ಶನಿವಾರ, ಮಾರ್ಚ್ 6, 2021
28 °C
ಅಪಹರಣದ ವದಂತಿ ಸುಖಾಂತ್ಯ

ಆಟವಾಡುವಾಗ ಆಕಸ್ಮಿಕವಾಗಿ ಮುಚ್ಚಿದ ಬಾಗಿಲು: ಕಾರಿನಲ್ಲೇ ದಿನ ಕಳೆದ ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ಆಟವಾಡುವಾಗ ಆಕಸ್ಮಿಕವಾಗಿ ಮುಚ್ಚಿದ ಬಾಗಿಲು ತೆರೆಯಲು ಸಾಧ್ಯವಾಗದೇ ಮಕ್ಕಳಿಬ್ಬರು ಒಂದು ದಿನ ಕಾರಿನಲ್ಲೇ ಕಳೆದ ಪ್ರಕರಣ ತಾಲ್ಲೂಕಿನ ರಾಂಪುರದಲ್ಲಿ ಬೆಳಕಿಗೆ ಬಂದಿದೆ. ಮಕ್ಕಳು ಆರೋಗ್ಯವಾಗಿದ್ದು, ಅಪಹರಣದ ವದಂತಿ ಸುಖಾಂತ್ಯ ಕಂಡಿದೆ.

ರಾಂಪುರದ ಕೆರೆಕೊಂಡಾಪುರ ಬಡಾವಣೆಯ ವಸಂತ ಎಂಬುವರ ನಾಲ್ಕು ವರ್ಷದ ಪುತ್ರ ಲಿಂಕೇಶ ಹಾಗೂ ರುದ್ರಪ್ಪ ಎಂಬುವರ ಆರು ವರ್ಷದ ಪುತ್ರ ಜೀವನ್ ಸೋಮವಾರ ಆಟವಾಡುತ್ತಿದ್ದರು. ಕೆಲ ಹೊತ್ತಿನ ಬಳಿಕ ಮಕ್ಕಳು ಸ್ಥಳದಲ್ಲಿ ಇರದಿದ್ದರಿಂದ ಗಾಬರಿಯಾದ ಪೋಷಕರು ಮಕ್ಕಳು ಕಾಣೆಯಾದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಮಕ್ಕಳ ಅಪಹರಣವಾಗಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿತ್ತು.

‍ಪೊಲೀಸರು ಎರಡು ತಂಡಗಳನ್ನು ರಚಿಸಿ ಮಕ್ಕಳಿಗೆ ಹುಡುಕಾಟ ನಡೆಸಿದ್ದರು. ವಾಹನ ತಪಾಸಣೆ ಮಾಡಿದ್ದರು. ಗ್ರಾಮ ಸಮೀಪದ ಕೆರೆ, ಕೊಳ್ಳ, ಬಾವಿಗಳಲ್ಲಿಯೂ ಮಕ್ಕಳಿಗೆ ಹುಡುಕಾಟ ನಡೆದಿತ್ತು. ತಡರಾತ್ರಿಯಾದರೂ ಮಕ್ಕಳು ಪತ್ತೆಯಾಗದಿರುವುದರಿಂದ ಜನರ ಆತಂಕ ಇನ್ನಷ್ಟು ಹೆಚ್ಚಾಗಿತ್ತು.

ಮಕ್ಕಳು ಆಟವಾಡುತ್ತಿದ್ದ ಸ್ಥಳದ ಸಮೀಪದಲ್ಲೇ ನಿಲುಗಡೆಯಾಗಿದ್ದ ಕಾರಿನಲ್ಲಿ ಮಂಗಳವಾರ ಬೆಳಿಗ್ಗೆ 7ಕ್ಕೆ ಸದ್ದು ಕೇಳಿಸಿದೆ. ಸ್ಥಳೀಯರೊಬ್ಬರು ಸಮೀಪಕ್ಕೆ ತೆರಳಿ ಪರಿಶೀಲಿಸಿದಾಗ ಮಕ್ಕಳು ಕಾರಿನಲ್ಲಿ ಸಿಲುಕಿದ್ದು ಗೊತ್ತಾಗಿದೆ. ಕಾರಿನ ಬಾಗಿಲು ತೆರೆಯುವುದು ಕೊಂಚ ತಡವಾಗಿದ್ದರೂ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಮಕ್ಕಳೇ ಕಾರಿನೊಳಗೆ ಹೋಗಿ ಲಾಕ್‌ ಮಾಡಿಕೊಂಡಿರುವ ಸಾಧ್ಯತೆ ಇದೆ. ಬಾಗಿಲು ತೆಗೆಯಲು ಸಾಧ್ಯವಾಗದೇ ಒಳಗೆ ಉಳಿದುಕೊಂಡಿರಬೇಕು. ಕಾರಿನ ಎಲ್ಲ ಬಾಗಿಲುಗಳು ಮುಚ್ಚಿದ್ದರಿಂದ ಮಕ್ಕಳಿಗೆ ಜೀವವಾಯು ಕೊರತೆ ಉಂಟಾಗಿದೆ. ತುಂಬಾ ಹೊತ್ತು ಕಾರಿನಲ್ಲಿದ್ದ ಮಕ್ಕಳನ್ನು ರಕ್ಷಿಸದೇ ಹೋಗಿದ್ದರೆ, ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇತ್ತು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು