ಶುಕ್ರವಾರ, ಜನವರಿ 27, 2023
20 °C
‘ತುಳು ವೈಭವೋ 2021’ರಲ್ಲಿ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್

ತುಳುವಿಗೆ ಮಾನ್ಯತೆಗೆ ಸದನದಲ್ಲಿ ಚರ್ಚಿಸಿ: ದಯಾನಂದ ಕತ್ತಲ್‌ಸಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ‘ಸರ್ಕಾರವು ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಿ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು’ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್ ಒತ್ತಾಯಿಸಿದರು.

ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಶುಕ್ರವಾರ ರಾತ್ರಿ ಮೂಡಿಗೆರೆ ತುಳುಕೂಟ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ ‘ತುಳು ವೈಭವೋ 2021’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ 2.5 ಕೋಟಿ ತುಳು ಭಾಷಿಕರಿದ್ದು, ಕಳೆದ 20 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿದರೂ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಿ ಅಧಿಕೃತ ರಾಜ್ಯ ಭಾಷೆಯನ್ನಾಗಿ ಸ್ವೀಕರಿಸಲು ಸರ್ಕಾರ ಸಿದ್ಧವಿಲ್ಲ. ಈ ಬಗ್ಗೆ ಶಾಸಕರು ಸದನದಲ್ಲಿ ಗಂಭೀರ ಚರ್ಚೆ ನಡೆಸುವ ಅಗತ್ಯವಿದೆ. ಕರಾವಳಿಯಿಂದ ಹೊರಟಿರುವ ತುಳು ಭಾಷೆಯು ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಧರ್ಮ ಸೇರಿದಂತೆ ಹಲವು ಧರ್ಮೀಯರಿಗೆ ಮೂಲ ಭಾಷೆಯಾಗಿದೆ. ದೇಶ –ವಿದೇಶದಲ್ಲಿ ನೆಲೆಸಿ ರಾಜ್ಯಕ್ಕೆ ಅಧಿಕ ಸಂಪನ್ಮೂಲ ಹರಿದು ಬರಲು ತುಳು ಭಾಷಿಕರು ಶ್ರಮಿಸುತ್ತಿದ್ದಾರೆ. ತುಳು ಲಿಪಿಯನ್ನು ಕೇರಳಕ್ಕೆ ಕೊಂಡೊಯ್ದು ಮಲೆಯಾಳಂ ಭಾಷಾ ಲಿಪಿ ತಯಾರಿಸುವಾಗ ತುಳು ಲಿಪಿಯನ್ನು ಬಳಸಲಾಗಿದೆ. ರಾಜ್ಯದ ಸ್ಥಳೀಯ ಸಂಸ್ಥೆಗಳ ಸಾಮಾನ್ಯ ಸಭೆಗಳಲ್ಲಿ ನಿರ್ಣಯ ತೆಗೆದುಕೊಳ್ಳುವ ಮೂಲಕ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಸೇರ್ಪಡೆಗೊಳಿಸುವಂತೆ ಹೋರಾಟ ನಡೆಸುವ ಅಗತ್ಯವಿದೆ’ ಎಂದರು.

ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಕರಾವಳಿಯ ಯಕ್ಷಗಾನ, ಭೂತಕೋಲ, ಕಂಬಳ ಸೇರಿದಂತೆ ಹಲವು ಜಾನಪದ ಚಟುವಟಿಕೆಗಳಿಂದ ಸಾಂಸ್ಕೃತಿಕ ಲೋಕದಲ್ಲಿ ಅಗ್ರಸ್ಥಾನ ಪಡೆದಿರುವ ತುಳು ಭಾಷೆಯು ಬೆಳವಣಿಗೆಯಲ್ಲಿ ಹಿಂದೆ ಉಳಿದಿಲ್ಲ. ವಿವಿಧ ಧರ್ಮಗಳನ್ನು ಒಗ್ಗೂಡಿಸಿ, ತನ್ನ ಭಾಷಾ ಜ್ಞಾನವನ್ನು ಜಗತ್ತಿಗೆ ಹರಡಿರುವ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಅಗತ್ಯವಿದೆ. ಈ ಕಾರ್ಯಕ್ಕಾಗಿ ಸದನದ ಒಳಗೆ ಹಾಗೂ ಹೊರಗೆ ನಡೆಯುವ ಹೋರಾಟಕ್ಕೆ ನನ್ನ ಬೆಂಬಲವಿದೆ’ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನಿವೃತ್ತ ಶಿಕ್ಷಕ ಲಕ್ಷ್ಮಣ್‍ ಗೌಡ, ಸಮಾಜ ಸೇವಕ ಆರೀಫ್ ಬಣಕಲ್, ಕಳೆದ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ನಿಖಿತಾ ಲಿಷಾ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ಲಕುಮಿ ತಂಡದಿಂದ ‘ಎನ್ನ ಭಂಙ ಎಂಕೇ ಗೊತ್ತು’ ಎಂಬ ನಾಟಕ ಪ್ರದರ್ಶಿಸಲಾಯಿತು.

ತುಳುಕೂಟದ ಅಧ್ಯಕ್ಷ ಜಾನಪ್ಪ ಮಾಸ್ಟರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ರವೀಂದ್ರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ನಿಟ್ಟೆ ಶಶಿಧರ ಶೆಟ್ಟಿ, ನರೇಂದ್ರ ಕೆರೆಕಾಡು, ಮುಸ್ಲಿಂ ಧರ್ಮಗುರು ನಿಜಾಮುದ್ದೀನ್ ಅನ್ಸಾರಿ, ಮುಖಂಡರಾದ ಡಾ. ರಾಮಚರಣ ಅಡ್ಯಂತಾಯ, ಜಾನ್ ಡಿಸೋಜ, ವಿನೋದ್ ಶೆಟ್ಟಿ, ವಸಂತ ಎಸ್ ಪೂಜಾರಿ, ವಿಶ್ವಕುಮಾರ್, ದಿನಕರ ಆಚಾರ್ಯ, ಟಿ. ಹರೀಶ್, ಯೋಗೇಶ್ ಪೂಜಾರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು