ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಡೆ ಹರಡಿದ ಜವಾರಿ ಅವರೆ ಘಮ

ಹೊರಕೆರೆ ದೇವರಪುರ ಭಾಗದಿಂದ ಬೆಂಗಳೂರಿಗೆ ನಿತ್ಯ 250 ಕ್ವಿಂಟಲ್ ಅವರೆಕಾಯಿ ರವಾನೆ
Last Updated 22 ಡಿಸೆಂಬರ್ 2020, 4:35 IST
ಅಕ್ಷರ ಗಾತ್ರ

ಹೊಳಲ್ಕೆರೆ: ಈಗ ಅವರೆಕಾಯಿ ಸುಗ್ಗಿ ಆರಂಭವಾಗಿದ್ದು, ತಾಲ್ಲೂಕಿನಾದ್ಯಂತ ಅವರೆ ಸೊಗಡಿನ ಘಮ ಹರಡಿದೆ.

ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಅವರೆಕಾಯಿ ಅಡುಗೆಯಲ್ಲಿ ಪ್ರಮುಖ ಸ್ಥಾನ ಪಡೆಯುತ್ತದೆ. ಪ್ರತಿ ವರ್ಷ ಅಡುಗೆ ಮನೆಗೆ ಚಳಿಗಾಲದ ಮುಖ್ಯ ಅತಿಥಿಯಾಗಿ ಬರುವ ಅವರೆಯ ಹಿತಕವರೆ ಸಾರು, ಅವರೆ ಕಾಳು ಉಪ್ಪಿಟ್ಟು, ಅವರೆ ಕಾಳು ಮಸಾಲ, ಅವರೆ ಕಾಳು ಬಸ್ಸಾರು ಮತ್ತಿತರ ಪದಾರ್ಥಗಳು ಬಾಯಲ್ಲಿ ನೀರೂರಿಸುತ್ತವೆ. ಹೆಚ್ಚು ರುಚಿ ಕೊಡುವ ನಾಟಿ ಅವರೆಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.

ಹೊರಕೆರೆ ದೇವರಪುರದಿಂದ ನಿತ್ಯ 250ರಿಂದ 300 ಚೀಲ ಹಸಿ ಅವರೆಕಾಯಿ ಬೆಂಗಳೂರಿನ ಮಾರುಕಟ್ಟೆಗೆ ರವಾನೆ ಆಗುತ್ತಿದೆ. ಇನ್ನು ಬಿ.ದುರ್ಗ, ಕಸಬಾ ಹೋಬಳಿಯಲ್ಲೂ ಅವರೆ ಕಟಾವಿಗೆ ಬಂದಿದ್ದು, ಭರ್ಜರಿ ಮಾರಾಟ ಆಗುತ್ತಿದೆ. ಸಂಜೆಯಾಗುತ್ತಿದ್ದಂತೆ ಪಟ್ಟಣದ ಮುಖ್ಯವೃತ್ತ ಅವರೆಕಾಯಿ ರಾಶಿಯಿಂದ ತುಂಬುತ್ತದೆ.

ಎಚ್.ಡಿ.ಪುರ, ಬಿ.ದುರ್ಗ, ದುಮ್ಮಿ ಭಾಗದಲ್ಲಿ ಹೆಚ್ಚು ಅವರೆ ಬೆಳೆಯಲಾಗುತ್ತದೆ. ಈ ಪ್ರದೇಶದ ಮಣ್ಣು ಹಾಗೂ ಹವಾಮಾನ ಅವರೆ ಬೆಳೆಗೆ ಸೂಕ್ತವಾಗಿದ್ದು, ಬೆದ್ದಲು ಹೊಲದಲ್ಲಿ ತನಿ ಅವರೆ ಹಾಗೂ ಅಡಿಕೆ ತೋಟಗಳಲ್ಲಿ ಮಿಶ್ರಬೆಳೆಯಾಗಿ ಅವರೆ ಬೆಳೆಯಲಾಗುತ್ತದೆ. ನಂದನ ಹೊಸೂರು, ಕಸವನ ಹಳ್ಳಿ, ಗೊಲ್ಲರ ಹಟ್ಟಿ, ಸಂಗೇನ ಹಳ್ಳಿ, ಹೊಸಹಟ್ಟಿ, ನಗರಘಟ್ಟ, ಬಿ.ಜಿ.ಹಳ್ಳಿ, ಬ್ರಹ್ಮಪುರ, ಟಿ.ನುಲೇನೂರು, ತೊಡರನಾಳು, ತಾಳ್ಯ, ಮದ್ದೇರು ಮತ್ತಿತರ ಗ್ರಾಮಗಳಲ್ಲಿನ ರೈತರು ಹೆಚ್ಚು ಅವರೆ ಬೆಳೆಯುತ್ತಾರೆ.

‘ಪ್ರತಿ ವರ್ಷ ನವೆಂಬರ್ ತಿಂಗಳಿಗೆ ಅವರೆ ಬರುತ್ತಿತ್ತು. ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಸೋನೆ ಮಳೆ ಬಂದಿದ್ದರಿಂದ ಅವರೆ ಹೂಗಳು ಉದುರಿದ್ದವು. ಇದರಿಂದ ಈ ವರ್ಷ ಡಿಸೆಂಬರ್‌ಗೆ ಬೆಳೆ ಆರಂಭವಾಗಿದೆ. ಆದರೂ ಈ ವರ್ಷ ಉತ್ತಮ ಬೆಳೆ ಇದೆ. ಈಗ ನಿತ್ಯ ಸುಮಾರು 100 ಚೀಲ ಅವರೆ ಬರುತ್ತಿದ್ದು, ಬೆಂಗಳೂರಿಗೆ ಕಳಿಸುತ್ತಿದ್ದೇವೆ. ರೈತರಿಂದ ಒಂದು ಕೆ.ಜಿ.ಗೆ ₹ 18ರಿಂದ ₹ 20ರಂತೆ ಖರೀದಿ ಮಾಡುತ್ತೇವೆ. ಬೆಂಗಳೂರಿನಲ್ಲಿ ಸದ್ಯ ₹ 25ರಿಂದ ₹ 26ಕ್ಕೆ ಮಾರಾಟ ಆಗುತ್ತಿದೆ. ನಮಗೆ ಒಂದು ಕೆ.ಜಿ ಅವರೆ ಕಳಿಸಲು ₹ 7ರಿಂದ ₹ 8 ಖರ್ಚು ಬರುತ್ತದೆ. ಖರ್ಚು ಕಳೆದು ಕೆ.ಜಿ.ಗೆ ₹ 1 ಉಳಿಯಬಹುದು’ ಎನ್ನುತ್ತಾರೆ 20 ವರ್ಷಗಳಿಂದ ಹಸಿ ಅವರೆ ವ್ಯಾಪಾರ ಮಾಡುತ್ತಿರುವ ಎಚ್.ಡಿ. ಪುರದ ವ್ಯಾಪಾರಿ ಜಿ.ಸಿ. ಶರಣಪ್ಪ.

‘ಈಗ ವರ್ಷದ ಎಲ್ಲ ಕಾಲದಲ್ಲೂ ಹಸಿ ಅವರೆಕಾಯಿ ಸಿಗುತ್ತದೆ. ಕೆಲವು ರೈತರು ಹೈಬ್ರಿಡ್ ತಳಿಯ ‘ಹೆಬ್ಬಾಳ ಅವರೆ’ ಬೆಳೆಯುತ್ತಾರೆ. ಈ ಅವರೆ ಸೊಗಡುರಹಿತವಾಗಿದ್ದು, ಹೆಚ್ಚು ರುಚಿ ಇರುವುದಿಲ್ಲ. ಆದರೆ, ಚಳಿಗಾಲಕ್ಕೆ ಬರುವ ನಾಟಿ ಅವರೆ ಹೆಚ್ಚು ರುಚಿಕರವಾಗಿರುವುದರಿಂದ ಹೆಚ್ಚು ಬೇಡಿಕೆ ಇದೆ. ನಾವು ಸುತ್ತಲಿನ ರೈತರಿಂದ ಅವರೆ ಖರೀದಿಸುತ್ತೇವೆ. ಸಂಜೆ 3ರಿಂದ ವ್ಯಾಪಾರ ಆರಂಭವಾಗುತ್ತದೆ. ಅವರೆಕಾಯಿಯನ್ನು ಬೇಗ ಚೀಲಕ್ಕೆ ತುಂಬಿದರೆ ಬಿಸಿಯಾಗುತ್ತದೆ ಎಂದು ರಾತ್ರಿ 8ರ ನಂತರ ಚೀಲಕ್ಕೆ ತುಂಬುತ್ತೇವೆ. ಅವರೆಯನ್ನು 60 ಕೆ.ಜಿ.ಯ ಚೀಲಗಳಿಗೆ ತುಂಬಿ ಟೆಂಪೊಗಳಲ್ಲಿ ಕಳಿಸುತ್ತೇವೆ. ಬೆಂಗಳೂರಿನಲ್ಲಿ ₹ 30ಕ್ಕಿಂತ ಹೆಚ್ಚು ದರಕ್ಕೆ ಮಾರಾಟವಾದರೆ ಮಾತ್ರ ನಮಗೆ ಒಂದಿಷ್ಟು ಲಾಭ ಸಿಗುತ್ತದೆ’ ಎನ್ನುತ್ತಾರೆ ಇಲ್ಲಿನ ಅವರೆಕಾಯಿ ವ್ಯಾಪಾರಿಗಳಾದ ಎಂ.ಹಾಲೇಶ್ ಮತ್ತು ಆನಂದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT