ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಸೋಮಶೇಖರ್ ಬೆಂಬಲಿಗರಿಂದ ಬಾಡೂಟ

ಕಾಂಗ್ರೆಸ್‌ನಲ್ಲಿ ಬಗೆಹರಿಯದ ಗೊಂದಲ
Last Updated 27 ಮಾರ್ಚ್ 2023, 5:56 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ಭಾನುವಾರ ಕಾಂಗ್ರೆಸ್ ಮುಖಂಡ ಬಿ. ಸೋಮಶೇಖರ್ ಬೆಂಬಲಿಗರು ಏರ್ಪಡಿಸಿದ್ದ ಬಾಡೂಟ ಕಾರ್ಯಕ್ರಮ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಮತ್ತೆ ತೋರಿಸಿತು.

ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿಯಾಗಿದ್ದ ಸೋಮಶೇಖರ್, ಡಿ.ಸುಧಾಕರ್‌ಗೆ ಪಕ್ಷ ಟಿಕೆಟ್ ನೀಡುವುದಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದರು.

ಭವಿಷ್ಯದಲ್ಲಿ ಕೈಗೊಳ್ಳಬೇಕಿರುವ ರಾಜಕೀಯ ನಿರ್ಧಾರ ಕುರಿತು ಚರ್ಚಿಸಲು ಬಾಡೂಟದ ಹೆಸರಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ 6 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು.

ಪಕ್ಷ ಟಿಕೆಟ್ ನೀಡದೆ ಅನ್ಯಾಯ ಮಾಡಿದೆ. ಪಕ್ಷೇತರರಾಗಿ ಸ್ಪರ್ಧಿಸುವ ಬದಲು ಜೆಡಿಎಸ್ ಪಕ್ಷದಿಂದ ಕಣಕ್ಕೆ ಇಳಿಯುವಂತೆ ಸೋಮಶೇಖರ್ ಬೆಂಬಲಿಗರು ಒತ್ತಾಯಿಸಿದರು.

‘ಸದ್ಯಕ್ಕೆ ಕಾಂಗ್ರೆಸ್ ಬಿಡುವ ಯೋಚನೆ ಇಲ್ಲ. ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿಯನ್ನಷ್ಟೇ ಬಿಡುಗಡೆ ಮಾಡಲಾಗಿದೆ. ಇನ್ನೂ ಯಾರಿಗೂ ‘ಬಿ’ಫಾರಂ ಕೊಟ್ಟಿಲ್ಲ. ಯಾವಾಗ ಬೇಕಾದರೂ ಬದಲಾವಣೆ ಆಗಬಹುದು. ಅವಸರ ಬೇಡ ಎಂದು ಸೋಮಶೇಖರ್ ಹೇಳಿದರು.

‘ಕೆಲ ಮುಖಂಡರು ಕಾಂಗ್ರೆಸ್ ಸಹವಾಸವೇ ಬೇಡ. ಜೆಡಿಎಸ್‌ನಿಂದ ಟಿಕೆಟ್ ತರುವ ಹೊಣೆ ನಮಗೆ ಬಿಡಿ. ಸ್ಪರ್ಧೆಗೆ ಒಪ್ಪಿಕೊಳ್ಳಿ’ ಎಂದು ಹಠ ಹಿಡಿದರು.

ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಕಾಂಗ್ರೆಸ್ ಕರೆತಂದು ಟಿಕೆಟ್ ನೀಡಲಿದೆ ಎಂಬ ಸುದ್ದಿ ಕೆಲವು ದಿನ ಡಿ. ಸುಧಾಕರ್ ನೆಮ್ಮದಿ ಕೆಡಿಸಿದ್ದುಂಟು. ಕಾಂಗ್ರೆಸ್ ಪಟ್ಟಿ ಬಿಡುಗಡೆಯಾಗಿದೆ. ನೆಮ್ಮದಿಯಿಂದ ಪ್ರಚಾರದಲ್ಲಿ ತೊಡಗೋಣ ಎಂಬ ಉಮೇದಿನಲ್ಲಿದ್ದ ಸುಧಾಕರ್‌ಗೆ ಆದಿವಾಲ ಗ್ರಾಮದಲ್ಲಿನ ಬೆಳವಣಿಗೆ ಮತ್ತೆ ನಿದ್ದೆಗೆಡಿಸಿದೆ.

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ಸೋಮಶೇಖರ್ ಧರ್ಮಪುರದಲ್ಲಿ ಸುಧಾಕರ್ ಬೆಂಬಲಿಗರು ನಡೆಸಿದ ದಾಂಧಲೆಯಿಂದ ಕೋಪಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಟಿಕೆಟ್ ಕೇಳಿದ್ದ ಅವರು ಪಕ್ಷ ಬಿಟ್ಟು ಜೆಡಿಎಸ್ ಸೇರುತ್ತಾರೆಯೇ ಎಂಬುದು ಕುತೂಹಲವಾಗಿದೆ.

ಸಭೆಯಲ್ಲಿ ಕುಂಚಿಟಿಗ, ಕುರುಬ, ಲಂಬಾಣಿ, ಭೋವಿ ಸೇರಿದಂತೆ ವಿವಿಧ ಜಾತಿ–ಧರ್ಮದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT