ಸೋಮವಾರ, ಆಗಸ್ಟ್ 15, 2022
27 °C
ತೋಟವನ್ನು ‘ಕೃಷಿ ಪ್ರವಾಸೋದ್ಯಮ’ ಆಗಿಸಲು ಯತ್ನ

ಕರಾವಳಿಯ ಗೋಡಂಬಿ ಬಯಲುಸೀಮೆಯಲ್ಲಿ

ಸುವರ್ಣಾ ಬಸವರಾಜ್ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ಪ್ರಯೋಗಶೀಲತೆಗೆ ಹೆಸರಾಗಿರುವ ತಾಲ್ಲೂಕಿನ ಚಳಮಡು ಗ್ರಾಮದ ಯುವ ರೈತರೊಬ್ಬರು ಕರಾವಳಿಯಲ್ಲಿ ಬೆಳೆಯುವ ಗೋಡಂಬಿಯನ್ನು ಬಯಲುಸೀಮೆಯಲ್ಲಿ ಬೆಳೆಯಲು ಮುಂದಾಗಿದ್ದು, ಯಶಸ್ಸು ಪಡೆಯುವ ಹಾದಿಯಲ್ಲಿದ್ದಾರೆ.

ಹಿರಿಯೂರು ತಾಲ್ಲೂಕಿನ ಚಳಮಡು ಗ್ರಾಮದ ಸುಮಾರು 10 ಎಕರೆ ಭೂಮಿಯಲ್ಲಿ ಪರಮಶಿವಮೂರ್ತಿ ಎಂಬ ಯುವ ರೈತರೊಬ್ಬರು ಡ್ರ್ಯಾಗನ್ ಫ್ರುಟ್, ನೇರಳೆ, ಹೆಬ್ಬೇವು, ತೇಗ, ಶ್ರೀಗಂಧ, ರಕ್ತಚಂದನ, ರೇಷ್ಮೆ ಜೊತೆಗೆ ಎರಡೂವರೆ ಎಕರೆಯಲ್ಲಿ ಮೂರು ವರ್ಷಗಳ ಹಿಂದೆ ಗೋಡಂಬಿ ಹಾಕಿದ್ದಾರೆ. ಒಂದು ವರ್ಷದಿಂದ ಫಸಲು ಪಡೆಯುವ ಮೂಲಕ ಯಶಸ್ಸಿನತ್ತ ದಾಪುಗಾಲು ಹಾಕುತ್ತಿದ್ದಾರೆ.

ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಮೂಲತಃ ಬಂಡ್ಲೋರಹಟ್ಟಿಯ ಹನುಮಂತ ಭೋವಿ 2005ರಲ್ಲಿ ಚಳಮಡು ಗ್ರಾಮದಿಂದ ಒಂದು ಕಿ.ಮೀ. ದೂರದಲ್ಲಿ ಹೋರಿಗುಡ್ಡದ ಸಮೀಪ ಹತ್ತು ಎಕರೆ ಜಮೀನು ಖರೀದಿಸಿದ್ದರು. ಹನುಮಂತ ಭೋವಿ ನಿಧನಾನಂತರ ಅವರ ಪತ್ನಿ ಗೌರಮ್ಮ, ಮಗ ಪರಮಶಿವಮೂರ್ತಿ ಹಾಗೂ ಮೊಮ್ಮಕ್ಕಳೊಂದಿಗೆ ಜಮೀನಿನಲ್ಲಿಯೇ ಮನೆ ಕಟ್ಟಿಕೊಂಡು ವಾಸವಾಗಿದ್ದು, ಮಗನ ಪ್ರಯೋಗಶೀಲತೆಗೆ ಬೆಂಬಲವಾಗಿ ನಿಂತಿದ್ದಾರೆ.

‘ಎಲ್ಲ ಕಾಲದಲ್ಲೂ ಕೃಷಿ–ತೋಟಗಾರಿಕೆಯಿಂದ ಆದಾಯ ಪಡೆಯಬೇಕೆಂದು ಡ್ರ್ಯಾಗನ್ ಫ್ರುಟ್, ನೇರಲೆ, ನುಗ್ಗೆ, ಗೋಡಂಬಿ, ರೇಷ್ಮೆ ಜೊತೆಗೆ ತರಕಾರಿ, ಹೂವು ಬೆಳೆಯುತ್ತಿದ್ದೇವೆ. ಜಮೀನಿನ ಅಂಚಿನಲ್ಲಿ ತೇಗ, ಹೆಬ್ಬೇವು, ಶ್ರೀಗಂಧ ಹಾಕಿದ್ದೇವೆ. ಇದಕ್ಕೂ ಮೊದಲು ಅಡಿಕೆ ಹಾಕಿ ಎರಡು ಬಾರಿ ನೀರಿನ ಕೊರತೆಯಿಂದ ತೋಟ ಒಣಗಿಸಿಕೊಂಡಿದ್ದೆ. ಮೂರು ವರ್ಷಗಳ ಹಿಂದೆ ವಾಣಿವಿಲಾಸ ಜಲಾಶಯದ ನೀರು ಡೆಡ್ ಸ್ಟೋರೇಜ್ ತಲುಪಿದಾಗ, ಕಡಿಮೆ ನೀರು ಬಯಸುವ ನೇರಲೆ, ಗೋಡಂಬಿ, ಮಾವು, ಪೇರಲೆ, ನಿಂಬೆ, ನುಗ್ಗೆ, ಕರಿಬೇವು, ಪಪ್ಪಾಯಿ, ಡ್ರ್ಯಾಗನ್ ಫ್ರುಟ್‌ನಂತಹ ಬೆಳೆ ನಾಟಿಗೆ ಮುಂದಾದಲ್ಲಿ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು’ ಎಂಬ ತೀರ್ಮಾನಕ್ಕೆ ಬಂದೆ. ತೋಟಗಾರಿಕೆ, ಅರಣ್ಯ, ಕೃಷಿ, ರೇಷ್ಮೆ ಮತ್ತು ಪಶುಪಾಲನಾ ಇಲಾಖೆಗಳಿಂದ ಸಾಕಷ್ಟು ನೆರವು ಸಿಕ್ಕಿತು. ಹೀಗಾಗಿ ನನ್ನ ಪ್ರಯೋಗ ಯಶಸ್ವಿಯಾಗುತ್ತಿದೆ’ ಎಂದು ಪರಮಶಿವಮೂರ್ತಿ ಹೇಳುತ್ತಾರೆ.

‘ಉಡುಪಿಯಿಂದ ಸಸಿಯೊಂದಕ್ಕೆ ₹ 70 ಕೊಟ್ಟು, 200 ಗೋಡಂಬಿ ಸಸಿ ತಂದು ನಾಟಿ ಮಾಡಿದ್ದೆ. ಗೋಡಂಬಿ ಮೂರು ವರ್ಷಕ್ಕೆ ಫಸಲಿಗೆ ಬರುತ್ತದೆ. ಹಿಂದಿನ ವರ್ಷ 35 ಕೆ.ಜಿ ಬೆಳೆ ಸಿಕ್ಕಿತ್ತು. ಈ ವರ್ಷ ಸದ್ಯಕ್ಕೆ ಒಂದು ಕ್ವಿಂಟಲ್ ಸಿಕ್ಕಿದ್ದು, ಜುಲೈ ಅಂತ್ಯದ ವೇಳೆಗೆ ಇನ್ನೂ 25 ಕೆ.ಜಿ ಸಿಗಬಹುದು. ಇಲ್ಲಿ ಗೋಡಂಬಿ ಕಾಯಿ ಬಿಡಿಸುವ ತಂತ್ರಜ್ಞಾನ ಇಲ್ಲ. ಹೀಗಾಗಿ ಹೊನ್ನಾವರಕ್ಕೆ ಒಯ್ದು ₹ 280ಕ್ಕೆ ಕೆ.ಜಿಯಂತೆ ಮಾರಾಟ ಮಾಡಿ ಬಂದಿದ್ದೆ. ಕಲ್ಲಿನಿಂದ ಜಜ್ಜಿ, ಕೈಯಲ್ಲಿ ಬೀಜ ಸುಲಿಯಬಹುದು. ಆದರೆ ಗೋಡಂಬಿಯಲ್ಲಿ ಆಸಿಡ್ ಅಂಶ ಇರುತ್ತದೆ. ಅದರ ರಸ ಕೈಗೆ ಹತ್ತಿದರೆ ಪೋಟು ಬೀಳುತ್ತದೆ ಎಂದಿದ್ದರಿಂದ ಸುಮ್ಮನಾದೆ. ಗಿಡಗಳು ದೊಡ್ಡವಾದರೆ ಎಕರೆಗೆ 2 ಕ್ವಿಂಟಲ್ ಗೋಡಂಬಿ ದೊರೆಯುತ್ತದೆ’ ಎಂದು ಅವರು ತಿಳಿಸಿದರು.

‘ಗೋಡಂಬಿಗೆ ಬೇರು ಕೊಳೆ ರೋಗ ಬಿಟ್ಟರೆ ಬೇರೆ ಯಾವುದೇ ಸಮಸ್ಯೆ ಇಲ್ಲ. ಒಣಭೂಮಿಗೆ ಹೇಳಿ ಮಾಡಿಸಿದ ಬೆಳೆ ಇದು. ಇಲ್ಲಿಯೇ ಕಾಯಿಯಿಂದ ಬೀಜ ತೆಗೆಯುವ ತಂತ್ರಜ್ಞಾನ ದೊರೆತಲ್ಲಿ ಹೆಚ್ಚಿನ ಲಾಭ ಮಾಡಬಹುದು. ನನ್ನ ಪ್ರಯೋಗಶೀಲತೆ ಗುರುತಿಸಿ ಹಿಂದಿನ ವರ್ಷ ₹ 25 ಸಾವಿರ ನಗದು ಒಳಗೊಂಡಿದ್ದ ಜಿಲ್ಲಾಮಟ್ಟದ ಉತ್ತಮ ರೈತ ಪ್ರಶಸ್ತಿ ದೊರೆತಿತ್ತು. ಜಮೀನಿನಲ್ಲಿ 30 ಮೇಕೆ, 10 ಹಸು, ನೂರು ಕೋಳಿಗಳಿವೆ. ಕೆಲವು ದಿನಗಳ ಹಿಂದೆ 400 ಕೋಳಿಗಳನ್ನು ₹ 500ಕ್ಕೆ ಕೆ.ಜಿಯಂತೆ ಮಾರಿದ್ದೇನೆ. ಹೈನುಗಾರಿಕೆ, ಮೇಕೆ–ಕುರಿ ಸಾಕಣೆಯಿಂದ ಸಾಕಷ್ಟು ಲಾಭವಾಗುತ್ತಿದೆ’ ಎಂದು ಪರಶಿವಮೂರ್ತಿ ಹೇಳಿದರು.

‘ರೈತರ ಪಾಠಶಾಲೆಯನ್ನಾಗಿಸುವೆ’

‘ಜಮೀನು ಅಚ್ಚುಕಟ್ಟು ಮಾಡಲು, ಹೊಸ ಹೊಸ ಪ್ರಭೇದದ ಸಸಿ ತರಲು, ಅವನ್ನು ನಾಟಿ ಮಾಡಿ ಬೆಳೆಸಲು ಸಾಕಷ್ಟು ಹಣ ಖರ್ಚಾಗಿದೆ. ನನ್ನ ಜಮೀನಿನಲ್ಲಿ ಬಟರ್ ಫ್ರುಟ್ (ಅವಕಾಡು/ ಬೆಣ್ಣೆಹಣ್ಣು), ಸ್ಟಾರ್ ಫ್ರುಟ್, ನೋನಿಯಂತಹ ‘ಅಪರೂಪ–ಅಪ್ರಧಾನ’ ಹಣ್ಣುಗಳನ್ನು ಬೆಳೆಯಬೇಕೆಂಬ ಬಯಕೆಗೆ ಲಾಕ್‌ಡೌನ್ ಕಡಿವಾಣ ಹಾಕಿದೆ. ಕಡಿಮೆ ನೀರು ಬಯಸುವ ಬಹುಬೆಳೆ ಪದ್ಧತಿ ಅಳವಡಿಸಿ, ಇಡೀ ತೋಟವನ್ನು ‘ಕೃಷಿ ಪ್ರವಾಸಿ ತಾಣ’ (ಅಗ್ರಿಟೂರಿಸಂ) ಮಾಡುವ ಬಯಕೆ ಇದೆ. ಅಡಿಕೆ, ತೆಂಗು, ಬಾಳೆಯಂತಹ ಬೆಳೆಗಳ ಬದಲಿಗೆ ಪರ್ಯಾಯವಾಗಿ ಏನನ್ನೆಲ್ಲ ಬೆಳೆಯಬಹುದು ಎಂಬುದರ ರೈತರ ಪಾಠಶಾಲೆಯನ್ನಾಗಿಸಬೇಕು ಅಂದುಕೊಂಡಿದ್ದೇನೆ. ತೋಟಗಾರಿಕೆ, ಅರಣ್ಯ, ಕೃಷಿ, ಪಶುಪಾಲನೆ, ರೇಷ್ಮೆ ಇಲಾಖೆಗಳ ನೆರವು ಬೇಕಿದೆ’ ಎನ್ನುತ್ತಾರೆ ಪರಶಿವಮೂರ್ತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು