ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯ ಸಂಘಟನೆಗೆ ಧರ್ಮವೇ ತಳಹದಿ

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅಭಿಮತ
Last Updated 18 ಜುಲೈ 2021, 15:50 IST
ಅಕ್ಷರ ಗಾತ್ರ

ಚಿತ್ರದುರ್ಗ: ಧರ್ಮದ ತಳಹದಿಯ ಮೇಲೆ ಸಮಾಜ ಸಂಘಟನೆ ಮಾಡಲಾಗುತ್ತಿದೆ. ಸಾಕ್ಷರತೆ ಮೂಡಿದಷ್ಟೂ ಸಮುದಾಯ ಸದೃಢವಾಗುತ್ತದೆ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಭೋವಿ ಗುರುಪೀಠದಲ್ಲಿ ಭಾನುವಾರ ಏರ್ಪಡಿಸಿದ್ದ ಭೋವಿ ಜನೋತ್ಸವದಲ್ಲಿ ಭಕ್ತರನ್ನು ಉದ್ದೇಶಸಿ ಮಾತನಾಡಿದ ಸ್ವಾಮೀಜಿ, ‘ಸಿದ್ಧರಾಮೇಶ್ವರರು ಅನುಸರಿಸಿದ ವೈಚಾರಿಕ ಧರ್ಮ ನಮ್ಮದು. ಆದರೆ, ಸಮುದಾಯ ಮೌಢ್ಯ, ಕಂದಾಚಾರಗಳಿಂದ ನಲುಗುತ್ತಿದೆ. ಮೌಢ್ಯಾಚರಣೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ’ ಎಂದರು.

‘ನಮ್ಮೊಳಗಿನ ಪ್ರತಿಭೆಯನ್ನು ಹೊರಹೊಮ್ಮಿಸಲು ಶಿಕ್ಷಣ ಬೇಕೆ ಹೊರತು ಉದ್ಯೋಗ ಅರಸುವುದಕ್ಕಾಗಿ ಅಲ್ಲ. ಮುಂದಿನ ಪೀಳಿಗೆ ನಿರುದ್ಯೋಗದ ಸಮಸ್ಯೆಯಿಂದ ಬಳಲಬಾರದು. ಉಚಿತ ಶಿಕ್ಷಣ ನೀಡುವುದು ಗುರುಪೀಠದ ಗುರಿ. ತಾಂತ್ರಿಕ ಶಿಕ್ಷಣ ನೀಡುವ ಸಂಸ್ಥೆಗಳನ್ನು ಕಟ್ಟುವ ನಿಟ್ಟಿನಲ್ಲಿ ಮಠ ಪ್ರಯತ್ನಿಸುತ್ತಿದೆ. ಅಂಬೇಡ್ಕರ್‌ ಆಶಯದಂತೆ ಎಲ್ಲ ಕ್ಷೇತ್ರಗಳಲ್ಲಿ ಸಮಾನತೆ ಪಡೆಯಬೇಕಿದೆ’ ಎಂದರು.

ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ‘ಭಕ್ತರ ಅಪೇಕ್ಷೆಯಂತೆ ನಡೆದುಕೊಳ್ಳುವುದು ಮಠಾಧೀಶರ ಜವಾಬ್ದಾರಿ. ಸಮಾಜಮುಖಿ ಕಾರ್ಯದಲ್ಲಿ ಜನೋತ್ಸವ ಮೊದಲ ಹೆಜ್ಜೆ. ವಯಸ್ಸಿನಲ್ಲಿ ಚಿಕ್ಕವರಾದರೂ ದೊಡ್ಡ ಆಲೋಚನೆ ಹೊಂದಿದ್ದಾರೆ. ಕ್ರಿಯಾಶೀಲ ಹಾಗೂ ಸದಾ ಚಟುವಟಿಕೆಯಿಂದ ಇರುವ ಸ್ವಾಮೀಜಿ, ಪಟ್ಟು ಹಿಡಿದು ಕೆಲಸ ಮಾಡುವ ಬದ್ಧತೆ ಇಟ್ಟುಕೊಂಡಿದ್ದಾರೆ. ಶೋಷಿತ ಸಮುದಾಯಕ್ಕೆ ಇಂತಹ ಮಠಾಧೀಶರ ಅಗತ್ಯವಿದೆ’ ಎಂದರು.

‘ನಾವೆಲ್ಲರೂ ಸಮಾಜಮುಖಿಯಾಗಲು ಶಿವಮೂರ್ತಿ ಮುರುಘಾ ಶರಣರು ದಾರಿ ತೋರಿದ್ದಾರೆ. ನಮ್ಮ ಬೆಳವಣಿಗೆಯಲ್ಲಿ ಅವರನ್ನು ಸದಾ ಸ್ಮರಿಸುತ್ತೇವೆ. ಅವರ ಆಶಯದಂತೆ ಸಮಾಜವನ್ನು ಕಟ್ಟುತ್ತೇವೆ. ಇಮ್ಮಡಿ ಶ್ರೀಗಳ ಕಾಲಘಟ್ಟದಲ್ಲಿ ಭೋವಿ ಸಮಾಜ ಕ್ಷಿಪ್ರಗತಿಯಲ್ಲಿ ಬದಲಾವಣೆ ಆಗುತ್ತದೆ ಎಂಬ ನಂಬಿಕೆ ಇದೆ. ಸಮುದಾಯದ ಕೀರ್ತಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ’ ಎಂದು ಹರಸಿದರು.

‘ಸಮುದಾಯ ಸಂಘಟನೆಗೆ ಸ್ವಾಮೀಜಿ ಭದ್ರ ಬುನಾದಿ ಹಾಕಿದ್ದಾರೆ. ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಮುಂಚೂಣಿಯಲ್ಲಿರುವ ಸಮುದಾಯದ ಸಾಲಿಗೆ ಭೋವಿ ಜನಾಂಗ ಸೇರಲಿದೆ. ಇದಕ್ಕೆ ಸ್ವಾಮೀಜಿ ಮೆಟ್ಟಿಲುಗಳನ್ನು ನಿರ್ಮಾಣ ಮಾಡಿದ್ದಾರೆ. ಸಾಮಾಜಿಕ ಸಂಘಟನೆ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಯೋಜನೆಗಳನ್ನು ರೂಪಿಸಿಕೊಂಡಿದ್ದಾರೆ’ ಎಂದು ಹೇಳಿದರು.

ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಮಾತನಾಡಿ, ‘ಇಮ್ಮಡಿ ಶ್ರೀಗಳು ಗುರುಪೀಠಕ್ಕೆ ಪಟ್ಟಾಭಿಷಕ್ತರಾದ ಬಳಿಕ ಸಮುದಾಯದ ಬೆಳವಣಿಗೆಗೆ ಶ್ರಮಿಸಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಭೋವಿ ಜನಾಂಗ ಅಪರೂಪದ ಸಂತನನ್ನು ಪಡೆದಿದೆ. ಸಮುದಾಯವನ್ನು ಮುನ್ನೆಡೆಸುವ ಸಾಮರ್ಥ್ಯ ಹೊಂದಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಭಿವೃದ್ಧಿಯತ್ತ ಸಾಗೋಣ: ಅಖಂಡ

ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಸಮುದಾಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯೋಣ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದರು.

‘ರಾಜ್ಯದಲ್ಲಿ ಜನಾಂಗದ ಅಭಿವೃದ್ಧಿ ಮುಖ್ಯವಾಗಿದೆ. ಆ ಅಭಿವೃದ್ಧಿಯನ್ನು ಸ್ವಾಮೀಜಿಯವರ ಮೂಲಕ ಸಾಧಿಸಬೇಕಿದೆ. ಎಲ್ಲರೂ ಒಟ್ಟಾಗಿ ಶ್ರೀಗಳ ಜೊತೆ ಸಾಗಿದರೆ ಯಶಸ್ಸು ಸಾಧಿಸಲು ಸಾಧ್ಯವಿದೆ. ಅಭಿವೃದ್ಧಿಯತ್ತ ಸಾಗುವ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.

ಕೆಎಸ್‌ಆರ್‌ಟಿಸಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ಮಾತನಾಡಿ, ‘ಭೋವಿ ಸಮುದಾಯ ಸಶಕ್ತಗೊಳ್ಳಲು ಇಮ್ಮಡಿ ಸ್ವಾಮೀಜಿ ಅವರ ಕೊಡುಗೆ ಅಪಾರವಾಗಿದೆ. ಸಮುದಾಯವನ್ನು ಒಗ್ಗೂಡಿಸುವ ಶಕ್ತಿ ಅವರಲ್ಲಿದೆ. ಹರಿದು ಹಂಚಿ ಹೋಗಿದ್ದ ಸಮುದಾಯ ಸಂಘಟಿತವಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ, ಮಡಿವಾಳ ಮಹಾಸಂಸ್ಥಾನದ ಬಸವ ಮಾಚಿದೇವ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಅಥಣಿಯ ಶಿವಬಸವ ಸ್ವಾಮೀಜಿ, ಶಿಕಾರಿಪುರದ ಚೆನ್ನಬಸವ ಸ್ವಾಮೀಜಿ, ಕೊರಟಿಗೆರೆ ಮಹಾಲಿಂಗ ಸ್ವಾಮೀಜಿ, ಶಿರಸಿ ಮಲ್ಲಿಕಾರ್ಜುನ ಸ್ವಾಮೀಜಿ, ಕುಂಬಾರ ಗುಂಡಯ್ಯ ಸ್ವಾಮೀಜಿ, ಕಿರಣ ಸ್ವಾಮೀಜಿ, ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಬಸವ ಪ್ರಸಾದ ಸ್ವಾಮೀಜಿ, ಒಸಿಸಿಐ ರಾಷ್ಟ್ರೀಯ ಅಧ್ಯಕ್ಷ ರವಿ ಮಾಕಳಿ, ರಾಜ್ಯ ಘಟಕದ ಅಧ್ಯಕ್ಷ ಆನಂದಪ್ಪ,ಜಿಲ್ಲಾ ಸರ್ಕಾರ ನೌಕರ ಸಂಘದ ಅಧ್ಯಕ್ಷ ಕೆ.ಮಂಜುನಾಥ್, ಜಿಲ್ಲಾ ಭೋವಿ ಸಂಘದ ಕಾರ್ಯರ್ಶಿ ಲಕ್ಷ್ಮಣ, ಮಠದ ಸಿಇಒ ಗೌನಳ್ಳಿ ಗೋವಿಂದಪ್ಪ ಇದ್ದರು.

***

ಸಮಾಜದ ಅಭಿವೃದ್ಧಿಗಾಗಿ ಜೀವನ ಸಮರ್ಪಣೆ ಮಾಡಿಕೊಂಡಿದ್ದಾರೆ. ಶೋಷಣೆ ಮುಕ್ತ ಸಮಾಜಕ್ಕಾಗಿ ಶ್ರಮಿಸುತ್ತಿದ್ದಾರೆ. ಸಮುದಾಯ ಪ್ರಗತಿ ಪಥಕ್ಕೆ ಬಂದಿದೆ.

ರೇಣುಕಾನಂದ ಸ್ವಾಮೀಜಿ,ಈಡಿಗ ಮಹಾಸಂಸ್ಥಾನ ಮಠ

***

ರಾಜಕಾರಣಿಗಳು ತಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಪಡೆಯಲು ಪ್ರಯತ್ನಿಸಬೇಕು. ಮಠಾಧೀಶರ ಮೂಲಕ ಸಮಾಜ ಸಂಘಟನೆಗೆ ಮುಂದಾಗಬೇಕು.

ವಚನಾನಂದ ಸ್ವಾಮೀಜಿ, ಪಂಚಮಸಾಲಿ ಮಠ

***

ಸ್ವಾಮೀಜಿ ಅವರು ಕೋವಿಡ್‌ ಕಾಲದಲ್ಲಿ ಮಾಡಿದ ದಾನ ಸ್ಮರಣಿಯವಾದದ್ದು. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಶ್ರೀಗಳು ಮಾಡಿರುವ ಕಾರ್ಯ ಸಮಾಜದ ಮುನ್ನಡೆಯನ್ನು ಸಾಕ್ಷಿಕರಿಸುತ್ತವೆ.

ಮಾನಪ್ಪ ವಜ್ಜಲ್,ಹಟ್ಟಿ ಚಿನ್ನದ ಗಣಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT