳಪಡುತ್ತಿವೆ.

‘ಆಯಪ್ಪ ಕಳೆದ ಸಾರಿ ಸೋತವರೆ. ನಮ್ಮವರು ಬೇರೆ. ಅವರಿಗೂ ಒಂದು ಅವಕಾಶ ಕೊಡುವ ಮನಸ್ಸಿದೆ. ಆದರೆ...’ ಎಂದು ಚಿಕ್ಕಬಳ್ಳಾಪುರದ ವೆಂಕಟರಾಯಪ್ಪ ರಾಗ ಎಳೆದರು. ಹಿನ್ನೆಲೆ ಕೆದಕಿದಾಗ ಗೊತ್ತಾಗಿದ್ದು ಏನೆಂದರೆ, ಇವರು ಮೂಲತಃ ಜೆಡಿಎಸ್‌ನವರು. ಬಿಜೆಪಿಯಿಂದ ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಬಿ.ಎನ್‌.ಬಚ್ಚೇಗೌಡ ಬಗ್ಗೆ ಅನುಕಂಪ ಉಳ್ಳವರು. ಆದರೆ, ದೃಢ ನಿರ್ಧಾರಕ್ಕೆ ಬರಲಾರದ ಸ್ಥಿತಿ, ತೊಳಲಾಟ.

‘ವ್ಯಕ್ತಿ’ ಮತ್ತು ‘ಸರ್ಕಾರ’ ಎಂಬ ಎರಡು ಬಿಂಬಗಳು ಮತದಾರರ ಕಣ್ಣೆದುರು ಹಾದುಹೋಗುವಂತೆ ಮಾಡುವ ಪ್ರಯತ್ನ ಸಾಗಿದೆ. ‘ಆ ಗೌಡರು ಬೇಕೋ ಈ ಗೌಡರು ಬೇಕೋ’ ಎಂಬ ಪ್ರಶ್ನೆಯನ್ನು ಮುನ್ನೆಲೆಗೆ ತರಲಾಗಿದೆ. ‘ಇವತ್ತು, ಜಾತಿ ನೋಡಿಕೊಂಡು ಬಚ್ಚೇಗೌಡರಿಗೆ ಮತ ನೀಡಿದರೆ, ಸ್ವಜಾತಿಯವರೇ ಆದ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಅಸ್ತಿತ್ವಕ್ಕೆ ನಾಳೆ ಅಪಾಯ ಒದಗಬಹುದು’ ಎಂಬ ವಿಚಾರಕ್ಕೆ ರೆಕ್ಕೆಪುಕ್ಕ ಮೂಡಿದೆ. ಇದು, ಕ್ಷೇತ್ರದಲ್ಲಿ ನಿರ್ಣಾಯಕರು ಎಂದೇ ಬಿಂಬಿತವಾಗಿರುವ ಒಕ್ಕಲಿಗರನ್ನು ಗೊಂದಲಕ್ಕೆ ದೂಡಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕೈಜೋಡಿಸಲು ಇರುವ ಕಾರಣಗಳ ಬಗ್ಗೆ ಎರಡೂ ಪಕ್ಷಗಳ ವರಿಷ್ಠರು ಬೆಂಗಳೂರಿನಲ್ಲಿ ಕುಳಿತು ತಾತ್ವಿಕ ನೆಲೆಯಲ್ಲಿ ಏನೇ ಹೇಳಿದರೂ ಅದನ್ನು ಮನಃಪೂರ್ವಕವಾಗಿ ಒಪ್ಪಿ ಆಚರಣೆಗೆ ತರಲು ಕಾರ್ಯಕರ್ತರು ಸಿದ್ಧರಿಲ್ಲ ಎಂಬುದು ಜನರ ಭಾವನೆಗಳಿಗೆ ಕಿವಿಗೊಟ್ಟಾಗ ಪ್ರತೀ ಹಂತದಲ್ಲೂ ಮನವರಿಕೆಯಾಗುತ್ತದೆ.

‘ಮೊನ್ನೆ ಮೊನ್ನೆಯಷ್ಟೇ ಬಡಿದಾಡಿದ್ದೇವೆ. ಈಗ ಜೊತೆಯಾಗಿ ಹೋಗಿ ಅಂತ ಅವರು ಹೇಳಿಬಿಟ್ಟರೆ, ಹೋಗೋದಕ್ಕೆ ಆಗುತ್ತೆಯೇ?’ ಅಂತ ಗೌರಿಬಿದನೂರಿನ ನಟರಾಜ್‌ ಕೇಳಿದರು. ಈ ಪ್ರಶ್ನೆ ಅವರೊಬ್ಬರದಷ್ಟೇ ಅಲ್ಲ, ಅನೇಕರ ಪ್ರಶ್ನೆಯಾಗಿದೆ. ಕಾರ್ಯಕರ್ತರಲ್ಲಿ ಕಾಣಸಿಗುವ ಈ ರೀತಿಯ ಜಿಗುಟು, ಮತದಾರನಲ್ಲೂ ಮಡುಗಟ್ಟಿದರೆ ಮೈತ್ರಿಯ ಲೆಕ್ಕಾಚಾರ ತಾರುಮಾರು ಆಗುವುದರಲ್ಲಿ ಸಂದೇಹ ಇಲ್ಲ.

ಪುಲ್ವಾಮಾ ದಾಳಿ, ಬಾಲಾಕೋಟ್‌ ವಾಯುದಾಳಿಯಂತಹ ವಿಚಾರಗಳು ಯಲಹಂಕ ಉಪನಗರ, ಹೆಚ್ಚೆಂದರೆ ನೆಲಮಂಗಲ ಪಟ್ಟಣದವರೆಗೂ ಅಲ್ಲಿ ಇಲ್ಲಿ ಕೇಳಿಸಿದವು. ಆದರೆ ಕ್ಷೇತ್ರದ ಹೆಚ್ಚಿನ ಕಡೆ ಎತ್ತಿನಹೊಳೆ ಯೋಜನೆ ಬಗ್ಗೆ ಜನರು ಪ್ರಸ್ತಾಪಿಸುತ್ತಾರೆ. ‘ಇಗೋ ಬಂತು ಅಗೋ ಬಂತು ಅಂತ ಹೇಳುತ್ತಲೇ ವೀರಪ್ಪ ಮೊಯಿಲಿ ಅವರು ಎರಡನೇ ಅವಧಿಯನ್ನೂ ಮುಗಿಸಿದರು. ಆದರೆ ನೀರು ಮಾತ್ರ ಬರಲೇ ಇಲ್ಲ’ ಎಂದು ಪೇರೆಸಂದ್ರದ ರೈತರೊಬ್ಬರು ಸಿಟ್ಟು ತೋರಿದರು.

‘ಧರ್ಮಸ್ಥಳಕ್ಕೆ ಕಾರು ಮಾಡಿಕೊಂಡು ಹೋಗಿದ್ದೆವು. ಅಲ್ಲೇ ಸಕಲೇಶಪುರದ ಬಳಿ ಇಳಿದು ಕಣ್ಣಾರೆ ನೋಡಿಬಂದಿದ್ದೀವಣ್ಣೋ. ಕೆಲಸ ನಡಿತಾ ಇದೆ. ಅದ್ಯಾರೋ ಮರಗಿಡ ಕಡಿಯಬಾರದು ಅನ್ನೋರು ಅಡಚಣೆ ಮಾಡ್ತಾವರಂತೆ. ಅದಕ್ಕೇ ವಿಳಂಬ ಆಗ್ತಿದೆ. ಕಂಪ್ಲೀಟ್‌ ಮಾಡ್ತಾರೆ...’ ಎಂದು ದೇವನಹಳ್ಳಿ ತಾಲ್ಲೂಕಿನ ಕೋರಮಂಗಲದ ರೈತ ರಾಜಣ್ಣ ಭರವಸೆಯ ಮಾತಾಡುತ್ತಾರೆ. ಪ್ರಮಾಣ ಎಷ್ಟಾದರೂ ಆಗಿರಲಿ, ಈ ಎರಡೂ ವಾದಗಳಲ್ಲಿ ಸತ್ಯಾಂಶ ಇದೆ. ಆದರೆ, ಈ ಎರಡರಲ್ಲಿ ಯಾವ ವಾದವನ್ನು ಪರಿಣಾಮಕಾರಿಯಾಗಿ ಜನರಿಗೆ ಯಾರು ತಲುಪಿಸಬಲ್ಲರೋ ಅವರ ಕೈ ಮೇಲಾಗುವ ಸಾಧ್ಯತೆ ಇದೆ.

ದಕ್ಷಿಣ ಕನ್ನಡದವರಾದ ಎಂ.ವೀರಪ್ಪ ಮೊಯಿಲಿ, ಆ ಭಾಗದ ಜನರ ವಿರೋಧ ಕಟ್ಟಿಕೊಂಡು ಎತ್ತಿನಹೊಳೆ ಪರ ನಿಂತರೂ ಯೋಜನೆಯ ಅನುಷ್ಠಾನದಲ್ಲಿನ ವಿಳಂಬ ಅವರ ವಿರುದ್ಧ ಅಸಮಾಧಾನಕ್ಕೆ ಕಾರಣವಾಗಿದೆ. ‘ಹತ್ತು ವರ್ಷ ಸಂಸದರಾಗಿದ್ದರೂ ಸ್ಥಳೀಯರ ಜೊತೆಗೆ ಒಡನಾಟ ಅಷ್ಟಕ್ಕಷ್ಟೇ’ ಎಂದರು ಲಕ್ಕೊಂಡಹಳ್ಳಿಯ ಸೊನ್ನಪ್ಪ. ಅಲ್ಲದೆ, ಆಡಳಿತ ವಿರೋಧದ ಅಲೆಯನ್ನು ತಣ್ಣಗಾಗಿಸಲು ಮೊಯಿಲಿ ಅವರು ವಿಶೇಷ ಶ್ರಮ ವಹಿಸಿದಂತೆಯೂ ಕಾಣುತ್ತಿಲ್ಲ. ಆದರೆ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳ ಶಾಸಕರೇ ಇರುವುದು ಮೇಲ್ನೋಟಕ್ಕೆ ಅವರಿಗೆ ಅನುಕೂಲ ಆಗುವಂತೆ ಕಾಣಿಸುತ್ತದೆಯಾದರೂ ಅದು ಶಾಸಕರ ಬದ್ಧತೆಯನ್ನು ಅವಲಂಬಿಸಿದೆ ಎಂಬುದನ್ನು ಪ್ರಸಕ್ತ ಸಂದರ್ಭದಲ್ಲಿ ಒತ್ತಿ ಹೇಳಬೇಕಾದ ಅಗತ್ಯ ಇದೆ. ಆ ಒತ್ತು ಏಕೆ ಎಂಬುದು ಅವರವರ ವಿವೇಚನೆಗೆ ಬಿಟ್ಟದ್ದು. ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ, ಒಬ್ಬರೇ ಶಾಸಕರನ್ನು ಹೊಂದಿದ್ದರೂ ಪ್ರಬಲ ಸ್ಪರ್ಧೆ ಒಡ್ಡುತ್ತಿದೆ.

‘ನರೇಂದ್ರ ಮೋದಿ ಪ್ರಭಾವ ಈ ಭಾಗದಲ್ಲಿ ಕಳೆದ ಸಲ ಇಷ್ಟೊಂದು ಇರಲಿಲ್ಲ. ಈ ಸಲ ತುಸು ಹೆಚ್ಚಿಗಿರುವಂತೆ ಕಾಣಿಸುತ್ತದೆ’ ಎನ್ನುತ್ತಾರೆ ಗುಡಿಬಂಡೆಯ ಶಿವಶಂಕರ್‌. ಇದರ ಮಧ್ಯೆ ಬಚ್ಚೇಗೌಡರು ದರ್ಪದ ಸ್ವಭಾವದವರು ಎಂಬ ಮಾತುಗಳೂ ಹರಿದಾಡುತ್ತಿವೆ.

ಕ್ಷೇತ್ರದ ಉದ್ದಗಲಕ್ಕೂ ವೋಟ್‌ ಆಡಿಟರ್‌ಗಳನ್ನು ಕಾಣಬಹುದು.ಕಳೆದ ಬಾರಿ ಎಚ್‌.ಡಿ. ಕುಮಾರಸ್ವಾಮಿ ಪಡೆದಿದ್ದ 3.46 ಲಕ್ಷ ಮತ ಈ ಸಲ ಯಾರ ಕಡೆ ಯಾವ ಪ್ರಮಾಣದಲ್ಲಿ ತಿರುಗಬಹುದು, ಬಿಎಸ್‌ಪಿ ಅಭ್ಯರ್ಥಿ ಸಿ.ಎಸ್‌. ದ್ವಾರಕಾನಾಥ್‌ ಮತ್ತು ಸಿಪಿಎಂ ವತಿಯಿಂದ ಕಣಕ್ಕೆ ಇಳಿದಿರುವ ಎಸ್‌. ವರಲಕ್ಷ್ಮಿ ಎಷ್ಟು ಮತ ಪಡೆಯಬಹುದು ಮತ್ತು ಅದರಿಂದ ಯಾರಿಗೆ ಗುನ್ನ ಬೀಳಲಿದೆ, ಶಾಸಕರು ಮತ್ತು ಅಭ್ಯರ್ಥಿ ನಡುವಣ ಅನ್ಯೋನ್ಯತೆ–ಮುನಿಸು ಮೂಡಿಸಬಹುದಾದ ಪರಿಣಾಮ ಏನು ಎಂಬಿತ್ಯಾದಿ ಲೆಕ್ಕಾಚಾರಗಳಿಗೆ ಕೊನೆಮೊದಲು ಎಂಬುದೇ ಇಲ್ಲ.

ಕಾರ್ಯಕರ್ತರಲ್ಲಿ ಅನಾಥ ಪ್ರಜ್ಞೆ
ಶುಭ್ರ ಬಿಳಿ ಅಂಗಿ ಮತ್ತು ಬಿಳಿ ಪಂಚೆ ಉಟ್ಟು, ಹೆಗಲ ಮೇಲೆ ನೀಲಿ ಅಂಚಿನ ಬಿಳಿ ಟವೆಲ್‌ ಹಾಕಿದ್ದ ವ್ಯಕ್ತಿಯೊಬ್ಬರು ಬಾಗೇಪಲ್ಲಿಯ ಕಿರಾಣಿ ಅಂಗಡಿಯೊಂದರ ಜಗುಲಿ ಮೇಲೆ ಕುಳಿತಿದ್ದರು. ಅದೇ ರಸ್ತೆಯಲ್ಲಿ, ಆಗಷ್ಟೇ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಹಾಗೂ ಬಿ.ಶ್ರೀರಾಮುಲು ಅವರು ರೋಡ್‌ ಷೋ ಮುಗಿಸಿದ್ದರು.

‘ಯಜಮಾನ್ರೆ... ಚುನಾವಣೆ ಗಾಳಿ ಎತ್ತ ಬೀಸುತ್ತಿದೆ?’ ಎಂದು ವಿಚಾರಿಸಿ ಪರಿಚಯ ಮಾಡಿಕೊಂಡಿದ್ದೇ ತಡ, ‘ಅಯ್ಯೋ, ನಮಗೆ ಎದುರಾಗಿರುವ ಕಷ್ಟ ಇನ್ಯಾರಿಗೂ ಬರ
ಬಾರದು ಬಿಡಿ’ ಎಂದರು ರಾಮಚಂದ್ರಪ್ಪ. ಊರು: ಗೂಳೂರು ಬಳಿ ಪಿಚ್ಚಿಲೋಲ್ಲಪಲ್ಲಿ. ‘ಆ ರೋಡ್‌ ಷೋನಲ್ಲಿ ಕಂಡ ಹೆಚ್ಚಿನ ಮುಖಗಳು ನಮ್ಮವರವೇ’ ಎಂದು ತೆಲುಗಿನಲ್ಲಿ ಹೇಳಿ ಮುಖ ಸಪ್ಪಗೆ ಮಾಡಿಕೊಂಡರು. ‘ನಮ್ಮವರು’ ಎನ್ನುವ ಶಬ್ದವನ್ನು ‘ಸಿಪಿಎಂ ಕಾರ್ಯಕರ್ತರು’ ಅಂತ ಓದಿಕೊಳ್ಳಬೇಕು. ಅದೇ ದಿನದ (ಏ. 11) ಪತ್ರಿಕೆಗಳ ಸ್ಥಳೀಯ ಆವೃತ್ತಿಯಲ್ಲಿ ‘ಸಿಪಿಎಂ ಮುಖಂಡರು ಕಾಂಗ್ರೆಸ್‌ಗೆ’ ಎಂಬ ತಲೆಬರಹದ ಸುದ್ದಿ ಇತ್ತು.

ಅಲ್ಲಿಂದ ಮುಂದಕ್ಕೆ ಗುಡಿಬಂಡೆ ಕಡೆ ಹೋಗುವ ಮಾರ್ಗಮಧ್ಯದಲ್ಲಿ ಸಿಗುವ ಹಂಪಸಂದ್ರ ಬಳಿ ಆಡು ಮೇಯಿಸುತ್ತಿದ್ದ ಶ್ರೀನಿವಾಸರನ್ನು ಮಾತಿಗೆ ಎಳೆದರೆ ‘ಈ ಸಲ ಏನು ಮಾಡಬೇಕೋ ತೋಚುತ್ತಿಲ್ಲ’ ಎಂದರು. ‘ನಮ್ಮವರು ಗೆಲ್ಲುವುದಿಲ್ಲ ಅಂತ ಗೊತ್ತು. ಕಾಂಗ್ರೆಸ್‌ ಜತೆ ಜಿದ್ದಾಜಿದ್ದಿ ಅಂತ ಗುದ್ದಾಡಿದ್ದೇವೆ. ಬಿಜೆಪಿ ಬಿಟ್ಟು ಯಾರಿಗಾದರೂ ಹಾಕಿಕೊಳ್ಳಿ ಅಂತ ನಾಯಕರು ಹೇಳ್ತಿದ್ದಾರೆ. ಆದರೆ ಗೆಲ್ಲುವ ಸಾಮರ್ಥ್ಯ ಇರುವ ಮತ್ತೊಂದು ಪಕ್ಷ ಇಲ್ಲ. ವೋಟು ವ್ಯರ್ಥ ಆಗಬಾರದು. ಏನು ಮಾಡುವುದು?’ ಎಂದರು. ಇವರೂ ಸಿಪಿಎಂ ಬೆಂಬಲಿಗರೇ.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಿಪಿಎಂ ಪ್ರಭಾವ ದಟ್ಟವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗಟ್ಟಿ ಸ್ಪರ್ಧೆ ನೀಡಿದ್ದು ಸಿಪಿಎಂ ಅಭ್ಯರ್ಥಿಯೇ. 51 ಸಾವಿರ ಮತ ಪಡೆದು ಕಡಿಮೆ ಅಂತರದಲ್ಲಿ ಸೋತರು ಜಿ.ವಿ. ಶ್ರೀರಾಮರೆಡ್ಡಿ. ಆ ಚುನಾವಣೆ ಆಗಿ ಒಂದು ವರ್ಷ ಕೂಡ ಆಗಿಲ್ಲ. ಅಷ್ಟರಲ್ಲೇ ಕಾರ್ಯಕರ್ತರಲ್ಲಿ ಈ ರೀತಿ ಅನಾಥ ಭಾವ ಆವರಿಸಿದೆ!

ತೇವ ಮತ್ತು ದೀಪ
‘ಜನರು ಸೈಲಂಟಾಗವರೆ– ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ! ತೇವ ಯಾವ ಕಡೆ ಇರುತ್ತೋ ಆ ಕಡೆ ವಾಲುತ್ತೆ ದೀಪ’ ಎನ್ನುತ್ತಾರೆ ಕುಮಾರಯ್ಯ. ನೆಲಮಂಗಲ ಪಟ್ಟಣದಲ್ಲಿ ಆಟೊ ಚಾಲಕರಾಗಿರುವ ಇವರು, ತೊರೆ ಭೈರಸಂದ್ರ ಗ್ರಾಮದ ನಿವಾಸಿ. ಹಣ–ಆಮಿಷಗಳ ಪ್ರಭಾವವನ್ನು ಅವರು ಈ ರೀತಿ ಬಣ್ಣಿಸಿದರು.

ಪ್ರಜಾವಾಣಿ ವಿಶೇಷಸಂದರ್ಶನಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT