ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಬ್ಸ್‌ ಆಡಳಿತದಲ್ಲಿತ್ತು ದೂರ ದೃಷ್ಟಿ: ಡಾ.ನಂಜುಂಡಸ್ವಾಮಿ

ಇತಿಹಾಸ ಸಂಶೋಧಕ ಡಾ.ನಂಜುಂಡಸ್ವಾಮಿ ಅಭಿಮತ
Last Updated 19 ಜನವರಿ 2022, 14:47 IST
ಅಕ್ಷರ ಗಾತ್ರ

ಚಿತ್ರದುರ್ಗ: ಒಂದೂವರೆ ಶತಮಾನದ ಹಿಂದೆಯೇ ಬೆಂಗಳೂರಿನಿಂದ ದಾವಣಗೆರೆವರೆಗೆ ರಸ್ತೆ ನಿರ್ಮಿಸಿ, ವೇದಾವತಿ ನದಿಗೆ ಮಾರಿಕಣಿವೆ ಸಮೀಪ ಜಲಾಶಯ ಕಟ್ಟಲು ಪ್ರಯತ್ನಿಸಿದ ಮೇಜರ್‌ ಜನರಲ್‌ ಆರ್‌.ಎಸ್‌.ಡಾಬ್ಸ್‌ ಆಡಳಿತದಲ್ಲಿ ದೂರ ದೃಷ್ಟಿ ಇತ್ತು ಎಂದು ಇತಿಹಾಸ ಸಂಶೋಧಕ ಡಾ.ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿನ ಡಿಡಿಪಿಐ ಕಚೇರಿಯ ಸಭಾಂಗಣದಲ್ಲಿ ಸಿದ್ಧ ಪ್ರಕಾಶನ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಹೊಳಲ್ಕೆರೆಯ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಅವರ ‘ಮೇಜರ್‌ ಜನರಲ್‌ ಆರ್‌.ಎಸ್‌.ಡಾಬ್ಸ್‌ ಅವರ ಚಿತ್ರದುರ್ಗ ವಿಭಾಗದ ಆಡಳಿತದ ನೆನಪುಗಳು’ ಕೃತಿ ಕುರಿತು ಅವರು ಮಾತನಾಡಿದರು.

‘ಕ್ರಿಶ್ಚಿಯನ್‌ ಮಿಷನರಿಯ ಮನಸ್ಥಿತಿಯನ್ನು ಹೊಂದಿದ್ದರೂ ಡಾಬ್ಸ್‌ ಆಡಳಿತ ಸೇವಾ ಮನೋಭಾವದಿಂದ ಕೂಡಿತ್ತು. ತೆರಿಗೆ ಪದ್ಧತಿ ಸುಧಾರಣೆಗೆ ಒಲವು ತೋರಿದರು. ರಸ್ತೆ, ನೀರಾವರಿ ವ್ಯವಸ್ಥೆಯ ಬಗ್ಗೆ ಜ್ಞಾನ ಹೊಂದಿದ್ದರು. ಆರು ಸಾವಿರ ಕೆರೆಗಳನ್ನು ದುರಸ್ತಿ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಇದು ಕೊಂಚ ಉತ್ಪ್ರೇಕ್ಷೆ ಅನಿಸಿದರೂ ಕೆರೆಯ ಬಗ್ಗೆ ಹೊಂದಿದ್ದ ಕಾಳಜಿಯನ್ನು ನಿರಾಕರಿಸಲು ಸಾಧ್ಯವಿಲ್ಲ’ ಎಂದರು.

‘ಭಾರತೀಯ ಜನಜೀವನದ ಬಗ್ಗೆ ಡಾಬ್ಸ್‌ ಕುತೂಹಲ ಹೊಂದಿದ್ದರು. ಸಣ್ಣ ವಿವರಗಳನ್ನು ಉಲ್ಲೇಖಿಸಿರುವ ಅವರು ಪ್ರಮುಖರನ್ನು ಹೆಸರಿಸುವಾಗ ಉದಾರತೆಯನ್ನು ತೋರಿಲ್ಲ. ಅವರ ಕಾಲಘಟ್ಟದಲ್ಲಿ ಸ್ವಾತಂತ್ರ್ಯದ ಬಗ್ಗೆ ಹೋರಾಟಗಳು ಆರಂಭವಾಗಿದ್ದವು. ಮುಮ್ಮಡಿ ಕೃಷ್ಣರಾಜ ಒಡೆಯರ್‌ ಸೇರಿದಂತೆ ಹಿಂದೂ ರಾಜರ ಬಗ್ಗೆ ಡಾಬ್ಸ್‌ ಉತ್ತಮ ಅಭಿಪ್ರಾಯ ಹೊಂದಿರಲಿಲ್ಲ’ ಎಂದು ವಿವರಿಸಿದರು.

‘ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ಡಾಬ್ಸ್‌ ಉಲ್ಲೇಖವನ್ನು ನಂಬಲು ಸಾಧ್ಯವಿಲ್ಲ. ವಿಗ್ರಹ ಆರಾಧನೆ, ಮಠದ ವ್ಯವಸ್ಥೆಯ ಬಗ್ಗೆ ಅವರಲ್ಲಿ ಉತ್ತಮ ಅಭಿಪ್ರಾಯಗಳು ಇರಲಿಲ್ಲ ಎಂಬುದಕ್ಕೆ ಪುಸ್ತಕದಲ್ಲಿ ನಿದರ್ಶನಗಳು ಸಿಗುತ್ತವೆ. ಆ ಕಾಲದಲ್ಲಿ ಕಾಲರಾ ದೊಡ್ಡ ಕಾಯಿಲೆಯಾಗಿತ್ತು. ಹುಲಿ ಸಂತತಿಯೂ ಅಪಾರವಾಗಿತ್ತು. ಕಾಡು, ಕಳ್ಳರ ಕೃತ್ಯಗಳ ಬಗ್ಗೆಯೂ ಅವರು ವಿವರಣೆ ನೀಡಿರುವುದು ಕುತೂಹಲ ಮೂಡಿಸುತ್ತದೆ’ ಎಂದರು.

ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ‘ಯೂರೊಪಿನ್ನರು ತಮ್ಮ ದೃಷ್ಟಿಯಿಂದ ಚಿತ್ರದುರ್ಗವನ್ನು ನೋಡಿದ್ದಾರೆ. ಕಥೆಗಾರರ ಭಾಷೆ, ಸ್ವಾರಸ್ಯಗಳು ಅವರ ಕೃತಿಯಲ್ಲಿ ಕಾಣುತ್ತವೆ. ಆಳಿಸಿಕೊಳ್ಳಲು ಭಾರತೀಯರು ಅರ್ಹರು ಎಂಬ ಮನೋಭಾವ ಬ್ರಿಟಿಷರಲ್ಲಿ ಇದ್ದರೂ ಗೌರವ ನೀಡುತ್ತಿದ್ದರು’ ಎಂದು ಹೇಳಿದರು.

‘ಮತಾಂತರದ ಬಗ್ಗೆ ಡಾಬ್ಸ್‌ ಆಡಿದ ಮಾತುಗಳು ಈಗಲೂ ನೆನಪಾಗುತ್ತವೆ. ಬಲತ್ಕಾರ ಹಾಗೂ ಆಮಿಷದ ಮತಾಂತರವನ್ನು ಅವರು ಒಪ್ಪುತ್ತಿರಲಿಲ್ಲ. ಮುರುಘಾ ಮಠಕ್ಕೆ ಸಂಬಂಧಿಸಿದ ವಿಚಾರದಲ್ಲಿ ಅವರು ಸರಿಯಾಗಿ ನಡೆದುಕೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಂಶೋಧನಾ ಕೃತಿ ಅಲ್ಲ’

ಇದೊಂದು ಸಂಶೋಧನಾ ಕೃತಿ ಅಲ್ಲ. ಡಾಬ್ಸ್‌ ಅವರ ಕೃತಿಯಲ್ಲಿನ ಕೆಲ ಭಾಗಗಳನ್ನು ಸಾಮಾನ್ಯರಿಗೆ ಅರ್ಥವಾಗುವಂತೆ ವಿಶ್ಲೇಷಣೆ ಮಾಡಲಾಗಿದೆ ಎಂದು ಕೃತಿಕಾರ ಸಿ.ಎಂ.ತಿಪ್ಪೇಸ್ವಾಮಿ ತಿಳಿಸಿದರು.

‘19ನೇ ಶತಮಾನದ ಮಧ್ಯಭಾಗದ ಜನಜೀವನವನ್ನು ಡಾಬ್ಸ್‌ ಕಟ್ಟಿಕೊಟ್ಟಿದ್ದಾರೆ. ಜಿಲ್ಲಾಧಿಕಾರಿಗೆ ಸಮಾನವಾದ ಹುದ್ದೆಯಲ್ಲಿದ್ದ ಅವರು ಜನಮುಖಿ ಕೆಲಸಗಳನ್ನು ಮಾಡಿದ್ದಾರೆ. ಬ್ರಿಟಿಷರ ಅಧಿಕಾರದ ಪ್ರಾಮಾಣಿಕ ಕುರುಹುಗಳಾಗಿ ಹಲವು ಕಟ್ಟಡ, ಜಲಾಶಯಗಳು ಇಂದಿಗೂ ನಮ್ಮ ಮುಂದಿವೆ’ ಎಂದರು.

ಹೊಸದುರ್ಗ ಬಿಇಒ ಎಲ್.ಜಯಪ್ಪ, ಜಿಲ್ಲಾ ಸಮಾಜ ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಲೇಖಕ ಮೃತ್ಯುಂಜಯಪ್ಪ, ಇತಿಹಾಸ ಉಪನ್ಯಾಸಕ ತಿಪ್ಪೇಸ್ವಾಮಿ ಇದ್ದರು.

* ಬ್ರಿಟಿಷರು ಬಿಟ್ಟು ಹೋಗಿರುವ ಆಡಳಿತ ವ್ಯವಸ್ಥೆ ದೇಶದಲ್ಲಿ ಇಂದಿಗೂ ಇದೆ. ಈ ವ್ಯವಸ್ಥೆ ಇನ್ನಷ್ಟು ಸುಧಾರಣೆ ಕಾಣುವ ಅಗತ್ಯವಿದೆ. ಇದಕ್ಕೆ ಇತಿಹಾಸದ ತಿಳಿವಳಿಕೆ ಬೇಕಿದೆ. ಜಿಲ್ಲೆಯ ಐತಿಹಾಸಿಕ ಸ್ಥಳಗಳನ್ನು ಸರಂಕ್ಷಣೆ ಮಾಡಬೇಕಿದೆ.

-ಈ.ಬಾಲಕೃಷ್ಣ,ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT