ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಪ್‌ಲೈನ್ ಬಳಸಿ ಕೆರೆ ತುಂಬಿಸಿ: ಶಾಸಕ

ಮಾನಸಿಕೆರೆಯ ನೀರು ತಳ ಹಂತಕ್ಕೆ– ಜಿಲ್ಲಾಧಿಕಾರಿಯ ಅನುಮತಿ ಕೋರಿಕೆಗೆ ಸಲಹೆ
Last Updated 2 ಜುಲೈ 2019, 16:59 IST
ಅಕ್ಷರ ಗಾತ್ರ

ತರೀಕೆರೆ: ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುತ್ತಿರುವ ಮಾನಸಿಕೆರೆಯ ನೀರು ತಳ ಹಂತ ತಲುಪಿರುವ ಕಾರಣ ಕಡೂರು- ಬೀರೂರು ಮಾರ್ಗವಾಗಿ ನೀಡಲಾಗುತ್ತಿರುವ ಭದ್ರ ನಾಲೆಯ ನೀರಿಗೆ ಪೈಪ್‌ಲೈನ್ ಬಳಸಿಕೊಂಡು ಕೆರೆಯನ್ನು ತುಂಬಿಸಲು ಜಿಲ್ಲಾಧಿಕಾರಿಯ ಅನುಮತಿ ಪಡೆದು, ಬುಧವಾರವೇ ಕ್ರಮ ವಹಿಸಬೇಕು ಎಂದು ಶಾಸಕ ಡಿ.ಎಸ್.ಸುರೇಶ್ ಸೂಚಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರದಂದು ನಡೆದ ಪಟ್ಟಣಕ್ಕೆ ಕುಡಿಯುವ ನೀರಿನ ಕುರಿತ ತುರ್ತು ಸಭೆ ಹಾಗೂ ಪುರಸಭೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ‘ಸಮಸ್ಯೆ ಎದುರಾದಾಗೆಲ್ಲ ನೀರು ಬಳಸಿಕೊಳ್ಳುವ ಬಗ್ಗೆ ಜಿಲ್ಲಾಧಿಕಾರಿ ಶಾಶ್ವತ ಅನುಮತಿ ನೀಡುವಂತೆ ಒತ್ತಾಯಿಸುತ್ತೇನೆ’ ಎಂದು ತಿಳಿಸಿದರು.

‘ಪುರಸಭೆ ಅಧಿಕಾರಿಗಳು ಬೆಳಿಗ್ಗೆ ಸಮಯದಲ್ಲಿ ಪಟ್ಟಣ ವೀಕ್ಷಣೆ ನಡೆಸಿ ನೀರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು. ಹಾದಿಕೆರೆ ದಾರಿ ಹಾಗೂ ಇತರೆಡೆ ಓವರ್‌ಹೆಡ್ ಟ್ಯಾಂಕ್ ನೀರು ಸದಾ ಪೋಲಾಗುತ್ತಿರುತ್ತದೆ. ಮೋಟರ್ ಗಳಿಗೆ ಆಟೊ ಸ್ಟಾರ್ಟ್ ಅಳವಡಿಸಿ. ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮುಂದಿರುವ ಜಾಗವನ್ನು ಶಾಲೆಯ ಮಕ್ಕಳು ಬಳಸಿಕೊಳ್ಳುತ್ತಿದ್ದಾರೆ. ನೀರಿನ ಟ್ಯಾಂಕ್ ನಿರ್ಮಿಸಲು ಅಗತ್ಯವಿರುವಷ್ಟು ಮಾತ್ರ ಜಾಗ ಬಳಸಿಕೊಳ್ಳಿ’ ಎಂದು ಸಲಹೆ ನೀಡಿದರು.

ಬಾಪೂಜಿ ಕಾಲೊನಿಯ ಬಾಬು ಜಗಜೀವನ್ ರಾಂ ಭವನ ಹತ್ತಾರು ವರ್ಷದಿಂದ ಅರ್ಧಕ್ಕೆ ನಿಂತಿದ್ದು, ಕಾಮಗಾರಿ ಮುಂದುವರಿಸದಿರುವ ಬಗ್ಗೆ ನಡೆದ ಚರ್ಚೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭೈರಪ್ಪ, ‘ನಮ್ಮ ಇಲಾಖೆ ಕಟ್ಟಡವನ್ನು ನಿರ್ಮಿಸಿಲ್ಲ’ ಎಂದು ಮಾಹಿತಿ ನೀಡಿದರು. ಪುರಸಭೆ ಕಂದಾಯ ಅಧಿಕಾರಿ ಮಂಜುನಾಥ್ ಸಭೆಗೆ ಮಾಹಿತಿ ನೀಡಿ ಪುರಸಭೆಯ ಶೇ24.5 ರ ನಿಧಿಯಲ್ಲಿ ಕಟ್ಟಡಕ್ಕೆ ತಳಪಾಯ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.

ಪುರಸಭೆಯ 24.5 ಅನುದಾನದ ನಿಧಿಯಲ್ಲಿ ಅವಕಾಶ ಮಾಡಿಕೊಂಡು ಮುಂದಿನ ದಿನದಲ್ಲಿ ಭವನ ಪೂರ್ಣಗೊಳಿಸಲು ಸೂಚಿಸಿದ ಶಾಸಕರು, ಅಂಬೇಡ್ಕರ್ ಭವನ ನಿರ್ವಹಣೆ ಇಲ್ಲದೆ ಸೊರಗುತ್ತಿದ್ದು, ಪುರಸಭೆಗೆ ಸಮಾಜ ಕಲ್ಯಾಣ ಇಲಾಖೆಯು ಭವನ ಹಸ್ತಾಂತರ ಪ್ರಕ್ರಿಯೆ ಶೀಘ್ರದಲ್ಲಿ ನಡೆಸಲಿ ಎಂದು ಹೇಳಿದರು.

ಪಟ್ಟಣದ ಪಂಪ್ ಹೌಸ್ ಬಳಿಯ ಶುದ್ಧ ಗಂಗಾ ಕುಡಿಯುವ ನೀರಿನ ಘಟಕ ಮೂರು ವರ್ಷಗಳಿಂದ ಸ್ಥಗಿತ ಗೊಂಡಿದ್ದು, ಪುರಸಭೆ ಮುಂದಿನ ಕ್ರಮವಹಿಸಿ ಘಟಕ ನಿರ್ವಹಣೆಗೆ ಕ್ರಮವಹಿಸಲು ಸೂಚಿಸಿದರು. ಪಟ್ಟಣ ವ್ಯಾಪ್ತಿಯಲ್ಲಿ ನಾಗರಿಕರ ಸಮಸ್ಯೆಗಳ ಬಗ್ಗೆ ದೂರುಗಳು ಬರುತ್ತಿದ್ದು, ಉಪ ವಿಭಾಗಾಧಿಕಾರಿಯೊಂದಿಗೆ ವಾರ್ಡ್ ವಾರು ಜನ ಸಂಪರ್ಕ ಸಭೆ ನಡೆಸುವುದಾಗಿ ಹೇಳಿದರು.

ಉಪ ವಿಭಾಗಾಧಿಕಾರಿ ಬಿ.ಆರ್.ರೂಪಾ ಮಾತನಾಡಿ, ‘ರಸ್ತೆ ಬದಿಯಲ್ಲಿ ಮೀನು ಮಾರಾಟ ನಡೆಯುತ್ತಿದೆ. ಪಟ್ಟಣದಲ್ಲಿ ಸ್ಚಚ್ಛತೆ ಬಗ್ಗೆ ಅನೇಕ ದೂರುಗಳಿವೆ. ಆದರೆ, ಕ್ರಮ ವಹಿಸಲಾಗಿದೆ ಎಂದು ಸುಳ್ಳು ಹೇಳಿದ್ದೀರಾ’ ಎಂದು ಆರೋಗ್ಯ ನಿರೀಕ್ಷಕರಿಗೆ ತರಾಟೆ ತೆಗೆದುಕೊಂಡರು.

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳಾದ ಭಾಸ್ಕರ್, ಮಾರುತಿ, ಪುರಸಭೆ ಅಧಿಕಾರಿಗಳಾದ ಬಿಂದು, ರಮೇಶ್, ಮಹೇಶ್, ನಾಗಪ್ಪ, ಉಮೇಶ್, ತಾಹೇರ ತಸ್ನೀಮ್ ಹಾಜರಿದ್ದರು.

ಟೆಂಡರ್ ಹಂತದಲ್ಲಿ ಕಾಮಗಾರಿ

ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್ ಮಾತನಾಡಿ, ‘ಸ್ವಯಂ ಘೋಷಿ ಆಸ್ತಿ ತೆರಿಗೆಯಲ್ಲಿ ಈ ವರ್ಷ ₹1.50 ಕೋಟಿ ಕರ ವಸೂಲಿಯಾಗಿದೆ. ಕುಡಿಯುವ ನೀರಿನ ಕಾಮಗಾರಿಗೆ ಎಸ್.ಎಫ್.ಸಿ. ಮೂಲಕ ₹ 16 ಲಕ್ಷ ಅನುದಾನ ಬಿಡುಗಡೆಯಾಗಿದೆ. ಪಟ್ಟಣದಲ್ಲಿ ₹ 2.36 ಕೋಟಿಯ ಅಭಿವೃದ್ಧಿ ಕಾಮಗಾರಿ ಟೆಂಡರ್ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT