ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಿಣ ಪರಿಸ್ಥಿತಿ ಎದುರಾದರೂ ಸನ್ನದ್ಧರಾಗಿರಿ: ಬಿಡಿಎ ಆಯುಕ್ತ ಡಾ. ಪ್ರಕಾಶ್

ಕೋವಿಡ್-19 ಪರಿಶೀಲನಾ ಸಭೆ
Last Updated 9 ಮೇ 2020, 15:00 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಜಿಲ್ಲೆಯಲ್ಲಿ ಕೋವಿಡ್-19 ಒಟ್ಟು 6 ಪ್ರಕರಣ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕಠಿಣ ಪರಿಸ್ಥಿತಿ ಎದುರಾದರೂ ಸಮರ್ಥವಾಗಿ ನಿಭಾಯಿಸಲು ಸೂಕ್ತ ವ್ಯವಸ್ಥೆಯೊಂದಿಗೆ ಅಧಿಕಾರಿಗಳು ಸನ್ನದ್ಧರಾಗಿರಿ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಬಿಡಿಎ ಆಯುಕ್ತ ಡಾ.ಪ್ರಕಾಶ್ ಸೂಚನೆ ನೀಡಿದರು.

ಕೊರೊನಾ ಸೋಂಕಿನ ಸ್ಥಿತಿಗತಿ ಕುರಿತು ಶನಿವಾರ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ 6 ಪ್ರಕರಣ ಸಕ್ರಿಯವಾಗಿವೆ.ನಿರ್ಲಕ್ಷ್ಯದ ಕಾರಣದಿಂದ ಜಿಲ್ಲೆಯಲ್ಲಿ ಯಾವುದೇ ಅಧಿಕಾರಿಗಳು, ಸಿಬ್ಬಂದಿ, ವೈದ್ಯರು, ನರ್ಸ್‍ಗಳು, ಆಶಾ ಕಾರ್ಯಕರ್ತೆಯರು ಸೇರಿ ಯಾರಿಗೂ ಸೋಂಕು ಹರಡದಂತೆ ಎಚ್ಚರವಹಿಸಿ’ ಎಂದರು.

‘ಮುಂದಿನ ದಿನಗಳಲ್ಲಿ ಸೋಂಕು ವ್ಯಾಪಕವಾಗಿ ಹರಡಿದರೂ ಸಹ, ಸಮರ್ಥವಾಗಿ ನಿಭಾಯಿಸಲು ಎಲ್ಲ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು, ತಾಲ್ಲೂಕು ವೈದ್ಯಾಧಿಕಾರಿಗಳು ಸಕಲ ರೀತಿಯಲ್ಲಿ ಸಿದ್ಧವಾಗಿರಬೇಕು. ಜತೆಗೆ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಪ್ರಾಮುಖ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ಲಭ್ಯವಿರುವ ಎಲ್ಲ ಸಮುದಾಯ ಭವನಗಳು, ವಸತಿ ನಿಲಯಗಳು, ಖಾಸಗಿ ಆಸ್ಪತ್ರೆಗಳು, ಕಲ್ಯಾಣ ಮಂಟಪ ಹೀಗೆ ಸೂಕ್ತ ಸೌಲಭ್ಯಗಳೊಂದಿಗೆ ಎಲ್ಲವೂ ಸಕಾಲದಲ್ಲಿ ಸುಸಜ್ಜಿತವಾಗಿ ಲಭ್ಯವಾಗಿರುವಂತೆ ನೋಡಿಕೊಳ್ಳಬೇಕು. ತಾಲ್ಲೂಕುವಾರು ಕ್ರಿಯಾಯೋಜನೆ ಸಿದ್ಧವಿರಬೇಕು. ಕೆಲವೆಡೆ ಸಾಂಸ್ಥಿಕ ಕ್ವಾರಂಟೈನ್ ಮಾಡುವ ಸಂದರ್ಭದಲ್ಲಿ ವಿವಿಧೆಡೆಗಳಿಂದ ಆಕ್ಷೇಪಣೆ ಹಾಗೂ ಪ್ರಭಾವ, ಒತ್ತಡ ಬರುವುದು ಸಹಜ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾರ್ವಜನಿಕರು, ಜನಪ್ರತಿನಿಧಿಗಳು, ಸಹಕಾರ ನೀಡುವ ಮೂಲಕ ಕೋವಿಡ್ ಪ್ರಕರಣ ನಿರ್ವಹಿಸಲು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.‌

‘ಅಧಿಕಾರಿಗಳು ಯಾರ ಒತ್ತಡಗಳಿಗೂ ಒಳಗಾಗದೆ, ದಕ್ಷತೆಯಿಂದ ಕರ್ತವ್ಯ ನಿರ್ವಹಿಸಬೇಕು. ಸರ್ಕಾರದ ಮಟ್ಟದಲ್ಲಿ ಯಾವುದೇ ನೆರವು ಅಗತ್ಯವಿದ್ದಲ್ಲಿ ನನ್ನ ಗಮನಕ್ಕೆ ತನ್ನಿ’ ಎಂದ ಅವರು, ‘ಸರ್ಕಾರಿ ಕಚೇರಿಗಳಲ್ಲಿ ಅತ್ಯಾವಶ್ಯಕ ತುರ್ತು ಸೇವೆಗಳಿಗಷ್ಟೇ ಪ್ರಾಧಾನ್ಯತೆ ನೀಡಿ. ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಇರಬೇಕು. ನೆರೆಹೊರೆಯ ಜಿಲ್ಲೆಗಳಿಂದ ಅನಗತ್ಯ ಸಂಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಅಧಿಕಾರಿಗಳು, ‘ವೈದ್ಯರು, ಸಿಬ್ಬಂದಿ ಕೋವಿಡ್-19 ಪ್ರಕರಣವನ್ನು ನಿರ್ವಹಿಸುವ ವೇಳೆ ಭಯಪಡುವ ಆಗುವ ಅಗತ್ಯವಿಲ್ಲ. ನಾವೆಲ್ಲರೂ ಸಾರ್ವಜನಿಕ ಸೇವೆಯಲ್ಲಿ ಇದ್ದೇವೆ ಎಂಬುದನ್ನು ಮರೆಯಬಾರದು. ವಿಶ್ವದೆಲ್ಲೆಡೆ ಈ ಸೋಂಕು ಹರಡಿದೆ. ಬೇರೆ ದೇಶಗಳಿಗೆ ಹೋಲಿಸಿದಾಗ ನಮ್ಮಲ್ಲಿ ಹರಡುವಿಕೆಯ ಪ್ರಮಾಣ ಕಡಿಮೆ ಇದೆ’ ಎಂದರು.

‘ವೈಯಕ್ತಿಕ ಸುರಕ್ಷತಾ ವಿಧಾನ ತಪ್ಪದೆ ಅನುಸರಿಸಬೇಕು. ಈಗಾಗಲೇ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಕಟ್ಟುನಿಟ್ಟಾಗಿ ಪಾಲನೆ ಆಗಬೇಕು. ಸರ್ಕಾರದ ನಿರ್ದೇಶನದಂತೆ ಹೊರ ರಾಜ್ಯಗಳಿಗೆ ತೆರಳಿರುವ ಇನ್ನಷ್ಟು ಜನರು ಜಿಲ್ಲೆಗೆ ಹಿಂದಿರುಗಲು ಅವಕಾಶ ಕಲ್ಪಿಸಲಾಗಿದೆ. ಎಂತಹ ಪರಿಸ್ಥಿತಿ ಬಂದರೂ ಸಿದ್ಧರಾಗಿರಿ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಹೊನ್ನಾಂಬ, ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಲಾಕ್ಷ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ. ಕುಮಾರಸ್ವಾಮಿ, ಡಾ. ರಂಗನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT