ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಜಿಲ್ಲೆಯಲ್ಲಿ 50 ಬಾಲ್ಯವಿವಾಹಕ್ಕೆ ತಡೆ

ಲಾಕ್‌ಡೌನ್‌ ದುರುಪಯೋಗಪಡಿಸಿಕೊಂಡ ಪೋಷಕರು
Last Updated 3 ಜುಲೈ 2020, 4:38 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಅನುಷ್ಠಾನಗೊಳಿಸಿದ ಲಾಕ್‌ಡೌನ್‌ ದುರುಪಯೋಗ
ಪಡಿಸಿಕೊಂಡ ಹಲವು ಪೋಷಕರು, ಮಕ್ಕಳ ಬಾಲ್ಯವಿವಾಹ ಮಾಡಿದ್ದಾರೆ. ಮಾರ್ಚ್‌ನಿಂದ ಮೇವರೆಗೆ ಜಿಲ್ಲೆಯಲ್ಲಿ 50 ಬಾಲ್ಯವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ.

ಬಾಲ್ಯವಿವಾಹ ತಡೆದ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಏಳು ಬಾಲಕಿಯರನ್ನು ರಕ್ಷಿಸಿದ್ದಾರೆ. 18 ವರ್ಷದವರೆಗೆ ಮಕ್ಕಳ ವಿವಾಹ ಮಾಡುವುದಿಲ್ಲವೆಂಬ ಮುಚ್ಚಳಿಕೆಯನ್ನು ಪೋಷಕರಿಂದ ಪಡೆದಿದ್ದಾರೆ. ಬಾಲ್ಯವಿವಾಹ ನಡೆಸಿದ ಆರೋಪದ ಮೇರೆಗೆ ಒಬ್ಬರ ವಿರುದ್ಧ ಮಾತ್ರ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ, ಮೊಳಕಾಲ್ಮುರು ಹಾಗೂ ಚಳ್ಳಕೆರೆ ತಾಲ್ಲೂಕಿನಲ್ಲೇ ಅತಿ ಹೆಚ್ಚು ಬಾಲ್ಯವಿವಾಹ ನಡೆದಿವೆ. ಹಿರಿಯೂರು, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲ್ಲೂಕುಗಳಲ್ಲಿ ಈ ಅನಿಷ್ಠ ಪದ್ಧತಿ ಕೊಂಚ ಮಟ್ಟಿಗೆ ನಿಯಂತ್ರಣದಲ್ಲಿದೆ. ವಲಸೆ ಪ್ರವೃತ್ತಿ ಹೆಚ್ಚಾಗಿರುವ ಪ್ರದೇಶದಲ್ಲಿ ಬಾಲ್ಯವಿವಾಹ ಪಿಡುಗಾಗಿ ಪರಿಣಮಿಸಿದೆ. ಮಾಂಗಲ್ಯಕ್ಕೆ ಕೊರಳೊಡ್ಡಿದ ಬಹುತೇಕ ಮಕ್ಕಳು 13ರಿಂದ 17ರ ವಯೋಮಾನದವರು.

‘ಕೆಲಸ ಅರಸಿ ಮಲೆನಾಡು, ಬೆಂಗಳೂರಿಗೆ ವಲಸೆ ಹೋಗುತ್ತಿದ್ದ ಕಾರ್ಮಿಕರು ಗ್ರಾಮದಲ್ಲಿ ಮಕ್ಕಳನ್ನು ಬಿಡುತ್ತಿದ್ದರು. ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಅವರಲ್ಲಿ ಆತಂಕವಿದೆ. ಶಾಲೆ–ಕಾಲೇಜುಗಳಿಗೆ ಕಳುಹಿಸುವಷ್ಟು ಅರಿವು ಅವರಲ್ಲಿಲ್ಲ. ಹೀಗಾಗಿ, ಮಕ್ಕಳ ವಿವಾಹ ಮಾಡಿ ಜವಾಬ್ದಾರಿ ಕಳೆದುಕೊಳ್ಳಲು ಮುಂದಾಗುತ್ತಾರೆ’ ಎನ್ನುತ್ತಾರೆ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ.

ಲಾಕ್‌ಡೌನ್‌ ಹೇರಿದ್ದು ಬಾಲ್ಯವಿವಾಹ ಮಾಡಲು ಅನುಕೂಲಕರ ಪರಿಸ್ಥಿತಿ ಸೃಷ್ಟಿಸಿತು. ಕೊರೊನಾ ಸೋಂಕಿನ ಆತಂಕ ಜನ
ಸಂಚಾರವನ್ನು ವಿರಳಗೊಳಿಸಿತ್ತು. ವಿವಾಹ ತಡೆಯಲು ಅಧಿಕಾರಿಗಳು ಬರುವುದಿಲ್ಲ ಎಂಬುದು ಜನರ ಊಹೆ ಆಗಿತ್ತು. ಶಾಲೆ–ಕಾಲೇಜು ರಜೆ ಇರುವುದರಿಂದ ಮಕ್ಕಳು ಮನೆಯಲ್ಲಿಯೇ ಉಳಿದಿದ್ದರು. ಹೀಗಾಗಿ, ಕಳೆದ ವರ್ಷಕ್ಕಿಂತ ಹೆಚ್ಚು ಬಾಲ್ಯ ವಿವಾಹ ನಡೆದಿವೆ ಎಂಬುದನ್ನು ದಾಖಲೆಗಳೇ ಹೇಳುತ್ತಿವೆ.

ಮಕ್ಕಳ ನೆರವಿಗೆ ರೂಪಿಸಿದ ‘1098 ಮಕ್ಕಳ ಸಹಾಯವಾಣಿ’ಗೆ ಬಂದಿರುವ ಕರೆಗಳ ಜಾಡು ಹಿಡಿದು ಸಾಗಿದ ಅಧಿಕಾರಿಗಳ ತಂಡ ಬಾಲ್ಯವಿವಾಹ ತಡೆದಿದೆ. ಅತಿ ಹೆಚ್ಚು ವಿವಾಹಗಳು ನಸುಕಿನ 5 ಗಂಟೆಗೆ ನಿಗದಿಯಾಗಿದ್ದವು ಎಂಬ ಸಂಗತಿ ಬಯಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಮಾರ್ಗ ಕಂಡುಕೊಂಡಿದ್ದರು ಎಂಬುದು ವಿಚಾರಣೆಯ ವೇಳೆ ಗೊತ್ತಾಗಿದೆ.

‘ಬಾಲ್ಯವಿವಾಹದಿಂದ ರಕ್ಷಣೆ ಮಾಡಿದ ಮಕ್ಕಳಿಗೆ ಬಾಲಕಿಯರ ಬಾಲ ಮಂದಿರದಲ್ಲಿ ಆಶ್ರಯ ಕಲ್ಪಿಸುತ್ತಿದ್ದೆವು. ಕೊರೊನಾ ಸೋಂಕು ಕಾಣಿಸಿಕೊಂಡಿರುವ ಕಾರಣಕ್ಕೆ ಕೆಲ ದಿನ ಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ಇರಿಸಿದ್ದೇವೆ. ಕ್ವಾರಂಟೈನ್‌ ಅವಧಿ ಪೂರ್ಣಗೊಂಡ ಬಳಿಕ ಬಾಲ ಮಂದಿರಕ್ಕೆ ಸ್ಥಳಾಂತರಿಸುತ್ತೇವೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಭಾರತಿ ಬಣಕಾರ ತಿಳಿಸಿದರು.

ಒಂದೇ ಶಾಲೆಯ14 ಮಕ್ಕಳು!:

ಮೊಳಕಾಲ್ಮುರು ತಾಲ್ಲೂಕಿನ ರಾಂಪುರದ ಖಾಸಗಿ ಶಾಲೆಯ 14 ಹೆಣ್ಣು ಮಕ್ಕಳು ಬಾಲ್ಯವಿವಾಹವಾಗಿರುವುದಕ್ಕೆ ಸಂಬಂಧಿಸಿದಂತೆ ಸ್ವಯಂ ಸೇವಾ ಸಂಸ್ಥೆಯೊಂದಕ್ಕೆ ದೂರು ಬಂದಿದೆ.

ಪ್ರಭಾವಿ ರಾಜಕಾರಣಿಯೊಬ್ಬರು ಈ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯಲ್ಲಿದ್ದಾರೆ. ಆದರೂ, ಶಾಲೆಯ ಮಕ್ಕಳು ಬಾಲ್ಯವಿವಾಹ ಆಗಿರುವುದನ್ನು ತಡೆಯಲು ಸಾಧ್ಯವಾಗಿಲ್ಲ. ಬಾಲ್ಯವಿವಾಹವಾದ ಬಹುತೇಕ ಎಲ್ಲರೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರು. ಇವರ ಪತ್ತೆ ಕಾರ್ಯ ನಡೆದಿದೆಯಾದರೂ ಬಾಲ್ಯವಿವಾಹ ನಿರೂಪಿಸುವ ಸಾಕ್ಷ್ಯಗಳು ಮಾತ್ರ ಲಭ್ಯವಾಗಿಲ್ಲ.

ಗರ್ಭಪಾತಕ್ಕೆ ಕೋರ್ಟ್‌ ಮೆಟ್ಟಿಲು:

‘ಹೊಟ್ಟೆಯಲ್ಲಿರುವ ಮಗು ಬೇಡ. ಅದನ್ನು ತೆಗೆದುಹಾಕಿದರೆ ಶಿಕ್ಷಣ ಮುಂದುವರಿಸಲು ಅನುಕೂಲವಾಗುತ್ತದೆ...’

ಇದು 17 ವರ್ಷದ ಬಾಲಕಿಯೊಬ್ಬಳ ಸ್ಪಷ್ಟ ನುಡಿ ಇದು. ಚಿತ್ರದುರ್ಗ ನಗರದ ಬಡಾವಣೆಯೊಂದರ ಬಾಲಕಿ ಪ್ರಥಮ ಪಿಯು ವಿದ್ಯಾರ್ಥಿನಿ. ಶಿಕ್ಷಣ ಮುಂದುವರಿಸಿ ಉದ್ಯೋಗ ಹಿಡಿಯುವ ಕನಸು ಕಂಡಿದ್ದ ಬಾಲಕಿಗೆ ಲಾಕ್‌ಡೌನ್‌ ಮುಳುವಾಗಿದೆ. ಪೋಷಕರು ಬಾಲಕಿಯನ್ನು ವಿವಾಹ ಮಾಡಿ ಕೈತೊಳೆದುಕೊಂಡಿದ್ದಾರೆ.

ಕೆಲ ದಿನಗಳ ಬಳಿಕ ಬಾಲ್ಯವಿವಾಹದ ಬಗ್ಗೆ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ಸಿಕ್ಕಿದೆ. ಬಾಲಕಿಯನ್ನು ರಕ್ಷಿಸಿ ಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ಆಶ್ರಯ ಕಲ್ಪಿಸಲಾಗಿದೆ. ಅದಾಗಲೇ ಗರ್ಭಿಣಿಯಾಗಿದ್ದ ಬಾಲಕಿ ಗರ್ಭಪಾತಕ್ಕೆ ಅವಕಾಶ ನೀಡುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT