ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ಬೆಣ್ಣೆ ಹಣ್ಣು ಬೆಳೆದ ರೈತನ ಹೊಸ ಪ್ರಯೋಗ

ಮಲ್ಲಪ್ಪನಹಳ್ಳಿಯ ರಾಮಲಿಂಗಪ್ಪನವರ ನಿರೀಕ್ಷೆ
Last Updated 10 ಆಗಸ್ಟ್ 2022, 4:00 IST
ಅಕ್ಷರ ಗಾತ್ರ

ಹೊಸದುರ್ಗ: ಸಿರಿಧಾನ್ಯ ಹಾಗೂ ತೆಂಗು ಬೆಳೆಗೆ ಹೆಸರಾಗಿರುವ ಹೊಸದುರ್ಗ ತಾಲ್ಳೂಕಿನ ರೈತರೊಬ್ಬರು ತಮ್ಮ 2 ಎಕರೆ ಭೂಮಿಯಲ್ಲಿ ಬೆಣ್ಣೆಹಣ್ಣು ಬೆಳೆದು ಅಪಾರ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

ಈ ರೀತಿ ವಿನೂತನ ಪ್ರಯೋಗಕ್ಕೆ ಕೈ ಹಾಕಿರುವುದು ತಾಲ್ಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದ ಎಚ್.ಟಿ. ರಾಮಲಿಂಗಪ್ಪ.

‘ಬೆಣ್ಣೆಹಣ್ಣು ಬೆಳೆಯುವ ಬಗ್ಗೆ ಸ್ನೇಹಿತರೊಬ್ಬರ ಸಲಹೆ ಪಡೆದು, ಕೊಡಗು ಜಿಲ್ಲೆಯ ಕೃಷಿ ಸಂಶೋಧನಾ ಕೇಂದ್ರದಿಂದ ₹ 80ರಿಂದ
₹ 120ಕ್ಕೆ ಒಂದರಂತೆ ಸಸಿ ಖರೀದಿಸಲಾಯಿತು.

‘ಸಸಿ ನಾಟಿ ಮಾಡುವ ಮೊದಲು 2 ಅಡಿ ಆಳ, 2 ಅಡಿ ಉದ್ದ ಹಾಗೂ 2 ಅಡಿ ಅಗಲದ ಗುಂಡಿ ತೋಡಿ, ಅದಕ್ಕೆ 20 ಕೆ.ಜಿ ಕೊಟ್ಟಿಗೆ ಗೊಬ್ಬರ ಹಾಕಿ, ಟ್ರೈಕೋಡರ್ಮಾ ಮತ್ತು ಸುಡೋಮೊನಾಸ್‌ ಹಾಗೂ ವ್ಯಾಮ್‌ ಜೀವಾಣುಗಳನ್ನು ಹಾಕಿ, ಗುಂಡಿ ಮುಚ್ಚಿ, ಡ್ರಿಪ್‌ ಮಾಡಬೇಕು. 10-15 ದಿನಗಳ ನಂತರ ನಾಟಿ ಮಾಡಲು ಮುಂದಾಗಬೇಕು. 2019ರಲ್ಲಿ 580 ಸಸಿ ನಾಟಿ ಮಾಡಿದ್ದೆವು. ನಿತ್ಯ ಕಳೆ ತೆಗೆಯುತ್ತಿರಬೇಕು. ಮೊದಲೆರಡು ವರ್ಷ ಇದಕ್ಕೆ ಔಷಧದ ಅಗತ್ಯವಿಲ್ಲ. ನಿತ್ಯ ನೀರು, ವರ್ಷಕ್ಕೊಮ್ಮೆ ಕೊಟ್ಟಿಗೆ ಗೊಬ್ಬರ ಹಾಕಿದರೆ ಸಾಕು. ಫಸಲು ಹುಲುಸಾಗಿ ಬೆಳೆಯುತ್ತದೆ. ಈವರೆಗೆ ಚೆನ್ನಾಗಿ ಆರೈಕೆ ಮಾಡಲಾಗಿದೆ. ಪ್ರಸ್ತುತ ಮೊದಲ ಕೊಯ್ಲು ಇದಾಗಿದ್ದು, ಉತ್ತಮ ಆದಾಯ ದೊರೆಯುವ ನಿರೀಕ್ಷೆಯಿದೆ. ವರ್ಷ ಕಳೆದಂತೆ ಹೆಚ್ಚು ಇಳುವರಿ ಸಹ ಪಡೆಯಬಹುದು. ಕಾಯಿ ಬಲಿತ ಮೇಲೆ ಕೊಯ್ಲು ಆರಂಭವಾಗುತ್ತದೆ. ಈ ಬಾರಿ ₹ 10 ಲಕ್ಷ ಆದಾಯ ಗಳಿಸುವ ನಿರೀಕ್ಷೆಯಿದೆ’ ಎಂದು ರಾಮಲಿಂಗಪ್ಪ ತಿಳಿಸಿದರು.

‘ಯಾವುದಾದರೂ ಉತ್ತಮ ಆದಾಯ ತರುವ, ವಿನೂತನ ಬೆಳೆ ಬೆಳೆಯುವ ಆಸಕ್ತಿ ಮೊದಲಿನಿಂದಲೂ ಇತ್ತು. ಕೃಷಿ ಪದವೀಧರ ಯೋಗೇಶ್‌ ಅವರ ಸಲಹೆ ಮೇರೆಗೆ ಬೆಣ್ಣೆಹಣ್ಣು ಹಾಕಿದ್ದೇನೆ. ಉತ್ಕೃಷ್ಟ ಫಲ ಬರುತ್ತಿದೆ. ಯಾವುದೇ ರೋಗ ರುಜಿನಗಳು ಬಾರದಿದ್ದರೆ 50 ವರ್ಷಗಳವರೆಗೆ ಉತ್ತಮ ಆದಾಯ ಪಡೆಯುಬಹುದು’ ಎಂದು ಅವರು ಹೇಳಿದರು.

‘ಗಿಡ 1 ಅಡಿಯಿಂದ 1.5 ಅಡಿ ಎತ್ತರ ಬೆಳೆದ ಮೇಲೆ, ಮುಂಗಾರಿನ ಸಮಯದಲ್ಲಿ ನಾಟಿ ಮಾಡಬೇಕು. ನಾಲ್ಕೈದು ವರ್ಷಗಳಲ್ಲಿ ಗಿಡ ದೊಡ್ಡದಾಗಿ ಐದಾರು ವರ್ಷಗಳಲ್ಲಿ ಉತ್ತಮ ಫಲ ನೀಡಲು ಆರಂಭಿಸುತ್ತದೆ. ಒಂದು ದೊಡ್ಡ ಗಿಡ 100-120 ಹಣ್ಣು ಬಿಡಬಹುದು. ಕಾಯಿಗಳು ಎಷ್ಟೇ ಬಲಿತರೂ, ಗಿಡದಲ್ಲಿ ಹಣ್ಣಾಗುವುದಿಲ್ಲ. ಬೇಕೆಂದಾಗ, ಬೇಕಾದಷ್ಟು ಕಾಯಿಗಳನ್ನು ಮಾತ್ರ ಕಿತ್ತು ಮಾರಾಟ ಮಾಡಬಹುದು. ಕಾಯಿ ಕಿತ್ತ ಮೇಲೂ ಹಣ್ಣಾಗಲು 2 ದಿನಗಳು ಬೇಕಾಗುತ್ತವೆ. ಬೆಣ್ಣೆಹಣ್ಣಿನ ಗಿಡವನ್ನು ಎಲ್ಲ ತರಹದ ವಾತಾವರಣದಲ್ಲಿ ಬೆಳೆಯಬಹುದು. ಹೆಚ್ಚಿನ ಗೊಬ್ಬರ ಬೇಡದೆ ಇರುವ ಬೆಳೆ ಇದಾಗಿದೆ. ಅಲ್ಲದೇ ವರ್ಷದಲ್ಲಿ ಎರಡು ಬಾರಿ ಫಲ ನೀಡುವ ಮತ್ತು ಯಾವುದೇ ರೋಗವಿಲ್ಲದೇ ಬೆಳೆಯುವಂತಹ ಆಕರ್ಷಕ ಗಿಡವಿದು. ಹಿಂದೆ ಸಸಿಗಳನ್ನು ಬೇರೆ ಕಡೆಯಿಂದ ತರಿಸಲಾಗುತ್ತಿತ್ತು. ಆದರೀಗ 4-5 ಸಸಿಗಳನ್ನು ನಾವೇ ನಾಟಿ ಮಾಡಿದ್ದೇವೆ. ಬೆಣ್ಣೆಹಣ್ಣು ಆರೋಗ್ಯಕ್ಕೆ ಸಹಕಾರಿ ಆಗಿರುವುದರಿಂದ ಇದಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಈ ಬೆಳೆ ಬೆಳೆಯಲು ಆರಂಭಿಸಿದ್ದೇವೆ. ಗ್ರಾಮದ ಇತರ ರೈತರಿಗೂ ಇದರ ಬಗ್ಗೆ ಮಾಹಿತಿ ನೀಡಲು ಸಿದ್ಧ’ ಎನ್ನುತ್ತಾರೆ ಮತ್ತೊಬ್ಬ ಬೆಣ್ಣೆಹಣ್ಣು ಬೆಳೆಗಾರ ಚಿಕ್ಕಯಗಟಿ ಮಂಜ.

ನೀರು ಇಂಗುವ ಸಾಮರ್ಥ್ಯವಿರುವ ಮಣ್ಣಿನಲ್ಲಿ ಮಾತ್ರ ಬೆಳೆಯಬಹುದು
ಈ ಹಣ್ಣನ್ನು ಮಣ್ಣಿನ ರಸಸಾರ (ಪಿಎಚ್‌ ಮೌಲ್ಯ) 5-7 ಮೌಲ್ಯವಿರುವ ಮಣ್ಣಿನಲ್ಲಿ ಮಾತ್ರ ಬೆಳೆಯಬೇಕು. ನೀರನ್ನು ಇಂಗಿಸಿಕೊಳ್ಳುವ ಸಾಮರ್ಥ್ಯವಿರುವ ಮಣ್ಣಿನಲ್ಲಿ ಮಾತ್ರ ಬೆಳೆಯಬೇಕು. ಇದೊಂದು ವಾಣಿಜ್ಯ ಬೆಳೆಯಾಗಿದ್ದು, ರೈತರು ಉತ್ತಮ ಆದಾಯ ಪಡೆಯಬಹುದು. ಬೆಣ್ಣೆಹಣ್ಣು ಬೆಳೆಯುವ ಬಗ್ಗೆ ತಾಲ್ಲೂಕಿನ 3 ರೈತರಿಗೆ ಮಾಹಿತಿ ನೀಡಿದೇನೆ. ಅವರು ಕೂಡ ಫಸಲಿಗೆ ಬಿಟ್ಟಿದ್ದಾರೆ.

–ಯೋಗೇಶ್ವರ ಎಚ್.ಆರ್‌.,ದಕ್ಷಿಣ ಭಾಗದ ದಾಳಿಂಬೆ ಬೆಳೆಗಾರರ ರೈತ ಸಂಸ್ಥೆಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT