ಬುಧವಾರ, ಏಪ್ರಿಲ್ 14, 2021
31 °C
ಪತ್ರಿಕಾ ದಿನಾಚರಣೆಯಲ್ಲಿ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ

ನೈತಿಕತೆ ಉಳಿದಿರುವುದೇ ಮುದ್ರಣ ಮಾಧ್ಯಮಗಳಲ್ಲಿ: ಡಾ.ಬರಗೂರು ರಾಮಚಂದ್ರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಮಾಧ್ಯಮಗಳು ಉದ್ಯಮವಾಗಿ ಬದಲಾದರೂ ಒಂದಿಷ್ಟು ಮುದ್ರಣ ಮಾಧ್ಯಮಗಳು ಇಂದಿಗೂ ನೈತಿಕತೆ ಉಳಿಸಿಕೊಂಡಿರುವುದು ಸಂತೋಷಕರ ಸಂಗತಿ’ ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ಜಿಲ್ಲಾ ಪತ್ರಕರ್ತರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ‘ಪತ್ರಿಕಾ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ‘ಸ್ವಾತಂತ್ರ್ಯ, ಚಳವಳಿ ಹೀಗೆ ವಿಶೇಷ ಸಂದರ್ಭದಲ್ಲಿ ಪತ್ರಿಕೆಗಳು ವಹಿಸಿರುವ ಪಾತ್ರ ಮಹತ್ವದ್ದಾಗಿದೆ. ನಿಜಕ್ಕೂ ಪತ್ರಿಕೆಗಳ ಹುಟ್ಟು ರೋಮಾಂಚನ’ ಎಂದು ಬಣ್ಣಿಸಿದರು.

‘ದಿನ ಪತ್ರಿಕೆಗಳಿಗೂ ಟ್ಯಾಬ್ಲೆಯ್ಡ್‌ ಪತ್ರಿಕೆಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ದೃಶ್ಯ ಹಾಗೂ ಇತರೆ ಮಾಧ್ಯಮ ಹುಟ್ಟಿಕೊಂಡ ನಂತರ ಪತ್ರಿಕೆಗಳ ಸ್ಥಿತಿ ಏನಾಗಿವೆ ? ಬೇಗ ಸುದ್ದಿ ಕೊಡುವ ತವಕದಲ್ಲಿ ದೃಶ್ಯ ಮಾಧ್ಯಮ ನೀಡುವಂಥ ಸುದ್ದಿಗಳೆಲ್ಲವೂ ಸ್ಪೋಟಕ ಸುದ್ದಿಗಳಾಗಿವೆ. ದಿನ ಪತ್ರಿಕೆಗಳ ಮೇಲೂ ಪ್ರಭಾವ ಬೀರಿವೆ. ಆದರೆ, ಸತ್ಯವೋ, ಇಲ್ಲವೋ ಎಂಬ ಪರಮಾರ್ಶೆ ಮಾತ್ರ ಆಗುವುದಿಲ್ಲ. ಅಷ್ಟೊಂದು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಾರೆ. ಕೆಲವೊಮ್ಮೆ ಗಾಳಿ ಸುದ್ದಿಗಳು ವರದಿಯಾಗುವಾಗ ಪ್ರಶ್ನಾರ್ತಕ ಚಿಹ್ನೆ ಬಳಕೆ ಮಾಡುತ್ತಿರುವುದೇ ನಮ್ಮ ಅದೃಷ್ಟ’ ಎಂದರು.

‘ಪತ್ರಿಕಾ ಮಾಧ್ಯಮ ಪತ್ರಿಕೋದ್ಯಮವಾಗಿ, ಚಲನಚಿತ್ರ ಮಾಧ್ಯಮ ಚಲನ ಚಿತ್ರೋದ್ಯಮವಾಗಿ, ಪುಸ್ತಕ ಮಾಧ್ಯಮ ಪುಸ್ತಕೋದ್ಯಮವಾಗಿ ಬದಲಾಗಿವೆ. ಮಾಧ್ಯಮ ಉದ್ದಿಮೆಯಾದ ನಂತರ ಸಂಪಾದನೆಗೆ ಮಹತ್ವ ಹೆಚ್ಚಾಗಿ ಅದೇ ಮುಖ್ಯವಾಗುತ್ತಿದೆ. ಇಷ್ಟೇಲ್ಲಾ ಬೆಳವಣಿಗೆಗಳ ಮಧ್ಯೆ ಮಾಧ್ಯಮಗಳ ನಡುವೆ ನಡೆಯುವ ಸ್ಪರ್ಧೆ ಆರೋಗ್ಯವಾಗಿದ್ದರೆ ಮಾತ್ರ ಬೆಳವಣಿಗೆ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು, ‘ವ್ಯಕ್ತಿಯಾಗುವುದು ಸುಲಭ. ಆದರೆ, ಅಭಿವ್ಯಕ್ತಿಯಾಗುವುದು ಕಷ್ಟ. ಅದು ದುರ್ಗಮ ಹಾದಿಯೂ ಹೌದು’ ಎಂದ ಅವರು, ‘ಈ ನಡುವೆಯೂ ಸಮಾಜದ ಒಳಿತಿಗಾಗಿ ಆರೋಗ್ಯವನ್ನು ಲೆಕ್ಕಿಸದೇ ಪತ್ರಿಕಾ ರಂಗದಲ್ಲಿ ಶ್ರಮಿಸುವ ಪತ್ರಕರ್ತರು ನಮ್ಮ ಮುಂದಿದ್ದಾರೆ’ ಎಂದರು.

‘ಅಭಿವ್ಯಕ್ತಿಯಲ್ಲಿ ಮೂರು ಭಾಗಗಳಿವೆ. ಅದರಲ್ಲಿ ಬೆದರಿಕೆಯ ಅಭಿವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿವೆ. ಪತ್ರಿಕೋದ್ಯಮ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಇಂತವರಿದ್ದಾರೆ. ಇದರಿಂದ ಅನಾರೋಗ್ಯಕರ ಅಭಿವ್ಯಕ್ತಿ ಸೃಷ್ಟಿಯಾಗುತ್ತಿದೆ. ಜತೆಗೆ ವ್ಯಂಗ್ಯ ಅಭಿವ್ಯಕ್ತಿಯೂ ಅಧಿಕವಾಗುತ್ತಿದೆ’ ಎಂದು ವಿಷಾದಿಸಿದರು.

‘ನಮಗೆ ನಿಜವಾಗಿಯೂ ಬೇಕಿರುವುದು ಸಾಮಾಜಿಕ ಸಮಾನತೆ, ವಾಸ್ತವಕತೆ ಹಾಗೂ ಮೌಲ್ವಿಕ ಅಂಶಗಳುಳ್ಳ ಮುಕ್ತ ಅಭಿವ್ಯಕ್ತಿ. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಅಲ್ಲದೆ, ಹೊರನೋಟ ಎಲ್ಲರಲ್ಲೂ ಇದೆ. ಬರಗೂರು ರಾಮಚಂದ್ರಪ್ಪ ಅವರಂತೆಯೇ ಹೆಚ್ಚು ಅಧ್ಯಯನ ಕೈಗೊಳ್ಳುವ ಮೂಲಕ ಒಳನೋಟವನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಹಿರಿಯ ಪತ್ರಕರ್ತ ಟಿ.ಕೆ.ಬಸವರಾಜ್, ಸಂಘದ ಅಧ್ಯಕ್ಷ ಎಚ್.ಲಕ್ಷ್ಮಣ್, ರಾಜ್ಯ ನಿರ್ದೇಶಕ ನರೇನಹಳ್ಳಿ ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ದಿನೇಶ್‌ ಗೌಡಗೆರೆ, ಖಜಾಂಚಿ ಮೇಘ ಗಂಗಾಧರ ನಾಯ್ಕ ಇದ್ದರು.

ಅಂಕಿ-ಅಂಶ

* 15,000 ದೇಶದಲ್ಲಿರುವ ಸಿನಿಮಾ ಸ್ಕ್ರೀನ್‌ಗಳು
* 3.5 ಕೋಟಿ ನಿತ್ಯ ವೀಕ್ಷಿಸುವವರು
* 16,000 ಪತ್ರಿಕೆಗಳು
* 14 ಕೋಟಿ ಓದುಗರು
* 798 ದೃಶ್ಯ ಮಾಧ್ಯಮಗಳು
* 60ಕ್ಕೂ ಅಧಿಕ ಸುದ್ದಿ ಮಾಧ್ಯಮಗಳು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು