‘ಭಾರತ್ ಬಂದ್’ಗೆ ಚಿತ್ರದುರ್ಗದಲ್ಲಿ ಮಿಶ್ರ ಪ್ರತಿಕ್ರಿಯೆ

ಚಿತ್ರದುರ್ಗ: ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಕರೆ ನೀಡಿದ್ದ ‘ಭಾರತ್ ಬಂದ್’ಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಮಂಗಳವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲಾ ಕೇಂದ್ರದ ಮಾರುಕಟ್ಟೆ ಪ್ರದೇಶ ಅರ್ಧ ದಿನ ಸ್ತಬ್ಧವಾಗಿತ್ತು. ಜಿಲ್ಲೆಯ ಉಳಿದೆಡೆ ಜನಜೀವನ ಸಹಜವಾಗಿತ್ತು.
ಬಂದ್‌ಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದವು. ಪ್ರತಿಭಟನೆ, ಧರಣಿ, ರಸ್ತೆ ತಡೆ, ಮೆರವಣಿಗೆ ನಡೆಸಿ ಕೃಷಿ ಕಾಯ್ದೆಗೆ ವಿರೋಧ ದಾಖಲಿಸಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.
ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ಬಾಗಿಲು ತೆರೆದಿದ್ದವು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚರಿಸಿದವು. ಖಾಸಗಿ ಬಸ್ ಸೇವೆ, ಆಟೊ ಹಾಗೂ ಟ್ಯಾಕ್ಸಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿಲ್ಲ. ಪ್ರಮುಖ ಮಾರ್ಗಗಳನ್ನು ಹೊರತುಪಡಿಸಿ ಬಡಾವಣೆ ಪ್ರದೇಶದಲ್ಲಿರುವ ಅಂಗಡಿ, ಮಳಿಗೆಗಳು ಬಾಗಿಲು ತೆರೆದಿದ್ದವು. ಹಣ್ಣು, ತರಕಾರಿ ಮಾರುಕಟ್ಟೆಗಳಲ್ಲಿ ವಹಿವಾಟು ನಡೆಯಿತು.
ಬಸ್ ತಡೆಯುವ ಪ್ರಯತ್ನ: ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಎಂದಿನಂತೆ ಸಂಚಾರ ಆರಂಭಿಸಿದ್ದವು. ಬೆಳಿಗ್ಗೆ 6ಕ್ಕೆ ಬೀದಿಗೆ ಇಳಿದ ಪ್ರತಿಭಟನಕಾರರು ಬಸ್ ನಿಲ್ದಾಣ, ಗಾಂಧಿ ವೃತ್ತ, ಹೊಳಲ್ಕೆರೆ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಬಂದ್ ಬೆಂಬಲಿಸುವಂತೆ ಮನವಿ ಮಾಡಿದರು. ಬಸ್ ಸಂಚಾರವನ್ನು ತಡೆಯುವ ಉದ್ದೇಶದಿಂದ ರಸ್ತೆಯಲ್ಲಿ ಧರಣಿ ಕುಳಿತರು. ಪೊಲೀಸರು ಮಧ್ಯಪ್ರವೇಶಿಸಿ ರೈತರ ಪ್ರಯತ್ನವನ್ನು ಹುಸಿಗೊಳಿಸಿದರು.
ಬಸ್ ನಿಲ್ದಾಣದಿಂದ ಗಾಂಧಿ ವೃತ್ತದ ಮೂಲಕ ಹಾದುಹೋಗುವ ಬಸ್‌ಗಳು ಮಾರ್ಗ ಬದಲಿಸಿದವು. ಬಸ್ ನಿಲ್ದಾಣದ ಒಳಗೆ ಪ್ರವೇಶಿಸಿ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಸಂಚಾರ ತಡೆಯುವ ಪ್ರಯತ್ನ ಸಫಲವಾಗಲಿಲ್ಲ.
ಮಾನವ ಸರಪಳಿ ರಚನೆ
ಕರ್ನಾಟಕ ರಾಜ್ಯ ರೈತ ಸಂಘ, ಕಾಂಗ್ರೆಸ್, ಸಿಪಿಐ, ಎಸ್‌ಯುಸಿಐ, ಸಿಐಟಿಯು, ಎಐಟಿಯುಸಿ, ಭೀಮ ಆರ್ಮಿ, ಕರ್ನಾಟಕ ರಕ್ಷಣಾ ವೇದಿಕೆ, ಕಟ್ಟಡ ಕಾರ್ಮಿಕರ ಸಂಘ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಸಿಬ್ಬಂದಿ, ಎಪಿಎಂಸಿ ಹಮಾಲಾರ ಸಂಘ ಸೇರಿ ಹಲವು ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಗಾಂಧಿ ವೃತ್ತದಲ್ಲಿ ಜಮಾಯಿಸಿದ್ದರು. ಮಾನವ ಸರಪಳಿ ರಚಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಂಡೋಪತಂಡವಾಗಿ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ಬಂದ್‌ಗೆ ಸಹಕರಿಸುವಂತೆ ಕೋರಿಕೊಂಡರು. ಹೋಟೆಲು, ಬೇಕರಿ ಸೇರಿದಂತೆ ಬಹುತೇಕ ಎಲ್ಲ ಅಂಗಡಿಗಳ ಬಾಗಿಲು ಮುಚ್ಚಿಸಿದರು. ಪ್ರತಿಭಟನೆ ಸ್ವರೂಪ ತೀವ್ರಗೊಂಡ ಬಳಿಕ ಅಂಗಡಿ ಬಾಗಿಲು ತೆರೆಯಲು ಅನೇಕರು ಹಿಂದೇಟು ಹಾಕಿದರು. ಮೆದೇಹಳ್ಳಿ ರಸ್ತೆ, ಹೊಳಲ್ಕೆರೆ ಮಾರ್ಗ, ದಾವಣಗೆರೆ ರಸ್ತೆ, ಆನೆಬಾಗಿಲು ಸುತ್ತಲಿನ ಬಳಿ ಅಂಗಡಿಗಳು ಬಾಗಿಲು ಹಾಕಿದ್ದವು.
ಅಣಕು ಪ್ರದರ್ಶನ
ಧರಣಿ, ಮೆರವಣಿಗೆ ಜತೆಗೆ ರೈತರು ನಡೆಸಿದ ಅಣಕು ಪ್ರದರ್ಶನಗಳು ಗಮನ ಸೆಳೆದವು. ಭೀಮ ಆರ್ಮಿ ಕಾರ್ಯಕರ್ತರು ಕೈಗೆ ಹಗ್ಗ ಕಟ್ಟಿಕೊಂಡು ಅಣಕು ಪ್ರದರ್ಶನ ಮಾಡಿದರು. ಸರ್ಕಾರ ಜಾರಿಗೊಳಿಸಿದ ಕಾಯ್ದೆಗಳು ರೈತರ ಕೈಗಳನ್ನು ಕಟ್ಟಿ ಹಾಕಿವೆ ಎಂಬ ಸಂದೇಶ ಸಾರಿದರು.
ರೈತರ ತಲೆ ಮೇಲೆ ಕೇಂದ್ರ ಸರ್ಕಾರ ಕಲ್ಲು ಎತ್ತಿ ಹಾಕಿದೆ ಅಂಥ ಕಲ್ಲು ಚಪ್ಪಡಿಗಳನ್ನು ತಲೆ ಮೇಲೆ ಹೊತ್ತು, ಬಾಯಿ ಬಡಿದುಕೊಂಡ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಂದ್‌ಗೆ ಬೆಂಬಲ ಸೂಚಿಸದೇ ಬಾಗಿಲು ತೆರೆದಿದ್ದ ಅಂಗಡಿಗಳಿಗೆ ಭೇಟಿ ನೀಡಿದ ರೈತ ಸಂಘದ ಸದಸ್ಯರು ಮಾಲೀಕರಿಗೆ ಹೂ ನೀಡಿ ಮುಜುಗರಕ್ಕೆ ಸಿಲುಕಿಸಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.