ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 28 ಕೋಟಿ ಮಂಜೂರು: ಒಂದೇ ದಿನ 1,430 ಜನರಿಗೆ ಸಾಲ

Last Updated 3 ಅಕ್ಟೋಬರ್ 2019, 11:55 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಆಗಿರುವ ಕೆನರಾ ಬ್ಯಾಂಕ್‌ ನೇತೃತ್ವದಲ್ಲಿ ಇಲ್ಲಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ ಸಾಲ – ಗ್ರಾಹಕ ಸಂಪರ್ಕ ಮೇಳದಲ್ಲಿ ಒಂದೇ ದಿನ 1,438 ಜನರಿಗೆ ₹ 28 ಕೋಟಿ ಸಾಲ ಮಂಜೂರು ಮಾಡಲಾಯಿತು.

ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿರುವ 5 ಟ್ರೀಲಿಯನ್‌ ಡಾಲರ್‌ ಆರ್ಥಿಕತೆ ಹೊಂದುವತ್ತ ದಾಪುಗಾಲು ಇಡಲು ಈ ಮೇಳವನ್ನು ಆಯೋಜಿಸಲಾಗಿದೆ. ರಾಷ್ಟ್ರೀಕೃತ, ಗ್ರಾಮೀಣ ಹಾಗೂ ಖಾಸಗಿ ವಲಯವೂ ಸೇರಿದಂತೆ ಜಿಲ್ಲೆಯ 20 ಬ್ಯಾಂಕುಗಳು ಸಾಲ ಸಂಪರ್ಕ ಮೇಳದಲ್ಲಿ ಗ್ರಾಹಕರಿಗೆ ಸೌಲಭ್ಯ ವಿತರಿಸಿದವು. ಈ ಮೇಳ ಅ.5ರವರೆಗೆ ಮುಂದುವರಿಯಲಿದ್ದು, ಕೊನೆಯ ದಿನ ಕೆನರಾ ಬ್ಯಾಂಕ್‌ ಆವರಣದಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಡೆಯಲಿದೆ.

‘ಸಾಲ ಸೌಲಭ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ. ಮೂರು ದಿನಗಳ ಈ ಮೇಳದ ಸೌಲಭ್ಯವನ್ನು ಪಡೆಯಲು ಗ್ರಾಹಕರು ಉತ್ಸುಕರಾಗಿದ್ದಾರೆ. ಒಂದು ವಾರದಿಂದ ನಡೆದ ಪ್ರಕ್ರಿಯೆಯಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಅವರಿಗೆ ಸಾಲ ವಿತರಣೆ ಮಾಡಲಾಯಿತು’ ಎಂದು ಕೆನರಾ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಎಚ್‌.ರಘುರಾಜ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಸಾಲ ಸಂಪರ್ಕ ಮೇಳ ನ.30ರವರೆಗೆ ಎಲ್ಲ ಬ್ಯಾಂಕುಗಳಲ್ಲಿ ನಡೆಯಲಿದೆ. ಸಾಲದ ಆಧಾರದ ಮೇಲೆ ಆಯಾ ಬ್ಯಾಂಕುಗಳೇ ಬಡ್ಡಿ ದರ ನಿಗದಿ ಪಡಿಸಿವೆ. ರಾಷ್ಟ್ರೀಕೃತ ಬ್ಯಾಂಕುಗಳ ಬಡ್ಡಿದರ ರಿಸರ್ವ್‌ ಬ್ಯಾಂಕಿನ ರೇಪೊ ದರದ ಆಧಾರದ ಮೇಲೆ ನಿರ್ಧಾರವಾಗಲಿದೆ. ಸಾಲ ಪಡೆದು ಉದ್ಯಮ ನಡೆಸಲು ಜನರನ್ನು ಉತ್ತೇಜಿಸಲಾಗುವುದು. ಡಿಜಿಟಲ್‌ ವ್ಯವಹಾರದ ಬಗ್ಗೆಯೂ ಮಾಹಿತಿ ನೀಡಲಾಗುವುದು’ ಎಂದು ಹೇಳಿದರು.

ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ನಿಂಗೇಗೌಡ ಮಾತನಾಡಿ, ‘ಮುದ್ರಾ ಯೋಜನೆಯಡಿ 126, ಸ್ಟಾರ್ಟ್‌ ಅಪ್‌ ಯೋಜನೆಯಡಿ 40, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆ ವಿಭಾಗದಲ್ಲಿ 23, ಮನೆ ಸಾಲ 79, ವಾಹನ ಸಾಲ 65, ಕಿಸಾನ್‌ ಕ್ರೆಡಿಟ್‌ ಕಾರ್ಡ್‌ 131 ಹಾಗೂ 670 ಕೃಷಿ ಸಾಲ ವಿತರಣೆ ಮಾಡಲಾಗಿದೆ. ವೈಯಕ್ತಿಕ ಹಾಗೂ ಸ್ತ್ರೀಶಕ್ತಿ ಸಂಘಗಳಿಗೂ ಸಾಲ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ ಮೇಳವನ್ನು ಉದ್ಘಾಟಿಸಿದರು. ಕೆನರಾ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎನ್‌.ಲಕ್ಷ್ಮೀನಾರಾಯಣ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಘನಶ್ಯಾಂ ಆಳ್ವಾ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ರಾಜೇಶ್‌, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದ ಎ.ಎಸ್‌.ನಾಯ್ಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT