ಬುಧವಾರ, ಮಾರ್ಚ್ 3, 2021
18 °C
ಅಕ್ಕಿ ಗಿರಣಿಯಲ್ಲಿ ಕೆಲಸ ಮಾಡುವಾಗ ಸೊಂಟದ ಸ್ವಾಧೀನ ಕಳೆದುಕೊಂಡ ಬಾಲಣ್ಣ

ಹಿರಿಯೂರು: ಕೃಷಿ ಕಾರ್ಯಕ್ಕೆ ತೊಡಕಾಗದ ಅಂಗವೈಕಲ್ಯ

ಸುವರ್ಣಾ ಬಸವರಾಜ್ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ಅಕ್ಕಿ ಗಿರಣಿಯಲ್ಲಿ ಭತ್ತದ ಮೂಟೆ ಹೊರುವಾಗ ಸಂಭವಿಸಿದ ಅವಘಡದಲ್ಲಿ ಸೊಂಟದ ಸ್ವಾಧೀನ ಕಳೆದುಕೊಂಡ ವ್ಯಕ್ತಿಯೊಬ್ಬರು ಛಲ ಬಿಡದೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ.

ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಸೂರಪ್ಪನಹಟ್ಟಿ ಗ್ರಾಮದ 40 ವರ್ಷದ ಬಾಲಣ್ಣ ಹತ್ತು ವರ್ಷದ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದ ಅಕ್ಕಿ ಗಿರಣಿಯಲ್ಲಿ ಕೆಲಸ ಮಾಡುವಾಗ ಭತ್ತದ ಮೂಟೆ ಮೈಮೇಲೆ ಬಿದ್ದಿತ್ತು. ಗಿರಣಿ ಮಾಲೀಕರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಸೊಂಟದ ಸ್ವಾಧೀನ ಮರಳಲಿಲ್ಲ. ಅಂಗವಿಕಲತೆಯೊಂದಿಗೆ ಮರಳಿದ ವ್ಯಕ್ತಿಯನ್ನು ಪೋಷಕರು, ತಮ್ಮಂದಿರು ದೂರವಿಟ್ಟರು.

ಇದರಿಂದ ಧೃತಿಗೆಡದ ಬಾಲಣ್ಣ ಅವಘಡ ಸಂಭವಿಸಿದ್ದಕ್ಕೆ ಬಂದ ಪರಿಹಾರದ ಹಣ ಬಳಸಿಕೊಂಡು ಪಿತ್ರಾರ್ಜಿತವಾಗಿ ಬಂದಿದ್ದ ಎರಡು ಎಕರೆ ಭೂಮಿಯನ್ನು ಅಚ್ಚುಕಟ್ಟು ಮಾಡಿ, ಕೊಳವೆಬಾವಿ ಕೊರೆಯಿಸಿ ಕೃಷಿ ನಡೆಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಹಟ್ಟಿಯಲ್ಲಿರುವ ಗುಡಿಸಲಿನಿಂದ ನಿತ್ಯ ಟ್ರೈಸಿಕಲ್‌ನಲ್ಲಿ (ಅಂಗವಿಕಲ ಫಲಾನುಭವಿಯೊಬ್ಬರಿಗೆ ಬಂದಿದ್ದ ಟ್ರೈಸಿಕಲ್ ಅನ್ನು ಎರಡು ಸಾವಿರ ರೂಪಾಯಿ ಕೊಟ್ಟು ಖರೀದಿಸಿದ್ದಾರೆ) ಹೊಲಕ್ಕೆ ಬರುವ ಬಾಲಣ್ಣ ಜಮೀನಿನ ಎಲ್ಲ ಕೆಲಸಗಳನ್ನು ತೆವಳುತ್ತಲೇ ಮಾಡುತ್ತಾರೆ. ಕೆಲವು ವ್ಯಾಪಾರಿಗಳು ಹೊಲಕ್ಕೇ ಬಂದು ತರಕಾರಿಗಳನ್ನು ಖರೀದಿಸುತ್ತಾರೆ.

‘ನನ್ನ ಬೆಂಬಲಕ್ಕೆ ನಿಂತು ಧೈರ್ಯ ತುಂಬಬೇಕಿದ್ದ ಒಡಹುಟ್ಟಿದವರು ದೂರವಾದರು. ಪತ್ನಿ ನನಗೆ ಹೆಗಲಾಗಿ ನಿಂತಳು. ಕೈಗಳು, ಬುದ್ಧಿ ಎಲ್ಲವೂ ಸರಿ ಇರುವಾಗ ಏಕೆ ಕೃಷಿ ಮಾಡಬಾರದು ಎಂದು ಆಲೋಚಿಸಿದೆ. ಆರಂಭದಲ್ಲಿ ರಾಗಿ ಬೆಳೆದೆ. ನಂತರ ತರಕಾರಿ ಬೆಳೆಯತೊಡಗಿದೆ. ಪ್ರಸ್ತುತ 2 ಎಕರೆಯಲ್ಲಿ ಸೌತೆ ಬಳ್ಳಿ ಹಾಕಿದ್ದೇನೆ. ಬಳ್ಳಿಗೆ ನೀರು ಬಿಡುವುದು, ಕಳೆ ತೆಗೆಯುವುದು, ಕಾಯಿ ಕೀಳುವುದು ಈಗೀಗ ಕಷ್ಟ ಎನಿಸುತ್ತಿಲ್ಲ. ವರ್ಷಕ್ಕೆ ಒಂದರಿಂದ ಒಂದೂವರೆ ಲಕ್ಷ ರೂಪಾಯಿ ಆದಾಯ ಸಿಗುತ್ತಿದೆ. ಬಡತನ ಎಲ್ಲವನ್ನು ಕಲಿಸುತ್ತದೆ ಎಂಬುದಕ್ಕೆ ನಾನೇ ಉತ್ತಮ ನಿದರ್ಶನ’ ಎನ್ನುತ್ತಾರೆ ಬಾಲಣ್ಣ.

ಅಂಗವಿಕಲರಿಗೆ ಬರುವ ಪಿಂಚಣಿ ಹೊರತುಪಡಿಸಿದರೆ ಅವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ದೊರೆತಿಲ್ಲ. ಪ್ರಸ್ತುತ ಇರುವ ಗುಡಿಸಲಿನ ಜಾಗದಲ್ಲಿ ಚಿಕ್ಕದೊಂದು ಮನೆ, ತ್ರಿಚಕ್ರ ವಾಹನ ಹಾಗೂ ಮಗನಿಗೆ ಉಚಿತ ಶಿಕ್ಷಣ ದೊರೆತರೆ ಸಾಕು ಎಂಬುದು ಬಾಲಣ್ಣ ಅವರ ಕನಸು. ಅವರು ಬಳಸುತ್ತಿರುವ ಟ್ರೈಸಿಕಲ್ ಹಳೆಯದಾದ ಕಾರಣ ಪದೇ ಪದೇ ರಿಪೇರಿಗೆ ಬರುತ್ತಿದ್ದು, ಜವನಗೊಂಡನಹಳ್ಳಿಗೆ ಒಯ್ದು ದುರಸ್ತಿ ಮಾಡಿಸುವುದು ತುಂಬ ಕಷ್ಟ ಎಂಬುದು ಬಾಲಣ್ಣನ ನೋವು.

‘ಅಂಗ ವೈಕಲ್ಯದಿಂದ ಮನೆಗೆ ಮರಳಿದಾಗ ಯಾರಾದರೂ ನೆರವಿಗೆ ಬಂದಿದ್ದರೆ ನಾನು ಬದುಕಿರುವವರೆಗೆ ಪರಾವಲಂಬಿ ಆಗುತ್ತಿದ್ದೆ. ಆದರೆ, ಈಗ ಯಾರ ಹಂಗಿನಲ್ಲೂ ನಾನಿಲ್ಲ ಎಂಬ ತೃಪ್ತಿ ಇದೆ’ ಎಂಬ ವಿಶ್ವಾಸದ ಮಾತು ಅವರದ್ದು.

ಬಾಲಣ್ಣ ಅವರ ಸಂಪರ್ಕ ಸಂಖ್ಯೆ: 96632–216990.

ಕೈಹಿಡಿದ ಭೂಮಿ ತಾಯಿ

‘ಒಮ್ಮೊಮ್ಮೆ ಜನ್ಮ ಕೊಟ್ಟವರು ಕೂಡ ನಮ್ಮನ್ನು ದೂರ ಮಾಡಬಹುದು. ಆದರೆ, ಭೂಮಿ ತಾಯಿ ಮಾತ್ರ ಕೈ ಬಿಡುವುದಿಲ್ಲ. ನನ್ನ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದೇನೆ. ಸಿರಿವಂತಿಕೆ ತರುವಷ್ಟು ಆದಾಯ ಬರದಿದ್ದರೂ ಬದುಕು ನಡೆಸುವುದಕ್ಕೆ ತೊಂದರೆ ಇಲ್ಲ. ಕೃಷಿ ಕೆಲಸದಲ್ಲಿ ಆತ್ಮತೃಪ್ತಿ ಇದೆ. ತೋಟದ ಬೆಳೆ ಹಾಕಿದರೆ ಸ್ವಲ್ಪ ಶ್ರಮ ಕಡಿಮೆ ಆಗುತ್ತದೆ ಎಂಬ ಯೋಚನೆ ಇದೆ. ಆದರೆ, ಅದಕ್ಕೆ ಹೆಚ್ಚಿನ ಬಂಡವಾಳ ಬೇಕು. ಹೀಗಾಗಿ ತರಕಾರಿ, ಸಿರಿಧಾನ್ಯ ಬೆಳೆಯುತ್ತಿರುವೆ’ ಎನ್ನುವರು ಬಾಲಣ್ಣ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು