ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯಕ್ಕೆ ಬಂದು ಆಸ್ತಿ ಕಳೆದುಕೊಂಡೆ: ಕಮಿಷನ್ ಆರೋಪದ ಬಗ್ಗೆ ತಿಪ್ಪಾರೆಡ್ಡಿ ಮಾತು

Last Updated 21 ಜನವರಿ 2023, 5:53 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಬ್ರಿಟಿಷರಿಂದ ಖರೀದಿಸಿದ ಟೆಕ್ಸ್‌ಟೈಲ್‌ ಮಿಲ್‌ನಲ್ಲಿ ಸಾವಿರಕ್ಕೂ ಅಧಿಕ ಜನರು ಕೆಲಸ ಮಾಡುತ್ತಿದ್ದರು. ನಾನು ಹುಟ್ಟುವ ಮೊದಲೇ ಕುಟುಂಬ ಆದಾಯ ತೆರಿಗೆ ಪಾವತಿಸುತ್ತಿತ್ತು. ರಾಜಕೀಯಕ್ಕೆ ಬಂದು ಇಂತಹ ಆಸ್ತಿಯನ್ನು ಕಳೆದುಕೊಂಡಿದ್ದೇನೆ’ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ತಿಳಿಸಿದರು.

ಕಮಿಷನ್‌ ಆರೋಪಕ್ಕೆ ಸಂಬಂಧಿಸಿ ದಂತೆ ಶುಕ್ರವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ‘1952ರಿಂದಲೂ

ಹತ್ತಿ ಮಿಲ್‌ ನಡೆಸುತ್ತಿದ್ದೆವು. 1987ರಿಂದ ರಿಯಲ್‌ ಎಸ್ಟೇಟ್‌ ಉದ್ಯಮ ನಡೆಸುತ್ತಿದ್ದೇನೆ. ಬೆಂಗಳೂರು, ಚಿತ್ರದುರ್ಗ ಸೇರಿ ಹಲವು ನಗರಗಳಲ್ಲಿ ಈ ಉದ್ಯಮವಿದೆ’ ಎಂದರು.

‘1972ರಿಂದ ಈವರೆಗೆ ನಮ್ಮ ಕುಟುಂಬ ವಿಧಾನಸೌಧದಲ್ಲಿದೆ. ಅಣ್ಣ ಅಶ್ವತ್ಥ್‌ ರೆಡ್ಡಿ ಆರು ಬಾರಿ ಶಾಸಕರಾಗಿ, ನಾನು ಆರು ಬಾರಿ ಶಾಸಕರಾಗಿದ್ದೇವೆ. ಇನ್ನಿಬ್ಬರು ಸಹೋದರರೊಬ್ಬರು ವಿದೇಶದಲ್ಲಿ ನೆಲೆಸಿ ಹಲವು ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ’ ಎಂದು ಹೇಳಿದರು.

‘ನಗರ ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿ 1994ರಿಂದ ಈವರೆಗೆ 30 ಸಾವಿರಕ್ಕೂ ಅಧಿಕ ಬಡ ಕುಟುಂಬಕ್ಕೆ ಆಶ್ರಯ ಮನೆ ನೀಡಿದ್ದೇನೆ. 12 ಸಾವಿರ ಕುಟುಂಬಕ್ಕೆ ಆಶ್ರಯ ಕಲ್ಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಆಶ್ರಯ ಮನೆಗೆ ಫಲಾನುಭವಿಗಳು ಯಾರಿಗೆ, ಏಕೆ ಹಣ ನೀಡಿದ್ದಾರೆ ತಿಳಿಯದು. ನೀವು ಯಾರಿಗೆ ಹಣ ನೀಡಿದ್ದೀರಿ ಅವರ ಜುಟ್ಟು ಹಿಡಿದು ಪ್ರಶ್ನಿಸಿ’ ಎಂದರು.

‘ವೈದ್ಯರು ಗುತ್ತಿಗೆದಾರರಾದರೆ ತಪ್ಪೇನು?’
‘ವೈದ್ಯಕೀಯ ಶಿಕ್ಷಣ ಪಡೆದ ಅನೇಕರು ಯುಪಿಎಸ್‌ಸಿ ಪರೀಕ್ಷೆ ಬರೆದು ಉನ್ನತ ಅಧಿಕಾರಿಗಳಾಗಿದ್ದಾರೆ. ವೈದ್ಯಕೀಯ ಶಿಕ್ಷಣ ಪಡೆದಿರುವ ಪುತ್ರ ಗುತ್ತಿಗೆದಾರರಾದರೆ ತಪ್ಪೇನು’ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಪ್ರಶ್ನಿಸಿದರು.

‘ಎಂಜಿನಿಯರಿಂಗ್‌ ಪದವೀಧರನಾಗಿದ್ದ ಸಹೋದರ ಹತ್ತಿ ಮಿಲ್‌ ನೋಡಿಕೊಳ್ಳುತ್ತಿದ್ದಾರೆ. ಶಿಕ್ಷಣ ಹಾಗೂ ಉದ್ಯಮಕ್ಕೆ ಸಂಬಂಧವಿಲ್ಲ. ಕಂಪೆನಿ ಸ್ಥಾಪಿಸುವ ಉದ್ದೇಶದಿಂದ ಪುತ್ರ ಗುತ್ತಿಗೆದಾರ ಆಗಿದ್ದಾನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT