ಸೋಮವಾರ, ಜೂನ್ 14, 2021
20 °C

ಐಮಂಗಲದಲ್ಲಿ 220 ಕೆವಿ ವಿದ್ಯುತ್ ಮಾರ್ಗ: ರೈತರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ರೈತರಿಗೆ ನೋಟಿಸ್ ನೀಡದೆ 220 ಕೆವಿ ಸಾಮರ್ಥ್ಯದ ವಿದ್ಯುತ್ ಮಾರ್ಗ ನಿರ್ಮಿಸುತ್ತಿರುವುದನ್ನು ವಿರೋಧಿಸಿ ಗುರುವಾರ ತಾಲ್ಲೂಕಿನ ಐಮಂಗಲ ಹೋಬಳಿ ಮರಡಿದೇವಿಗೆರೆ ಗ್ರಾಮದಲ್ಲಿ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

‘ಐಮಂಗಲ ಹೋಬಳಿಯ ಮರಡಿದೇವಿಗೆರೆ, ಸಿಎನ್ ಮಾಳಿಗೆ, ದೇವರಹಟ್ಟಿ, ಆಲದಮರದಹಟ್ಟಿ, ಕಾಟನಹಟ್ಟಿಗಳಲ್ಲಿ ವಿದ್ಯುತ್ ಮಾರ್ಗ ನಿರ್ಮಿಸುವಾಗ ಸಂತ್ರಸ್ತ ರೈತರಿಗೆ ಮಾಹಿತಿ ನೀಡಿಲ್ಲ. ಸಭೆ ಆಯೋಜಿಸಿಲ್ಲ. ಎಷ್ಟು ಪರಿಹಾರ ಕೊಡಲಾಗುತ್ತದೆ ಎಂದು ತಿಳಿಸಿಲ್ಲ. ರೈತರನ್ನು ಕಡೆಗಣಿಸಿ ಕಾಮಗಾರಿ ನಡೆಸುತ್ತಿದ್ದಾರೆ’ ಎಂದು ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಆಕ್ರೋಶ
ವ್ಯಕ್ತಪಡಿಸಿದರು.

‘ರೈತರ ಒಪ್ಪಿಗೆ ಪಡೆಯದೆ ಅವರ ಜಮೀನುಗಳಲ್ಲಿ ಅತಿಕ್ರಮ ಪ್ರವೇಶ ಮಾಡಿರುವುದು ಅಕ್ಷಮ್ಯ. ಪೊಲೀಸ್ ಬಲ ಇಟ್ಟುಕೊಂಡು ರೈತರನ್ನು ಬೆದರಿಸಿ ಕಾಮಗಾರಿ ನಡೆಸುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆ. ವಿದ್ಯುತ್ ಮಾರ್ಗ ಹಾದು ಹೋಗುವ ಗ್ರಾಮಗಳ ರೈತರ ಸಭೆ ಕರೆಯಬೇಕು. 220 ಮಾರ್ಗ ಹೋಗಿರುವ ಕಡೆ ಎಷ್ಟೆಷ್ಟು ಪರಿಹಾರ ನೀಡಲಾಗಿದೆ ಎಂದು ಸಂಬಂಧಿಸಿದವರು ಹೇಳಬೇಕು. ಸಂಘರ್ಷಕ್ಕೆ ಅವಕಾಶ ಕೊಡದೆ ರೈತರ ಜೊತೆ ಸೌಹಾರ್ದಯುತವಾಗಿ ಮಾತುಕತೆ ನಡೆಸಬೇಕು. ಮೈಸೂರು ಜಿಲ್ಲೆಯಲ್ಲಿ ಕೊಟ್ಟಿರುವಷ್ಟು ಪರಿಹಾರವನ್ನು ನಮ್ಮ ರೈತರಿಗೂ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಶರತ್ ಪಾಟೀಲ್, ಪಿ.ಸಿ. ನಾಗರಾಜ್, ಸಿದ್ದೇಶ್ವರಯ್ಯ, ಮೂರ್ಕಣ್ಣಪ್ಪ, ಪರಮೇಶ್ವರಪ್ಪ, ಕೆಂಚಪ್ಪ,ಕೊಟ್ರಪ್ಪ, ಟಿ. ಮಹಲಿಂಗಪ್ಪ, ಪೂಜಾರಿ ಚಂದ್ರಪ್ಪ, ನಿಂಗಣ್ಣ, ಉಮೇಶ್, ನಿಜಲಿಂಗಪ್ಪ, ರಾಜಶೇಖರಪ್ಪ ಪಾಲ್ಗೊಂಡಿದ್ದರು.

ಪೊಲೀಸ್ ಠಾಣೆಗೆ ದೂರು: ನವದೆಹಲಿಯ ರಿನ್ಯೂ ಪವರ್ ಕಂಪನಿ ಕೋವಿಡ್ ನಿಯಮಗಳನ್ನು ಪಾಲಿಸದೆ, ಹೊರ ರಾಜ್ಯಗಳಿಂದ ಕಾರ್ಮಿಕರನ್ನು ಕರೆತಂದು, ರೈತರ ಇಚ್ಛೆಗೆ ವಿರುದ್ಧವಾಗಿ ವಿದ್ಯುತ್ ಮಾರ್ಗ ನಿರ್ಮಿಸುತ್ತಿದೆ. ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಐಮಂಗಲ ಠಾಣೆಗೆ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಗುರುವಾರ ದೂರು ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು