ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಗೃಹಲಕ್ಷ್ಮಿ ನೋಂದಣಿ ಕುಂಠಿತವಾದರೆ ಶಿಸ್ತು ಕ್ರಮ: ಜಿಲ್ಲಾಧಿಕಾರಿ

ಸಿಡಿಪಿಒಗಳಿಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ ಎಚ್ಚರಿಕೆ
Published 31 ಜುಲೈ 2023, 14:24 IST
Last Updated 31 ಜುಲೈ 2023, 14:24 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಹಿಳಾ ಸಬಲೀಕರಣಕ್ಕಾಗಿ ಕುಟುಂಬದ ಯಜಮಾನಿಗೆ ಮಾಸಿಕ ₹ 2,000 ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆ ನೋಂದಣಿ ಕಾರ್ಯಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಕೈ ಜೋಡಿಸಿ ಸಹಕರಿಸುತ್ತಿವೆ. ಆದರೂ ನೋಂದಣಿ ಕುಂಠಿತವಾದರೆ ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು (ಸಿಡಿಪಿಒ) ನೇರ ಹೊಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ ಎಚ್ಚರಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂಬಂಧಪಟ್ಟ ಇಲಾಖೆಗಳ ಸಭೆ ನಡೆಸಿ ಅವರು ಮಾತನಾಡಿದರು.

‘ಯೋಜನೆ ನೋಂದಣಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಗುರುವಾರ ಪ್ರಗತಿ ಪರಿಶೀಲನೆ ಸಭೆ ನಡೆಯಲಿದೆ. ಅದರ ಒಳಗಾಗಿ ನೋಂದಣಿ ಪ್ರಕ್ರಿಯೆ ಚುರುಕುಗೊಳ್ಳಬೇಕು’ ಎಂದರು.

‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಸಿಡಿಪಿಒಗಳು ನೋಂದಣಿ ಕುರಿತು ಹೆಚ್ಚಿನ ಜಾಗೃತಿ ವಹಿಸಬೇಕು. ಪ್ರತಿ ವಾರ್ಡ್‌ ಹಾಗೂ ಗ್ರಾಮವಾರು ಮಾಹಿತಿ ಪಡೆದುಕೊಳ್ಳಬೇಕು. ನೋಂದಣಿ ಮಾಡಿಸಲು ಜನರನ್ನು ಪ್ರೇರೇಪಿಸಬೇಕು. ನೋಂದಣಿ ಕುಂಠಿತ ಕಂಡುಬಂದರೆ ಸಂಬಂಧಪಟ್ಟ ಸಿಡಿಪಿಒಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು. ಪ್ರತಿ ನೋಂದಣಿ ಕೇಂದ್ರಗಳಲ್ಲಿ ಕನಿಷ್ಠ 100 ನೋಂದಣಿಯನ್ನು ಪ್ರತಿದಿನ ಮಾಡಬೇಕು’ ಎಂದು ನಿರ್ದೇಶನ ನೀಡಿದರು.

‘ಯೋಜನೆ ನೋಂದಣಿಗೆ ಜಿಲ್ಲೆಯಲ್ಲಿ ಅತ್ಯತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಪಡಿತರ ಚೀಟಿ ಹೊಂದಿದ ಶೇ 70ರಷ್ಟು ಮನೆ ಯಜಮಾನಿಯರು ಯೋಜನೆ ಲಾಭ ಪಡೆಯಲು ಈವರೆಗೂ ಅರ್ಜಿ ಸಲ್ಲಿಸಿದ್ದಾರೆ. ಉಳಿದ ಅರ್ಜಿ ಸಲ್ಲಿಕೆಗಳ ಪ್ರಕ್ರಿಯೆ ಚುರುಕುಗೊಳಿಸಿ, ಮೂರು, ನಾಲ್ಕು ದಿನಗಳಲ್ಲಿ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

‘ಗ್ರಾಮೀಣ ಪ್ರದೇಶಗಳಿಂತ, ನಗರ ಪ್ರದೇಶದಲ್ಲಿ ಹೆಚ್ಚಿನ ನೋಂದಣಿ ಪ್ರಮಾಣ ಕಂಡುಬಂದಿದೆ. ನೋಂದಣಿಗೆ ಅಡಚಣೆ ಉಂಟು ಮಾಡುವ ತಾಂತ್ರಿಕ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಲು ಎಲ್ಲ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು. ಪ್ರತಿ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್‌, ಕರ್ನಾಟಕ ಒನ್‌ ಕೇಂದ್ರಗಳು ದಿನಕ್ಕೆ 100 ನೋಂದಣಿಗಳನ್ನು ಕಡ್ಡಾಯವಾಗಿ ಮಾಡಬೇಕು. ಸಿಡಿಇಒಗಳು, ಗ್ರಾಮ, ವಾರ್ಡ್‌ವಾರು ಪಡಿತರ ಚೀಟಿ ಹೊಂದಿರುವವರ ಪಟ್ಟಿ ತಯಾರಿಸಿ, ನೋಂದಣಿ ಕೇಂದ್ರಗಳಿಗೆ ಕರೆ ತರಬೇಕು’ ಎಂದರು.

‘ಬಹಳಷ್ಟು ಅರ್ಜಿಗಳು ಪಡಿತರ ಚೀಟಿಯೊಂದಿಗೆ ಆಧಾರ್‌ ಇ– ಕೆವೈಸಿ ಆಗಿರದ ಕಾರಣ ನೋಂದಣಿಯಾಗುತ್ತಿಲ್ಲ. ಪಡಿತರ ಚೀಟಿಯೊಂದಿಗೆ ಆಧಾರ್‌ ಇ–ಕೆವೈಸಿ ಮಾಡಲು ಸಂಬಂದಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಸೌಲಭ್ಯವಿದೆ. ಸಾರ್ವಜನಿಕರು ತಾಲ್ಲೂಕು ಕೇಂದ್ರ ಅಥವಾ ತಾಲ್ಲೂಕು ಕಚೇರಿಗಳಿಗೆ ಅಲೆದಾಡದೆ, ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ, ಆಧಾರ್‌ ನಂಬರ್ ನೀಡುವುದರೊಂದಿಗೆ ಬಯೋಮೆಟ್ರಿಕ್‌ ಮೂಲಕ ಇ–ಕೆವೈಸಿ ಮಾಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಇನ್ನೂ ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ವಿವರದಲ್ಲಿ, ಪುರಷರ ಹೆಸರಿನಿಂದ ಮಹಿಳೆಯರ ಹೆಸರಿಗೆ ಬದಲಾಯಿಸಲು ಅವಕಾಶವಿದೆ. ಆಹಾರ ಶಿರಸ್ತೇದಾರ್‌ ಅವರಿಗೆ ಅರ್ಜಿ ಸಲ್ಲಿಸುವ ಮೂಲಕ ಕುಟುಂಬದ ಮುಖ್ಯಸ್ಥರ ವಿವರವನ್ನು ಬದಲಾಯಿಸಿಕೊಳ್ಳಬಹುದು. ಎಲ್ಲ ತಹಶೀಲ್ದಾರ್‌ ಕಚೇರಿಗಳಲ್ಲಿ ಆಧಾರ್‌ ಸೇವಾ ಕೇಂದ್ರಗಳಿವೆ. ಯಾರ ಆಧಾರ್‌ ಸಂಖ್ಯೆ ಮೊಬೈಲ್‌ ನಂಬರ್ ಜೋಡೆಣೆಯಾಗಿಲ್ಲವೋ ಅವರು ಕೂಡಲೇ ಮೊಬೈಲ್‌ ನಂಬರ್‌ ಜೋಡಣೆ ಮಾಡಿಸಬಹುದು. ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಸಲ್ಲಿಸದೆ ಇರುವ ಎಪಿಎಲ್‌ ಪಡಿತರ ಚೀಟಿ ಹೊಂದಿರುವವರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪ ವಿಭಾಗಾಧಿಕಾರಿ ಎಂ.ಕಾರ್ತಿಕ್‌, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಆರ್‌.ಬಣಕಾರ್‌, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್‌ ಇದ್ದರು.

ಜಿಲ್ಲೆಯಲ್ಲಿ ಒಟ್ಟು 390204 ಪಡಿತರ ಚೀಟಿ ಹೊಂದಿರುವ ಕುಟುಂಬಗಳು ಇವೆ. ಇದರಲ್ಲಿ ಜುಲೈ 30ರ ಅಂತ್ಯಕ್ಕೆ 273291 ಕುಟುಂಬದ ಯಜಮಾನಿಯರು ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ನೋಂದಾಯಿಸಿದ್ದಾರೆ. ಜಿಲ್ಲೆಯಲ್ಲಿ ಶೇ 70ರಷ್ಟು ಪ್ರಗತಿ ಸಾಧಿಸಲಾಗಿದೆ

- ದಿವ್ಯಪ್ರಭು ಜಿ.ಆರ್‌.ಜೆ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT