ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯದ ಫಲ ಉಂಡ ನಗರ, ಅವನತಿಯತ್ತ ಹಳ್ಳಿ; ರಂಗಕರ್ಮಿ ಪ್ರಸನ್ನ ಅಭಿಪ್ರಾಯ

‘ಪವಿತ್ರ ವಸ್ತ್ರ’ ಸಮರ್ಪಣಾ ಅಭಿಯಾನದಲ್ಲಿ ರಂಗಕರ್ಮಿ ಪ್ರಸನ್ನ ಅಭಿಪ್ರಾಯ
Last Updated 16 ಆಗಸ್ಟ್ 2021, 2:19 IST
ಅಕ್ಷರ ಗಾತ್ರ

ಸಾಣೇಹಳ್ಳಿ (ಹೊಸದುರ್ಗ): ‘ಹಳ್ಳಿಗಳ ಗುಡಿ ಕೈಗಾರಿಕೆಗಳು ನಶಿಸಿ ಹೋಗಿ, ಹಳ್ಳಿಗರು ಆತ್ಮಸ್ಥೈರ್ಯ ಕಳೆದುಕೊಂಡಿ
ದ್ದಾರೆ. ಹಳ್ಳಿಗಳು ದರಿದ್ರದ ನಾಡಾಗಿವೆ. ಸರ್ಕಾರಗಳು ನಾಚಿಕೆಗೇಡಿನ ಜನಪ್ರಿಯ ಯೋಜನೆಗಳ ಮೂಲಕ ಅವರಿಗೆ ಮುಫತ್ತಾಗಿ ಬಟ್ಟೆ, ಅನ್ನ, ಟಿವಿ ಮುಂತಾದ ವಸ್ತುಗಳನ್ನು ಕೊಟ್ಟು ಅವರನ್ನು ಪರಾವಲಂಬಿಗಳನ್ನಾಗಿ ಮಾಡುತ್ತಿವೆ’ ಎಂದು ರಂಗಕರ್ಮಿ ಪ್ರಸನ್ನ ದೂರಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ರಂಗ ಪ್ರಯೋಗ ಶಾಲೆಯಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಭೀಮನಕೋಣೆಯ ಚರಕ ಸಂಸ್ಥೆ ಭಾನುವಾರ ಆಯೋಜಿಸಿದ್ದ ‘ಪವಿತ್ರ ವಸ್ತ್ರ ಸಮರ್ಪಣಾ’ ಅಭಿಯಾನಕ್ಕೆ ಪವಿತ್ರ ವಸ್ತ್ರ ನೀಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

‘75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯಲ್ಲಿದ್ದೇವೆ. ಸ್ವಾತಂತ್ರ್ಯದ ಎಲ್ಲ ಫಲಗಳನ್ನು ನಗರಗಳು ಮತ್ತು ಅಲ್ಲಿನ ಕೈಗಾರಿಕೆಗಳು ಪಡೆದುಕೊಂಡು ಅನುಭವಿಸಿ ರಾಕ್ಷಸಾಕಾರ ಪಡೆದುಕೊಳ್ಳುತ್ತಿವೆ. ಬುದ್ಧ, ಬಸವ, ಕನಕ, ಅಕ್ಕನಂಥ ಧೀಮಂತರು ಬಾಳಿ ಬದುಕಿದ ನಾಡಿನ ಜನ ಭಿಕ್ಷುಕರಾಗುತ್ತಿದ್ದಾರೆ. ಪವಿತ್ರ ವಸ್ತ್ರ ಅಭಿಯಾನದ ಮೂಲಕ ಗ್ರಾಮೀಣ ಉತ್ಪನ್ನಗ
ಳನ್ನು ಮುನ್ನೆಲೆಗೆ ತರುವ ಕೆಲಸವನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾಡುತ್ತಿರುವುದು ಅರ್ಥಪೂರ್ಣ’ ಎಂದು ಶ್ಲಾಘಿಸಿದರು.

ಜೆಡಿಯು ಮುಖಂಡ ಮಹಿಮ ಪಟೇಲ್, ‘ಮಾನವ ಇಂದು ಎಲ್ಲಾ ಇದ್ದರೂ ಏನೂ ಇಲ್ಲದವನಂತೆ ಅನಿಶ್ಚಿತತೆ, ಆತಂಕದಿಂದ ಬದುಕು ವಂತಾಗಿದೆ. ಇವುಗಳಿಂದ ಮುಕ್ತಿ ಪಡೆಯಬೇಕಾದರೆ ಅರಿವಿನಿಂದ ಒಟ್ಟಾಗಿ ಕೆಲಸ ಮಾಡುವ ಅನಿವಾರ್ಯ ಇದೆ’ ಎಂದು ತಿಳಿಸಿದರು.‌

ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ನಾವಿಂದು ತಿನ್ನುವ ಅನ್ನ, ಕುಡಿಯುವ ನೀರು, ತೊಡುವ ಬಟ್ಟೆಯಾದಿಯಾಗಿ ವಿಷಮಯವಾಗಿವೆ. ಎಲ್ಲದರಲ್ಲೂ ವಿಷವೇ ತುಂಬಿರುವಂತೆ ಅಂತರಂಗವೂ ವಿಷದಿಂದಲೇ ತುಂಬಿದೆ. ನಾವು ಹಿಂದಿನ ಪರಂಪರೆಯ ಕಡೆ ಮುಖಮಾಡಬೇಕಾಗಿದೆ’ ಎಂದರು.

ಶಿವನಕೆರೆ ಬಸವಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಶಾಲೆಯ ಪ್ರಾಂಶುಪಾಲ ಆರ್‌. ಜಗದೀಶ್ ರಂಗ ಗೀತೆ ಹಾಡಿದರು. ಅಧ್ಯಾಪಕ ಎಚ್‌.ಎಸ್. ದ್ಯಾಮೇಶ್ ವಂದಿಸಿದರು. ಎಸ್.ಕೆ. ಪರಮೇಶ್ವರಯ್ಯ, ಕೃಷಿಕ ಶಂಕರಣ್ಣ, ಚರಕ ಸಂಸ್ಥೆ ಅಧ್ಯಕ್ಷೆ ಮಹಾಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT