ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಳ್ಳಕೆರೆ: ಗುಲಾಬಿ ಹೂವಿನಿಂದ ಪ್ರತಿದಿನವೂ ಆದಾಯ

Published 4 ಸೆಪ್ಟೆಂಬರ್ 2024, 6:45 IST
Last Updated 4 ಸೆಪ್ಟೆಂಬರ್ 2024, 6:45 IST
ಅಕ್ಷರ ಗಾತ್ರ

ಚಳ್ಳಕೆರೆ: ಮಳೆಯಾಶ್ರಿತ ಭೂಮಿಯಲ್ಲಿ ಶೇಂಗಾ ಬೆಳೆದು ಬಾರಿ ನಷ್ಟ ಅನುಭವಿಸಿದ್ದ ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮದ ರೈತ ಪ್ರದೀಪ್, ಇದೀಗ ಮಿರಬಲ್ ತಳಿಯ ಗುಲಾಬಿ ಬೆಳೆದು ಬದುಕು ಅರಳಿಸಿಕೊಂಡಿದ್ದಾರೆ.

ಹಣ್ಣು, ತರಕಾರಿ ಹಾಗೂ ಹೂವಿನ ಬೆಳೆ ಬೆಳೆಯುವ ಸಲುವಾಗಿ ಕೊಳವೆಬಾವಿ ಕೊರೆಯಿಸಿ ಅಭ್ಯವಾದ ಅತ್ಯಲ್ಪ ನೀರಿಗೆ ಡ್ರಿಪ್ ವಿಧಾನದ ಮೂಲಕ ನೀರುಣಿಸುತ್ತಿದ್ದಾರೆ. 3 ಎಕರೆ ಒಣ ಭೂಮಿಯನ್ನು ನೀರಾವರಿ ಪ್ರದೇಶವನ್ನಾಗಿ ಪರಿವರ್ತಿಸಿದ್ದಾರೆ. ಪ್ರತಿ ಗಿಡಕ್ಕೆ ₹ 15ರಂತೆ 6 ಸಾವಿರ ಗುಲಾಬಿ ಸಸಿಯನ್ನು ತಮಿಳುನಾಡಿನಿಂದ ತಂದು ನಾಟಿ ಮಾಡಿದ್ದಾರೆ. 3 ಎಕರೆ ಗುಲಾಬಿ ತೋಟ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆಯ ಸಹಾಯಧನ ಬಳಕೆ ಮಾಡಿಕೊಳ್ಳಲಾಗಿದೆ.

‘ನಾಟಿ ಮಾಡಿದ 5-6 ತಿಂಗಳಲ್ಲಿ ಗಿಡ ಹೂವು ಬಿಡಲು ಆರಂಬಿಸಿತು. ಬೆಳೆ ಇಟ್ಟು ಈಗ 8 ತಿಂಗಳು ಆಗಿದೆ. ದಿನ ಬಿಟ್ಟು ದಿನಕ್ಕೆ 80–100 ಕೆ.ಜಿ. ಹೂವು ಕಟಾವಿಗೆ ಬರುತ್ತದೆ. ಪ್ರತಿ ಕೆ.ಜಿ ₹ 70–100ಕ್ಕೆ ಮಾರಾಟವಾಗುತ್ತಿದೆ. 6 ಸಾವಿರ ಕೆ.ಜಿ ಹೂವು ಚಿತ್ರದುರ್ಗದ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದೇನೆ. ಈಗಾಗಲೇ ಬೆಳೆಗೆ ಮಾಡಿದ ಖರ್ಚು ಬಿಟ್ಟು ₹  3 ಲಕ್ಷಕ್ಕೂ ಹೆಚ್ಚು ಆದಾಯ ಪಡೆಯಲಾಗಿದೆ‘ ಪ್ರದೀಪ್‌ ಹೇಳಿದರು.

ಪ್ರದೀಪ್‌ ಅವರಿಗೆ ಇನ್ನೂ 4-5 ವರ್ಷ ನಿರಂತರ ಹೂವು ಬರುತ್ತದೆ. ಇದರಿಂದ ಕನಿಷ್ಠ ₹ 4-5 ಲಕ್ಷ ಆದಾಯವನ್ನು ಅವರು ನಿರೀಕ್ಷಿಸಿದ್ದಾರೆ.  ಬೇಸಾಯ, ಕೂಲಿ, ಗೊಬ್ಬರ, ಔಷಧಿ, ಸಸಿ ಖರೀದಿ ಸೇರಿ ಪ್ರತಿ ಎಕರೆಗೆ ಕನಿಷ್ಠ ಲಕ್ಷದಂತೆ 3 ಎಕರೆಗೆ ವೆಚ್ಚ ಮಾಡಿದ್ದ ಬಂಡವಾಳ ಹೂವು ಮಾರಾಟದಿಂದ ಬಂದಿದೆ.

‘ನರೇಗಾ ಯೋಜನೆಯಡಿ ಸಹಾಯಧನದಲ್ಲಿ ನನ್ನಿವಾಳ, ಯಲಗಟ್ಟೆ, ರಾಮಜೋಗಿಹಳ್ಳಿ, ನಾಯಕನಹಟ್ಟಿ ಮುಂತಾದ ಗ್ರಾಮ ಸೇರಿ ತಾಲ್ಲೂಕಿನಲ್ಲಿ ಒಟ್ಟು 90 ಎಕರೆ ಪ್ರದೇಶದಲ್ಲಿ ಗುಲಾಬಿ ಬೆಳೆಯಲಾಗಿದೆ. ಹನಿನೀರಾವರಿ ಮತ್ತು ಹೂವಿನ ತೋಟ ನಿರ್ಮಿಸಿಕೊಳ್ಳುವ ಆಸಕ್ತ ಸಣ್ಣ ರೈತರು ಹಾಗೂ ಮಹಿಳೆಯರಿಗೆ ನರೇಗಾ ಯೋಜನೆಯಡಿ ಕೂಲಿ ಮತ್ತು ಸಾಮಗ್ರಿ ಬಾಬ್ತು ಸೇರಿ ಪ್ರತಿ ಎಕರೆಗೆ ಲಕ್ಷ ಇಲಾಖೆಯಿಂದ ಸಹಾಯಧನ ನೀಡಲಾಗುವುದು’ ಎಂದು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ ಹೇಳಿದರು.

‘ಗುಲಾಬಿ, ಬಟನ್ ರೋಜ್‌ಗೆ ಹರಡುವ ಬ್ಲೈಟ್, ಎಲೆಚುಕ್ಕೆ, ಬೂದಿರೋಗಕ್ಕೆ ಸೂಕ್ತ ಔಷಧಿ ಸಿಂಪರಣೆ ಹಾಗೂ ನಿರ್ವಹಣೆ ಮಾಡಿದ್ದ ಅತೀ ಕಡಿಮೆ ಅವಧಿಯಲ್ಲಿ ಗುಲಾಬಿಯಿಂದ ಅಧಿಕ ಆದಾಯ ಪಡೆಯಬಹುದು‘ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT