ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ರೇಣುಕಸ್ವಾಮಿ ಕುಟುಂಬಕ್ಕೆ ₹5 ಲಕ್ಷ ನೆರವು

ಮುಂದೆಯೂ ಸಹಾಯ ಮಾಡುವುದಾಗಿ ಅಭಯ: ಚಿತ್ರರಂಗದ ಪರವಾಗಿ ಕ್ಷಮೆ ಯಾಚನೆ
Published 15 ಜೂನ್ 2024, 16:11 IST
Last Updated 15 ಜೂನ್ 2024, 16:11 IST
ಅಕ್ಷರ ಗಾತ್ರ

ಚಿತ್ರದುರ್ಗ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಪದಾಧಿಕಾರಿಗಳು ಶನಿವಾರ ನಗರದ ವಿಆರ್‌ಎಸ್‌ ಬಡಾವಣೆಯಲ್ಲಿರುವ ರೇಣುಕಸ್ವಾಮಿ ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಜೊತೆಗೆ ₹ 5 ಲಕ್ಷ ನೆರವು ನೀಡಿದರು.

ಕೆಎಫ್‌ಸಿಸಿ ಅಧ್ಯಕ್ಷ ಎನ್‌.ಎಂ.ಸುರೇಶ್‌, ಮಾಜಿ ಅಧ್ಯಕ್ಷರಾದ ಸಾ.ರಾ. ಗೋವಿಂದು ಹಾಗೂ ಚಿನ್ನೇಗೌಡ ಅವರು ರೇಣುಕಸ್ವಾಮಿ ಪತ್ನಿಗೆ ₹ 2.5 ಲಕ್ಷ, ತಂದೆ–ತಾಯಿಗೆ ₹ 2.5 ಲಕ್ಷದ ಚೆಕ್‌ ಹಸ್ತಾಂತರಿಸಿದರು.

‘ಸಾಂಕೇತಿಕವಾಗಿ ನಾವು ₹ 5 ಲಕ್ಷ ನೆರವು ನೀಡಿದ್ದೇವೆ. ಮುಂದೆ ಕೂಡ ಕುಟುಂಬ ಸದಸ್ಯರಿಗೆ ಸಹಾಯ ಮಾಡುತ್ತೇವೆ. ಮನೆಗೆ ಆಧಾರವಾಗಿದ್ದ ರೇಣುಕಸ್ವಾಮಿ ಕೊಲೆಯಾಗಿರುವುದು ದುಃಖದ ಸಂಗತಿ. ಕನ್ನಡ ಚಿತ್ರರಂಗದ ವತಿಯಿಂದ ನಾವು ಕುಟುಂಬದವರ ಕ್ಷಮೆ ಕೋರುತ್ತೇವೆ. ಯಾರೇ ಮಾಡಿದ್ದರೂ ತಪ್ಪು ತಪ್ಪೇ. ಪೊಲೀಸರು ಕಾನೂನಿನ ಅನುಸಾರ ತನಿಖೆ ಮಾಡುತ್ತಿದ್ದು ಸತ್ಯ ಹೊರಬರುವ ವಿಶ್ವಾಸವಿದೆ’ ಎಂದು ಸುರೇಶ್‌ ಹೇಳಿದರು.

‘ಈ ಪ್ರಕರಣದ ವಿಚಾರದಲ್ಲಿ ದರ್ಶನ್‌ ಅಭಿಮಾನಿಗಳು ಪ್ರಚೋದನೆಗೆ ಒಳಗಾಗಬಾರದು. ರಾಜಕುಮಾರ್‌, ವಿಷ್ಣುವರ್ಧನ್‌, ಅಂಬರೀಷ್‌, ಶಂಕರ್‌ನಾಗ್‌ ಅವರಿಗೂ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದರು. ಅವರಾರೂ ಪ್ರಚೋದನೆಗೆ ಒಳಗಾಗಿರಲಿಲ್ಲ. ಜನರು ಶಾಂತಿಯಿಂದ ಇರಬೇಕು. ಎಲ್ಲಾ ವಿಷಯಗಳಿಗೂ ಚಿತ್ರರಂಗ, ವಾಣಿಜ್ಯ ಮಂಡಳಿಯನ್ನು ದೂಷಿಸಬೇಡಿ’ ಎಂದರು.

‘ನಾವು ರಾಜಿಗಾಗಿ ಬಂದಿಲ್ಲ. ರೇಣುಕಸ್ವಾಮಿ ಕುಟುಂಬಕ್ಕೆ ಧೈರ್ಯ ಹೇಳಲು ಬಂದಿದ್ದೇವೆ. ಹುಡುಗ ತಪ್ಪು ಮಾಡಿರಬಹುದು. ಆತನ ತಪ್ಪನ್ನು ಈ ರೀತಿ ವಿಕಾರವಾಗಿ ತೆಗೆದುಕೊಂಡು ಹೋಗಿದ್ದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಇದಕ್ಕೆ ಚಿತ್ರರಂಗ ಹೊಣೆಯಲ್ಲ, ಸಂಬಂಧಪಟ್ಟ ವ್ಯಕ್ತಿಯೇ ಹೊಣೆ’ ಎಂದು ಸಾ.ರಾ.ಗೋವಿಂದು ತಿಳಿಸಿದರು.

‘ಘಟನೆಯ ದಿನ ಸ್ವಲ್ಪ ಸಮಾಧಾನದಿಂದ ವರ್ತಿಸಿದ್ದರೆ ರೇಣುಕಸ್ವಾಮಿ ಪ್ರಾಣ ಉಳಿಯುತ್ತಿತ್ತು. ಮನುಷ್ಯ ವಿವೇಕ ಕಳೆದುಕೊಂಡರೆ ಇಂತಹ ದುರ್ಘಟನೆಗಳು ನಡೆಯುತ್ತವೆ. ಈ ವಿಚಾರದಲ್ಲಿ ರಾಜಕುಮಾರ್‌ ಅವರನ್ನು ಎಲ್ಲರೂ ಅನುಸರಿಸಬೇಕು’ ಎಂದು ಚಿನ್ನೇಗೌಡ ಹೇಳಿದರು.

ಶಾಸಕ ಭೇಟಿ: ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಅವರು ರೇಣುಕಸ್ವಾಮಿ ಮನೆಗೆ ಭೇಟಿ ಕೊಟ್ಟು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ವೈಯಕ್ತಿಕವಾಗಿ ₹2 ಲಕ್ಷ ನೆರವು ನೀಡಿದರು.

ಮಗನ ಬರುವಿಕೆಗೆ ಪಟ್ಟು: ನಡೆಯದ ಅಂತ್ಯಕ್ರಿಯೆ

ರೇಣುಕಸ್ವಾಮಿ ಕೊಲೆ ಪ್ರಕರಣದ 7ನೇ ಆರೋಪಿ ಅನುಕುಮಾರ್‌ ತಂದೆ ಚಂದ್ರಣ್ಣ ಹೃದಯಾಘಾತದಿಂದ ಶುಕ್ರವಾರ ಮೃತಪಟ್ಟಿದ್ದು ಈವರೆಗೂ ಅಂತ್ಯಕ್ರಿಯೆ ನೆರವೇರಿಸಿಲ್ಲ. ‘ಮಗ ಬರುವವರೆಗೂ ಅಂತ್ಯಕ್ರಿಯೆ ಮಾಡುವುದಿಲ್ಲ’ ಎಂದು ಕುಟುಂಬ ಸದಸ್ಯರು ಪಟ್ಟು ಹಿಡಿದಿದ್ದಾರೆ. ಸ್ಥಳೀಯ ದಾನಿಯೊಬ್ಬರು ಮೃತದೇಹ ಇಡುವುದಕ್ಕಾಗಿ ಶೀತಲೀಕರಣದ ಪೆಟ್ಟಿಗೆ ಕೊಡಿಸಿದ್ದಾರೆ.

‘ಅಂತ್ಯಕ್ರಿಯೆಗಾಗಿ ಅನುಕುಮಾರ್‌ನನ್ನು ಕರೆಸುವುದಕ್ಕೆ ಕಾನೂನಿನ ಅಡಿ ಅವಕಾಶ ಇದೆಯೇ ಎಂಬುದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಕೆ.ಸಿ.ವೀರೇಂದ್ರ ಭರವಸೆ ನೀಡಿದರು.

‘ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಕುಮಾರ್‌ಗೆ ಅವಕಾಶ ಮಾಡಿಕೊಡುವಂತೆ ಕೋರಿ ಬೆಂಗಳೂರಿನ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT