ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ: 4 ತಿಂಗಳಲ್ಲಿ 164 ಬಾಲ ಗರ್ಭಿಣಿಯರು ಪತ್ತೆ

ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲು ಸಮನ್ವಯತೆ ಕೊರತೆ, ಹೆಚ್ಚುತ್ತಿರುವ ಸಮಸ್ಯೆ
Published : 24 ಆಗಸ್ಟ್ 2024, 7:08 IST
Last Updated : 24 ಆಗಸ್ಟ್ 2024, 7:08 IST
ಫಾಲೋ ಮಾಡಿ
Comments

ಚಿತ್ರದುರ್ಗ: ಜಿಲ್ಲೆಯಲ್ಲಿ ಕಳೆದ 4 ತಿಂಗಳುಗಳಲ್ಲಿ 18 ವರ್ಷ ತುಂಬದ 164 ಬಾಲಕಿಯರು ಗರ್ಭಿಣಿಯರಾಗಿದ್ದು ಬಹಿರಂಗಗೊಂಡಿದೆ. ಅವರು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವುದು ಕಂಡುಬಂದಿದೆ.

ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್‌ಸಿಎಚ್‌) ಪೋರ್ಟಲ್‌ನಲ್ಲಿ ದಾಖಲಾಗಿರುವ ಮಾಹಿತಿ ಅನ್ವಯ ಬಾಲ ಗರ್ಭಿಣಿಯರ ಸಂಖ್ಯೆ ಏರುಗತಿಯಲ್ಲೇ ಸಾಗುತ್ತಿದೆ. ಏಪ್ರಿಲ್‌ನಿಂದ ಜುಲೈವರೆಗೆ ಹಿರಿಯೂರು ತಾಲ್ಲೂಕಿನಲ್ಲಿ ಅತೀ ಹೆಚ್ಚು ಅಂದರೆ 36 ಮಂದಿ ಬಾಲ ಗರ್ಭಿಣಿಯರು ಪತ್ತೆಯಾಗಿದ್ದಾರೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 35, ಚಳ್ಳಕೆರೆ ತಾಲ್ಲೂಕಿನಲ್ಲಿ 29, ಚಿತ್ರದುರ್ಗ 28, ಹೊಳಲ್ಕೆರೆ 19, ಹೊಸದುರ್ಗ ತಾಲ್ಲೂಕಿನಲ್ಲಿ 17 ಮಂದಿ ಪತ್ತೆಯಾಗಿದ್ದಾರೆ.

ಮೆಜಾರಿಟಿಗೆ ಬರುವ ಮುನ್ನವೇ ಬಾಲಕಿಯರು ಮದುವೆಯಾಗಿ ಗರ್ಭಿಣಿಯರಾಗುತ್ತಿರುವ ಸಮಸ್ಯೆಗೆ ಮೂಲದಲ್ಲೇ ಕಡಿವಾಣ ಹಾಕಲು ಜಿಲ್ಲಾ ಮಟ್ಟದಲ್ಲಿ ಕೇಂದ್ರ ಕಾರ್ಯಪಡೆ ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈಚೆಗೆ ಸೂಚನೆ ನೀಡಿದ್ದಾರೆ. ಆದರೆ, ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆಯ ಕಾರಣ ಸಮಸ್ಯೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯ ಕಾರಣ ಬಾಲ್ಯವಿವಾಹಗಳು ನಡೆಯುತ್ತಲೇ ಇವೆ. ಪರಿಣಾಮವಾಗಿ ಬಾಲ ಗರ್ಭಿಣಿಯರ ಪ್ರಕರಣಗಳು ಹೆಚ್ಚುತ್ತಿವೆ. ಗರ್ಭಿಣಿಯರು ಆಸ್ಪತ್ರೆಗೆ ಬಂದಾಗ ತಪಾಸಣೆ ಮಾಡಿದ ವೈದ್ಯರಿಗೆ ಮೈನರ್‌ ಎಂಬ ವಿಷಯ ಗೊತ್ತಾಗುತ್ತದೆ. ಈ ಕುರಿತು ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು, ಗರ್ಭಧಾರಣೆಗೆ ಕಾರಣಕರ್ತನಾಗಿರುವ ವ್ಯಕ್ತಿ ವಿರುದ್ಧ ಪೋಕ್ಸೊ ಅಡಿ ಪ್ರಕರಣ ದಾಖಲಿಸಿ, ಬಾಲಕಿಗೆ ಪುನರ್ವಸತಿ ಕಲ್ಪಿಸಬೇಕು ಎಂಬ ನಿಯಮವಿದೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಈ ಪಕ್ರಿಯೆ ಪೂರ್ಣಗೊಳಿಸಲು ತಡ ಮಾಡುತ್ತಿರುವ ಕಾರಣ ಸಮಸ್ಯೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ’ ಎಂದು ಸಾಮಾಜಿಕ ಹೋರಾಟಗಾರರೊಬ್ಬರು ದೂರಿದರು.

‘ಜಿಲ್ಲೆಯ ಆರ್‌ಸಿಎಚ್‌ ಅಧಿಕಾರಿ ಪೋರ್ಟಲ್‌ ನಿರ್ವಹಣೆ ಮಾಡುವುದರಲ್ಲೇ ಗಮನ ಕೇಂದ್ರೀಕರಿಸಿರುತ್ತಾರೆ. ಬಾಲಕಿ ಗರ್ಭಿಣಿ ಎಂದು ಪತ್ತೆಯಾದ ಕೂಡಲೇ ಪೊಲೀಸರ ಗಮನಕ್ಕೆ ತಂದು ಕಾನೂನು ಪ್ರಕ್ರಿಯೆ ನಡೆಸಲು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಈ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಕುಟುಂಬದ ಆರ್ಥಿಕ ಸ್ಥಿತಿಗತಿಯ ಕಾರಣ ಪಾಲಕರು 10ನೇ ತರಗತಿ ಮುಗಿಯುತ್ತಲೇ ತಮ್ಮ ಹೆಣ್ಣುಮಕ್ಕಳಿಗೆ ಮದುವೆ ಮಾಡುತ್ತಿದ್ದಾರೆ. ಶಾಲೆ ಬಿಟ್ಟ ಮಕ್ಕಳ ಮೇಲೆ ನಿಗಾ ವಹಿಸುವಂತೆ ಸರ್ಕಾರ ಸೂಚಿಸಿದ್ದು, ಸ್ಥಳೀಯ ಪಿಡಿಒ ನೇತೃತ್ವದಲ್ಲಿ ಆಶಾ, ಆರೋಗ್ಯ ಕಾರ್ಯಕರ್ತೆಯರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಆದರೂ ಸಮಸ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ಬಾಲಕಿ ವಿವಾಹದ ನಂತರ ಇಲ್ಲವೇ ಗರ್ಭಿಣಿಯಾದ ಬಳಿಕವಷ್ಟೇ ಸಮಿತಿ ಸದಸ್ಯರಿಗೆ ಮಾಹಿತಿ ದೊರೆಯುತ್ತಿದೆ. ಬಾಲ್ಯ ವಿವಾಹಗಳನ್ನು ತಡೆಯಲು ವಿಫಲರಾಗುತ್ತಿದ್ದಾರೆ. ಸಮಸ್ಯೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಈ ಕುರಿತ ಮಾಹಿತಿ ಜಾಲವನ್ನು ಗಟ್ಟಿಗೊಳಿಸಬೇಕು’ ಎಂದು ವಕೀಲ ಮಲ್ಲಿಕಾರ್ಜುನ್‌ ತಿಳಿಸಿದರು.

ಬಾಲ ಗರ್ಭಿಣಿಯರ ಸಮಸ್ಯೆಗೆ ಕಡಿವಾಣ ಹಾಕಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಮನ್ವಯತೆಯಿಂದ ಕೆಲಸ ಮಾಡುವಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಟಿ. ವೆಂಕಟೇಶ್‌, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT