ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

28 ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳ ಗೆಲುವು ಖಚಿತ: ರಾಧಾಮೋಹನ್‌ ದಾಸ್‌

Published 31 ಮಾರ್ಚ್ 2024, 16:08 IST
Last Updated 31 ಮಾರ್ಚ್ 2024, 16:08 IST
ಅಕ್ಷರ ಗಾತ್ರ

ಚಿತ್ರದುರ್ಗ: ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್‌ ಮೈತ್ರಿ ಹಾಲು – ಜೇನಿನಂತೆ ಆಗಿದೆ. 28 ಕ್ಷೇತ್ರಗಳಲ್ಲಿ ಈ ಬಾರಿ ಎನ್‌ಡಿಎ ಅಭ್ಯರ್ಥಿಗಳ ಗೆಲುವು ಖಚಿತ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್‌ ದಾಸ್‌ ಅಗರ್ವಾಲ್‌ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಎಸ್‌ಎಸ್‌ಕೆ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷದ ಕಾರ್ಯಕರ್ತರ ಸಮನ್ವಯ ಸಭೆ ಹಾಗೂ ಚುನಾವಣಾ ಸಿದ್ಧತಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ಕಳೆದ ಒಂದೂವರೆ ತಿಂಗಳಿಂದ ರಾಜ್ಯದೆಲ್ಲೆಡೆ ಪ್ರವಾಸ ಮಾಡಿದ್ದೇನೆ. ಜನರ ನಾಡಿಮಿಡಿತವನ್ನು ಹೇಗೆ ಅರ್ಥಮಾಡಿ ಕೊಳ್ಳಬೇಕೆಂದು ನನಗೆ ತಿಳಿದಿದೆ. ಕಾಂಗ್ರೆಸ್ ಕಳೆದ ಬಾರಿಯ ಒಂದು ಸ್ಥಾನವನ್ನೂ  ಉಳಿಸಿಕೊಳ್ಳುವುದು ಕಷ್ಟವಿದೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ದೇಶ ಮತ್ತು ಜನರಿಗಾಗಿ ಜೀವನ ಮುಡಿಪಾಗಿಟ್ಟಿದ್ದಾರೆ. ಕಾಂಗ್ರೆಸ್‌ 60 ವರ್ಷದಲ್ಲಿ ಮಾಡದ ಅಭಿವೃದ್ಧಿಯನ್ನು ಮೋದಿ 10 ವರ್ಷದಲ್ಲಿ ಮಾಡಿದ್ದಾರೆ. ಸ್ವ ಉದ್ಯೋಗ ಕೈಗೊಳ್ಳಲು ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ, ಬಡವರಿಗೆ ಅಕ್ಕಿ, ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆ, ರೈತಪರ ಯೋಜನೆ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆ ತಂದಿದ್ದಾರೆ’ ಎಂದರು.

‘ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೋವಿಂದ ಕಾರಜೋಳ ಅವರದು ಐತಿಹಾಸಿಕ ಗೆಲುವು ಆಗಬೇಕು. ನಿರಂತರವಾಗಿ ಇನ್ನೂ ಕೆಲ ದಿನ ಕೆಲಸ ಮಾಡಿದರೆ ಎಲ್ಲವೂ ಸಾಧ್ಯವಾಗಲಿದೆ’ ಎಂದು ತಿಳಿಸಿದರು. 

‘ದೇಶದ ಭದ್ರತೆಗೆ ಹೆಚ್ಚು ಒತ್ತು ನೀಡಲಾಗಿದೆ. ಭ್ರಷ್ಟಾಚಾರದ ಆರೋಪವಿಲ್ಲದಂತೆ ಆಡಳಿತ ನಡೆಸಿದ ಕೀರ್ತಿ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ’ ಎಂದು ಚಿತ್ರದುರ್ಗ ಲೋಕಸಭಾ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.

‘ಸರ್ವೋದಯ ಸಿದ್ಧಾಂತ, ಅಂತ್ಯೋದಯ ಸಂಕಲ್ಪ, ಭ್ರಷ್ಟಾಚಾರ ಮುಕ್ತ ಭಾರತವೇ ಮೋದಿ ಗುರಿ. ಮೂರನೇ ಬಾರಿ ಪ್ರಧಾನಿ ಹುದ್ದೆಗೆ ಕೂರಿಸಲು ಜನ ಸಿದ್ಧರಿದ್ದಾರೆ. ಹಾಲು-ಜೇನಿನಂತೆ ಒಗ್ಗೂಡಿ ಕೆಲಸ ಮಾಡಿದರೆ ಎಲ್ಲ ಕ್ಷೇತ್ರಗಳಲ್ಲೂ ಜಯಿಸಬಹುದು ಎಂದು ದೇವೇಗೌಡರೇ ಹೇಳಿದ್ದಾರೆ. ಆ ಮಾತನ್ನು ಪ್ರತಿಯೊಬ್ಬರು ಪಾಲಿಸಬೇಕಿದೆ’ ಎಂದರು.

‘ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಹಿಂದುಳಿದಿದೆ. ಎಲ್ಲಾ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ದುಡಿಯುತ್ತೇನೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಮೈತ್ರಿ ಅನಿವಾರ್ಯತೆ ಇದ್ದು, ಬಿಜೆಪಿ ಜೊತೆ ಸಾಮರಸ್ಯದಿಂದ ಕೆಲಸ ಮಾಡಲಿದ್ದೇವೆ. ಯಡಿಯೂರಪ್ಪ– ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರದ ಸಾಧನೆ ಇಂದಿಗೂ ಜನ ಮರೆತಿಲ್ಲ. ಮತದಾರರಲ್ಲೂ ಸಂತಸವಿದೆ. ಅನುಭವಿ ರಾಜಕಾರಣಿ ಗೆಲ್ಲಿಸಿದರೆ, ಕ್ಷೇತ್ರದ ಅಭಿವೃದ್ಧಿಗೆ ಅನುಕೂಲವಾಗಲಿದೆ’ ಎಂದು ಮಾಜಿ ಶಾಸಕ ತಿಮ್ಮರಾಯಪ್ಪ ಅಭಿಪ್ರಾಯಪಟ್ಟರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರಳಿ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಯಣ್ಣ, ಮಾಜಿ ಅಧ್ಯಕ್ಷ ಡಿ.ಯಶೋಧರ, ತುಮಕೂರು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಂಜಿನಪ್ಪ, ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್‌, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲ ಸ್ವಾಮಿ ನಾಯಕ, ವೀಕ್ಷಕರಾದ ರವೀಂದ್ರಪ್ಪ, ಚಳ್ಳಕೆರೆ ರವೀಶ್‌, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್‌.ನವೀನ್, ಎನ್‌.ರವಿಕುಮಾರ್‌, ಚಿದಾನಂದ ಗೌಡ, ಮಧುಗಿರಿ ಸಂಘಟನಾತ್ಮಕ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಗೌಡ ಇದ್ದರು.

ರಾಜ್ಯದ 28 ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳ ಗೆಲುವು ಖಚಿತ. ನರೇಂದ್ರ ಮೋದಿ ಯಡಿಯೂರಪ್ಪ ದೇವೇಗೌಡರು ಕುಮಾರಣ್ಣ ಅವರ ಸಾಧನೆ ಜನರಿಗೆ ತಿಳಿಸುವ ಕೆಲಸ ಆಗಬೇಕು. ಅನ್ಯೋನ್ಯತೆಯಿಂದ ಕಾರಜೋಳ ಗೆಲುವಿಗೆ ಶ್ರಮಿಸೋಣ.
ತಿಪ್ಪೇಸ್ವಾಮಿ ವಿಧಾನಪರಿಷತ್‌ ಸದಸ್ಯ
ಬಿಜೆಪಿ ಜೆಡಿಎಸ್‌ ಮೈತ್ರಿ ಕಾಂಗ್ರೆಸ್ಸಿಗರ ಎದೆ ನಡುಗಿಸುವಂತಿದೆ. ಇಬ್ಬರೂ ಪ್ರಧಾನಿಗಳು ನಮಗಿದ್ದಾರೆ. ಒಂದು ಸೀಟು ಗೆದ್ದವರು 20 ಸೀಟು ಗೆಲ್ಲುವ ಹೇಳಿಕೆ ನೀಡುತ್ತಿರುವುದು ತಮಾಷೆಯಾಗಿದೆ. ಚುನಾವಣೆ ಬಳಿಕ ಮೈತ್ರಿ ಸರ್ಕಾರ ಬರಬೇಕು.
ಜಿ.ಎಚ್‌.ತಿಪ್ಪಾರೆಡ್ಡಿ ಮಾಜಿ ಶಾಸಕ
ಸಮನ್ವಯ ಸಭೆ ಬಳಿಕ ಗಲಾಟೆ
ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷದ ಕಾರ್ಯಕರ್ತರ ಸಮನ್ವಯ ಸಭೆ ಬಳಿಕ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆಯಿತು. ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ತುಮಕೂರು ಜಿಲ್ಲೆಯ ಪಾವಗಡ ಬಿಜೆಪಿ ಕಾರ್ಯಕರ್ತ ಚೈತನ್ಯ ಮೇಲೆ ಪಾವಗಡ ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಮಧು ಹಲ್ಲೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಪೋಸ್ಟ್ ಹಿನ್ನೆಲೆಯಲ್ಲಿ ಗಲಾಟೆ ನಡೆದಿದೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ತೆರಳಿದ ಬೆನ್ನಲ್ಲೇ ಪ್ರಾರಂಭವಾದ ಗಲಾಟೆ ಕೊನೆಗೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಗಲಾಟೆ ಗಮನಿಸಿದ ಮುಖಂಡರು ಇಬ್ಬರನ್ನೂ ಸಮಾಧಾನಪಡಿಸಿ ಕಳಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT