ಸೋಮವಾರ, ಮೇ 23, 2022
28 °C
ಬಿಎಸ್‌ಪಿ ನಾಯಕ ಮಾರಸಂದ್ರ ಮುನಿಯಪ್ಪ

ಸ್ಮಶಾನ ಭೂಮಿ ಮಂಜೂರಾತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ದಲಿತರ ಅಂತ್ಯಕ್ರಿಯೆಗೆ ರಾಜ್ಯದ 11 ಸಾವಿರ ಹಳ್ಳಿಗಳಲ್ಲಿ ಜಾಗವಿಲ್ಲ. ಸರ್ಕಾರ ಕೂಡಲೇ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡಬೇಕು ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಒತ್ತಾಯಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘30 ವರ್ಷಗಳಿಂದ ಬಗರ್‌ ಹುಕುಂ ಸಾಗುವಳಿ ಮಾಡುತ್ತಿರುವವರಿಗೆ ಇನ್ನೂ ಭೂಮಿ ಸಿಕ್ಕಿಲ್ಲ. ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸಿ ಹಲವು ವರ್ಷ ಕಳೆದರೂ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಒಂದು ವರ್ಷದಿಂದ ವಿದ್ಯಾರ್ಥಿ ವೇತನ ನೀಡಿಲ್ಲ. ಸುಮಾರು 60 ಲಕ್ಷ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗಿದೆ. ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಕಾಲೇಜುಗಳಿಂದ ಹೊರಗೆ ಉಳಿಯುವ ಆತಂಕ ಎದುರಾಗಿದೆ. ಸರ್ಕಾರ ಕೂಡಲೇ ವಿದ್ಯಾರ್ಥಿ ವೇತನ ನೀಡಬೇಕು’ ಎಂದು ಆಗ್ರಹಿಸಿದರು.

‘ಇಂಧನ ದರ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಬಡ ಮತ್ತು ಮಧ್ಯಮ ವರ್ಗದ ಜನರು ಬೆಲೆ ಏರಿಕೆಗೆ ಹೈರಾಣಾಗಿದ್ದಾರೆ. ಜನಪರ ಕಾರ್ಯ ಕೈಗೊಳ್ಳಬೇಕಾದ ಸರ್ಕಾರ, ಗೋಹತ್ಯೆ ನಿಷೇಧದ ಮೂಲಕ ಆಹಾರದ ಹಕ್ಕು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ರೈತ ವಿರೋಧಿ ಕೃಷಿ ಕಾನೂನು ಜಾರಿಗೊಳಿಸಿ ಕೃಷಿ ವಲಯವನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ’ ಎಂದು ಆರೋಪಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಜನಸಂಖ್ಯಾ ಆಧಾರಿತ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ನ್ಯಾಯಮೂರ್ತಿ ನಾಗಮೋಹನ ದಾಸ್‌ ವರದಿಯನ್ನು ಕೂಡಲೇ ಜಾರಿಗೆ ತರಬೇಕು. ಬೇಡ ಜಂಗಮ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುವುದನ್ನು ನಿಯಂತ್ರಿಸಬೇಕು’ ಎಂದು ಆಗ್ರಹಿಸಿದರು.

ಹತ್ತಿದ ಏಣಿ ಒದೆಯುವ ಜೆಡಿಎಸ್‌

ಬಿಎಸ್‌ಪಿ ಹಾಗೂ ಜೆಡಿಎಸ್‌ ಹೊಂದಾಣಿಕೆಯಿಂದ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಅನುಕೂಲವಾಗಿದೆ. ಏಣಿಯನ್ನು ಹತ್ತಿದ ಬಳಿಕ ಒದೆಯುವುದು ಜೆಡಿಎಸ್‌ ಗುಣ ಎಂದು ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.

‘ಬಿಎಸ್‌ಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದು ತಪ್ಪು’ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು. ‘ಚುನಾವಣಾ ಪೂರ್ವದಲ್ಲಿ ಎರಡೂ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿದ್ದರಿಂದ 18 ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಅನುಕೂಲವಾಗಿದೆ. ಆದರೂ, ಅವರಿಗೆ ನಿಯತ್ತು ಇಲ್ಲ’ ಎಂದು ಕಿಡಿಕಾರಿದರು.

ಮುಖಂಡರಾದ ಅಶೋಕ್ ಚಕ್ರವರ್ತಿ, ಎನ್.ವೆಂಕಟೇಶ್ ಐಹೊಳೆ, ಎನ್.ಪ್ರಕಾಶ್, ಮಹಾಂತೇಶ್ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು