ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಃಸ್ಥಿತಿಯಲ್ಲಿ ಚಿಕ್ಕೋಬನಹಳ್ಳಿ ಸರ್ಕಾರಿ ಶಾಲೆ

ಗಮನಹರಿಸದ ಶಿಕ್ಷಣ ಇಲಾಖೆ, ಚಾವಣಿ ಬೀಳುವ ಆತಂಕ
Last Updated 1 ಸೆಪ್ಟೆಂಬರ್ 2020, 7:51 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ಚಿಕ್ಕೋಬನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ತೀವ್ರ ಶಿಥಿಲಾವಸ್ಥೆ ತಲುಪಿದ್ದು, ಯಾವುದೇ ಕ್ಷಣದಲ್ಲೂ ಕುಸಿಯುವ ಆತಂಕ ಎದುರಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

‘ಚಿಕ್ಕೋಬನಹಳ್ಳಿ ಚಿತ್ರದುರ್ಗ-
ಬಳ್ಳಾರಿ ಜಿಲ್ಲೆ ಗಡಿ ಗ್ರಾಮವಾಗಿದ್ದು, ಪರಿಶಿಷ್ಟ ಜಾತಿ, ಪಂಗಡದ ಜನರು ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ. ಕೂಲಿ ಕಾರ್ಮಿಕರು ಇಲ್ಲಿ ಹೆಚ್ಚಾಗಿದ್ದು, ಸರ್ಕಾರಿ ಶಾಲೆಯನ್ನು ಹೆಚ್ಚಾಗಿ ಅಲವಲಂಬಿಸಿದ್ದಾರೆ. ಕೊರೊನಾ ಎದುರಾದ ನಂತರ ಅವರು ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದು, ಮಕ್ಕಳ ವಿದ್ಯಾಭ್ಯಾಸ ಮುಂದುವರಿಸುವುದು ಕಷ್ಟಕರ ಎಂಬ ಮಟ್ಟವನ್ನು ಮುಟ್ಟಿದ್ದಾರೆ. ಈ ಸ್ಥಿತಿಯಲ್ಲಿ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಸೌಕರ್ಯಗಳ ಕೊರತೆ ಪೋಷಕರ ಆತಂಕಕ್ಕೆ ಬರೆ ಎಳೆಯುತ್ತಿದೆ’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಒ. ಕರಿಬಸಪ್ಪ ದೂರಿದರು.

‘ಈ ಶಾಲೆಯಲ್ಲಿ 230 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಶಾಲೆ ಆರಂಭವಾಗಿ 85 ವರ್ಷ ಕಳೆದಿದೆ. ಸುಸಜ್ಜಿತ ಕೊಠಡಿಗಳು, ಶೌಚಾಲಯ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಆಟದ ಮೈದಾನ ವ್ಯವಸ್ಥೆ ಇಲ್ಲ. ಆದರೆ, ಗ್ರಾಮಸ್ಥರು, ಶಿಕ್ಷಕರ ಪ್ರೋತ್ಸಾಹದಿಂದಾಗಿ ಹಲವು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ರಾಜ್ಯಮಟ್ಟದ ಸಾಧನೆಗಳನ್ನು ಮಾಡಿದ್ದಾರೆ. ಮೈದಾನ ವ್ಯವಸ್ಥೆಗೆ ಮನವಿ ಮಾಡಿದ್ದರೂ ಸಿಕ್ಕಿಲ್ಲ’ ಎಂದು ದೂರಿದರು.

‘ಶಾಲಾ ಕೊಠಡಿಗಳ ಚಾವಣಿ ಮತ್ತು ಗೋಡೆಗಳು ಕುಸಿಯುವ ಹಂತದಲ್ಲಿವೆ. ಯಾವಾಗ ಬೇಕಾದರೂ ಬೀಳುವ ಆತಂಕ ಎದುರಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು ಮಳೆಗಾಲದಲ್ಲಿ ಭಯದಿಂದ ಒಳಗಡೆ ಕುಳಿತುಕೊಳ್ಳುವ ಪರಿಸ್ಥಿತಿಯಿದೆ. ದುರಸ್ತಿಗಾಗಿ ಶಿಕ್ಷಣ ಇಲಾಖೆಗೆ, ಜಿಲ್ಲಾ ಪಂಚಾಯಿತಿ, ಶಾಸಕರು, ಸಂಸದರಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಎಸ್‌ಡಿಎಂಸಿ ಉಪಾಧ್ಯಕ್ಷೆ ಅಮೃತಾ, ಸದಸ್ಯ ಕುಮಾರಸ್ವಾಮಿ, ಜಿ.ತಿಪ್ಪೇಸ್ವಾಮಿ ಹೇಳಿದರು.

ಶಾಸಕರು, ಪರಿಷತ್ ಸದಸ್ಯರು ತಮ್ಮ ವ್ಯಾಪ್ತಿಯ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕು ಎಂದು ಸರ್ಕಾರ ನಿರ್ದೇಶನ ನೀಡಿದೆ. ಈ ಯೋಜನೆಯಲ್ಲಿ ಅಥವಾ ಬೇರೆ ಅನುದಾನದಲ್ಲಿ ಶಾಲಾ ಕೊಠಡಿಗಳ ದುರಸ್ತಿ ಮತ್ತು ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT