ಶುಕ್ರವಾರ, ಸೆಪ್ಟೆಂಬರ್ 24, 2021
21 °C
ಅನೈತಿಕ ಚಟುವಟಿಕೆ ತಾಣವಾಗಿರುವ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಾಗ

ವಾರಸುದಾರರಿಲ್ಲದ ವರ್ತಕರ ಸಂಘದ ಕಟ್ಟಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ನಗರದ ಹೃದಯ ಭಾಗದಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವರ್ತಕರ ಸಂಘದ (ಮರ್ಚಂಟ್ಸ್ ಅಸೋಸಿಯೇಷನ್) ಕಟ್ಟಡ 15–20 ವರ್ಷಗಳಿಂದ ವಾರಸುದಾರರಿಲ್ಲದ ಕಾರಣ ಅನೈತಿಕ ಚಟುವಟಿಕೆಯ ತಾಣವಾಗಿದೆ.

1960ರ ಫೆಬ್ರುವರಿ 15ರಂದು ಮುನ್ಸಿಪಲ್ (ಪುರಸಭೆ) ಅಧ್ಯಕ್ಷರಾಗಿದ್ದ ಎಚ್.ಟಿ. ರಂಗಸ್ವಾಮಿಯವರು ವರ್ತಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಪುರಸಭೆಯ ಜಾಗವನ್ನು ಮಂಜೂರು ಮಾಡಿ ಶಂಕುಸ್ಥಾಪನೆ ನೆರವೇರಿಸಿದ್ದರು. ದೇಣಿಗೆ ಸಂಗ್ರಹಿಸಿ ಕಟ್ಟಡ ನಿರ್ಮಿಸಲು ಅಂದಿನ ಪದಾಧಿಕಾರಿಗಳು 13 ವರ್ಷ ತೆಗೆದುಕೊಂಡರು. 1973 ಡಿಸೆಂಬರ್ 12ರಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಕೆ.ಎಚ್. ರಂಗನಾಥ್ ಕಟ್ಟಡವನ್ನು ಉದ್ಘಾಟಿಸಿದ್ದರು.

ಆರಂಭದಲ್ಲಿ ವರ್ತಕರ ಸಂಘ ದಲ್ಲಾಲರ ಸಂಘದ ಹಿಡಿತದಲ್ಲಿತ್ತು. ಅಚ್ಚುಕಟ್ಟಾಗಿ ನಡೆಯುತ್ತಲೂ ಇತ್ತು. ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಸಮಾಪನಗೊಂಡಿದ್ದು, ವಾಣಿವಿಲಾಸ ಜಲಾಶಯದಲ್ಲಿ ನೀರು ಕಡಿಮೆಯಾಗಿದ್ದರಿಂದ ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಹತ್ತಾರು ಎಣ್ಣೆ ಮತ್ತು ಅಕ್ಕಿ ಮಿಲ್‌ಗಳು ಬಂದ್ ಆದವು. ಹಲವು ಮಿಲ್ ಗಳನ್ನು ವಸತಿ ಬಡಾವಣೆಗಳನ್ನಾಗಿ ಪರಿವರ್ತಿಸಲಾಯಿತು. ಹೀಗಾಗಿ ಸಂಘದ ಚಟುವಟಿಕೆಗಳಿಗೆ ಬರುವ ವರ್ತಕರ ಸಂಖ್ಯೆ ಕ್ಷೀಣಿಸತೊಡಗಿತು.

20 ವರ್ಷಗಳ ಹಿಂದೆ ಸಂಘದ ಅಧ್ಯಕ್ಷರಾಗಿದ್ದ ಬಿ. ದಲೀಚಂದ್ ಎಂಬುವವರು ಪ್ರಸ್ತುತ ಅಹಮದಾಬಾದ್‌ನಲ್ಲಿ ಸಿದ್ಧ ಉಡುಪು ಉದ್ಯಮದಲ್ಲಿ ತೊಡಗಿದ್ದು, ಅಪರೂಪಕ್ಕೆ ಎಂಬಂತೆ ಹಿರಿಯೂರಿಗೆ ಬರುತ್ತಾರೆ. ಅಂದಿನ ಆಡಳಿತ ಮಂಡಳಿಯಲ್ಲಿದ್ದ ಒಂಬತ್ತು ನಿರ್ದೇಶಕರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಸಂಘಕ್ಕೆ ವರಮಾನ ಇಲ್ಲದ ಕಾರಣದಿಂದ ವಿದ್ಯುತ್ ಬಿಲ್ ಪಾವತಿಸಲೂ ಕಷ್ಟವಾಗಿ, ಬಾಗಿಲಿಗೆ ಬೀಗ ಹಾಕಲಾಗಿದೆ. ಕಾಂಪೌಂಡ್ ಶಿಥಿಲವಾಗಿದೆ. ಮುಖ್ಯದ್ವಾರದ ಗೇಟ್ ತುಕ್ಕು ಹಿಡಿದಿದೆ. ಹಗಲುವೇಳೆ ಶ್ರೀಶೈಲ ವೃತ್ತದಲ್ಲಿ ವಹಿವಾಟು ನಡೆಸುವವರಿಗೆ ಮೂತ್ರ ವಿಸರ್ಜನೆಯ ತಾಣವಾಗಿದ್ದರೆ, ಕತ್ತಲಾಗುತ್ತಿದ್ದಂತೆ ಬೇರೆ ವ್ಯವಹಾರಗಳು ನಡೆಯುವುದು ಗುಟ್ಟಾಗಿ ಉಳಿದಿಲ್ಲ.

‘ಆರೇಳು ವರ್ಷಗಳ ಹಿಂದೆ ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಬಿ. ಜಯಣ್ಣ, ದಲ್ಲಾಲರು, ಕಿರಾಣಿ ವರ್ತಕರು, ಎಣ್ಣೆ ಮತ್ತು ಎಣ್ಣೆ ಬೀಜ ವರ್ತಕರು, ಜವಳಿ, ಹಾರ್ಡ್ ವೇರ್, ಚಿನ್ನಾಭರಣ, ಚಪ್ಪಲಿ, ಬೇಕರಿ, ಹೋಟೆಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವ್ಯಾಪಾರಿಗಳ ಸಂಘದ ಸದಸ್ಯರ ಸಭೆ ಕರೆದು ಪಾಳು ಬಿದ್ದಿರುವ ಕಟ್ಟಡದ ಪುನರ್ ನಿರ್ಮಾಣಕ್ಕೆ ಪ್ರಯತ್ನ ನಡೆಸಿದ್ದರು. ಕೆಲವರು ಎಲ್ಲ ವರ್ತಕರನ್ನು ಸಂಘದ ವ್ಯಾಪ್ತಿಗೆ ತರುವುದಕ್ಕೆ ವಿರೋಧಿಸಿದ್ದರು. ಆದರೆ ಪುರಸಭೆಯಿಂದ ನಿವೇಶನ ಮಂಜೂರಾಗಿರುವುದು ವರ್ತಕರ ಸಂಘಕ್ಕೆ. ಹೀಗಿರುವಾಗ ವರ್ತಕರಲ್ಲಿ ತಾರತಮ್ಯ ಮಾಡುವುದಕ್ಕೆ ಜಯಣ್ಣ ಮತ್ತಿತರರು ವಿರೋಧ ವ್ಯಕ್ತ ಪಡಿಸಿದ್ದರಿಂದ ಕಟ್ಟಡದ ಮರುನಿರ್ಮಾಣದ ವಿಚಾರಕ್ಕೆ ತೆರೆ ಬಿದ್ದಿತ್ತು.

ಡಿ. ಸುಧಾಕರ್ ಶಾಸಕರಾಗಿದ್ದಾಗ ವರ್ತಕರ ಸಂಘದ ಕಟ್ಟಡ ನಿರ್ಮಾಣಕ್ಕೆ ₹ 5 ಲಕ್ಷ ಅನುದಾನದ ಭರವಸೆ ನೀಡಿದ್ದರು. ಹಾಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೂಡ, ‘ಕಟ್ಟಡ ನೋಡಿದರೆ ಬೇಸರ ಎನಿಸುತ್ತದೆ. ವರ್ತಕರೆಲ್ಲ ಸಂಘಟಿತರಾಗಿ ಪುನರ್ ನಿರ್ಮಾಣ ಮಾಡಿದಲ್ಲಿ ಕೈಲಾದಷ್ಟು ಆರ್ಥಿಕ ನೆರವು ನೀಡುವೆ’ ಎಂದು ಭರವಸೆ ನೀಡಿದ್ದಾರೆ. ಒಂದು ರಾಜಕೀಯ ಪಕ್ಷಕ್ಕೆ ಸೇರಿದವರಿಂದ ನೆರವು ಪಡೆಯುವುದಕ್ಕೆ ವರ್ತಕರಲ್ಲೇ ಭಿನ್ನ ಅಭಿಪ್ರಾಯಗಳಿವೆ. ಸುಮಾರು ನೂರು ವರ್ತಕರು ತಲಾ ಹತ್ತು ಸಾವಿರ ದೇಣಿಗೆ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ಕಟ್ಟಡವನ್ನು ನಮಗೆ ಹಸ್ತಾಂತರಿಸಿದಲ್ಲಿ ಮುಂದಿನ ಆಗು–ಹೋಗುಗಳ ಬಗ್ಗೆ ಸಭೆ ಕರೆದು ಚರ್ಚಿಸುತ್ತೇವೆ’ ಎನ್ನುತ್ತಾರೆ ಬಿ. ಜಯಣ್ಣ.

ದೊಡ್ಡ ಅವಮಾನ
‘ವರ್ತಕರ ಸಂಘದ ಕಟ್ಟಡ ಇರುವ ಜಾಗವನ್ನು ಪ್ರತಿ ಅಡಿಗೆ ₹ 5,000 ಕೊಟ್ಟರೂ ಅಂತಹ ಮತ್ತೊಂದು ಜಾಗ ಸಿಗುವುದಿಲ್ಲ. ಸಭೆ ನಡೆಸಲು ಸೂಕ್ತವಾದ ಸ್ಥಳ ಇದಾಗಿದೆ. ಸ್ವತಃ ವರ್ತಕರಾಗಿದ್ದ ಎಚ್.ಟಿ. ರಂಗಸ್ವಾಮಿ ತಮ್ಮ ಅಧಿಕಾರ ಬಳಸಿ ವಿಶಾಲವಾದ ಜಾಗವನ್ನು ಮಂಜೂರು ಮಾಡಿದ್ದರು. ಅದನ್ನು ಸರಿಯಾಗಿ ನಿರ್ವಹಣೆ ಮಾಡುವ ಮೂಲಕ ಉಳಿಸಿಕೊಳ್ಳಲು ಆಗದಿರುವುದು ಇಡೀ ವರ್ತಕ ಸಮೂಹಕ್ಕೆ ಅವಮಾನದ ಸಂಗತಿ. ನಗರದಲ್ಲಿ ವಿವಿಧ ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿರುವ ಆರೇಳು ಸಂಘಗಳಿದ್ದು, ಎಲ್ಲರೂ ಕೈಜೋಡಿಸಿದರೆ ಹೊಸ ಕಟ್ಟಡ ನಿರ್ಮಾಣ ಅಸಾಧ್ಯವಲ್ಲ’ ಎನ್ನುತ್ತಾರೆ ಹಿರಿಯ ಸಗಟು ಉದ್ಯಮಿ ಕೆ.ಟಿ. ಪ್ರಕಾಶ್.

ಶೀಘ್ರದಲ್ಲಿಯೇ ಸಭೆ
‘70–80ರ ದಶಕದಲ್ಲಿ ಹಿರಿಯೂರಿನ ವರ್ತಕರ ಪ್ರತಿಷ್ಠೆಯ ಪ್ರತೀಕವಾಗಿದ್ದ ಕಟ್ಟಡ ಹಾಳು ಬಿದ್ದಿರುವುದು, ಆವರಣದ ತುಂಬ ಕಸದ ರಾಶಿ ಬಿದ್ದಿರುವುದು, ಮುಳ್ಳು–ಗಿಡಗಂಟಿ ಬೆಳೆದಿರುವುದನ್ನು ನೋಡಿದರೆ ಬೇಸರವಾಗುತ್ತದೆ. ಆದಷ್ಟು ಬೇಗ ವರ್ತಕರ ಸಭೆ ಕರೆದು ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇವೆ’ ಎನ್ನುತ್ತಾರೆ 15 ವರ್ಷಗಳ ಹಿಂದೆ ಸಂಘದ ಕಾರ್ಯದರ್ಶಿಯಾಗಿದ್ದ ಎಚ್.ಎಸ್. ಸುಂದರರಾಜ್.

ಬೇರೆಯವರಿಗೆ ವಹಿಸಲಿ
‘ಸಂಘದ ಕಟ್ಟಡವನ್ನು ನಿರ್ವಹಿಸಲು ಆಗದಿದ್ದರೆ ನಿವೇಶನವನ್ನು ನಗರಸಭೆಗೆ ಮರಳಿ ಹಸ್ತಾಂತರಿಸಲಿ. ಸದುದ್ದೇಶದಿಂದ ನೀಡಿರುವ ನಿವೇಶನ ವ್ಯರ್ಥವಾಗುವುದು ಬೇಡ. ಆ ಜಾಗದಲ್ಲಿ ಜನೋಪಯೋಗಿ ಚಟುವಟಿಕೆ ನಡೆಸುವ ತೀರ್ಮಾನವನ್ನು ನಗರಸಭೆ ಕೌನ್ಸಿಲ್ ತೆಗೆದುಕೊಳ್ಳಲಿ’ ಎಂದು ವಂದೇಮಾತರಂ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಎಲ್. ಗಿರಿಧರ್ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.